ಮಡಿಕೇರಿ, ಫೆ.25: ಕಾಫಿ ತೋಟಕ್ಕೆ ನೀರು ಹಾಯಿಸಲೆಂದು ಪಂಪ್ಸೆಟ್ ಸರಿಮಾಡುವ ಸಲುವಾಗಿ ಕೆರೆಯ ಬಳಿಗೆ ತೆರಳಿದ್ದ ವ್ಯಕ್ತಿಯೋರ್ವರು ಕಾಲುಜಾರಿ ಕೆರೆಗೆ ಬಿದ್ದು, ದುರ್ಮರಣ ಹೊಂದಿರುವ ಘಟನೆ ಸಂಭವಿಸಿದೆ. ಮೂಲತಃ ಪಾರಾಣೆ ಬಳಿಯ ಬಾವಲಿ ಗ್ರಾಮದ ನಿವಾಸಿ, ಮಡಿಕೇರಿಯ ರೇಸ್ಕೋರ್ಸ್ ರಸ್ತೆಯಲ್ಲಿ ನೆಲೆಸಿದ್ದ ಕುಟ್ಟನ ಎಂ. ತಿಮ್ಮಯ್ಯ (72) ಅವರು ದುರ್ಮಣಕ್ಕೀಡಾದ ದುರ್ದೈವಿಯಾಗಿದ್ದಾರೆ.
ಮಾಜಿ ಯೋಧ ಹಾಗೂ ಎಸ್ಬಿಎಂ ನಿವೃತ್ತ ಉದ್ಯೋಗಿಯಾಗಿದ್ದ ತಿಮ್ಮಯ್ಯ ಅವರು ಮಡಿಕೇರಿಯಲ್ಲಿ ನೆಲೆಸಿದ್ದು; ಬಾವಲಿ ಗ್ರಾಮದಲ್ಲಿ ಕಾಫಿ ತೋಟ ಹೊಂದಿದ್ದಾರೆ. ಮಡಿಕೇರಿಯಿಂದ ತೋಟಕ್ಕೆ ತೆರಳಿ ತೋಟಕ್ಕೆ ನೀರು ಹಾಯಿಸಲು ಮುಂದಾದಾಗ ಪಂಪ್ಸೆಟ್ ಫುಟ್ವಾಲ್ನಲ್ಲಿ ಕಸ - ಕಡ್ಡಿಗಳು ತುಂಬಿದ್ದರಿಂದ ಅದನ್ನು ಸರಿಪಡಿಸಲು ಪ್ರಯತ್ನಿಸಿದ್ದಾರೆ. ಈ ಸಂದರ್ಭ ಕಾಲು ಜಾರಿ ಬಿದ್ದು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವದಾಗಿ ತಿಳಿದುಬಂದಿದೆ. ಪ್ರತಿದಿನ ಸಂಜೆ ವೇಳೆಗೆ ಮನೆಗೆ ಬರುವ ತಿಮ್ಮಯ್ಯ ಅವರು ರಾತ್ರಿಯಾದರೂ ಬಾರದಿದ್ದಾಗ ಫೋನ್ ಕರೆ ಕೂಡ ಸ್ವೀಕರಿಸದೇ ಇದ್ದಾಗ ಪುತ್ರ ಕೆ.ಟಿ. ಪ್ರಶಾಂತ್ ತೋಟಕ್ಕೆ ತೆರಳಿ ಹುಡುಕಾಡಿದ್ದಾರೆ. ಈ ಸಂದರ್ಭ ಮೊಬೈಲ್, ಚಪ್ಪಲಿ ಕೆರೆ ಬಳಿ ಇದ್ದುದನ್ನು ಗಮನಿಸಿ ನಾಪೋಕ್ಲು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇಂದು ಬೆಳಿಗ್ಗೆ ಪೊಲೀಸರು ಸಾರ್ವಜನಿಕರೊಂದಿಗೆ ಸೇರಿ ಕೆರೆಯಲ್ಲಿದ್ದ ಮೃತದೇಹವನ್ನು ಹೊರತೆಗೆದು ಮರಣೋತ್ತ ರ ಪರೀಕ್ಷೆ ನಡೆಸಿ ವಾರಿಸುದಾರರಿಗೆ ಒಪ್ಪಿಸಿದ್ದಾರೆ. ಆಕಸ್ಮಿಕ ಸಾವು ಪ್ರಕರಣ ದಾಖಲು ಮಾಡಲಾಗಿದೆ. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.