ಸಿದ್ದಾಪುರ, ಫೆ. 24: ಇತ್ತೀಚೆಗೆ ಹೊರ ರಾಜ್ಯದ ಕಾರ್ಮಿಕರಿಂದ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟ ಅಪ್ರಾಪ್ತ ಬಾಲಕಿ ಸಂಧ್ಯಾಳ ನಿವಾಸಕ್ಕೆ ಕಾಂಗ್ರೆಸ್ ಪಕ್ಷದ ನೂತನ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ಸಂದÀರ್ಭದಲ್ಲಿ ತೋಟದ ಕಾರ್ಮಿಕರು ಮಾತನಾಡಿ, ನಾವುಗಳು ತಲ ತಲಾಂತರಗಳಿಂದ ತೋಟದ ಲೈನ್ ಮನೆಯಲ್ಲಿ ವಾಸವಾಗಿದ್ದೇವೆ. ಆದರೆ ಇತ್ತೀಚೆಗೆ ಹೊರ ರಾಜ್ಯದ ಕಾರ್ಮಿಕರು ಕಾಲೇಜಿನಿಂದ ಹಿಂತಿರುಗುತ್ತಿದ್ದ ಬಾಲಕಿ ಸಂಧ್ಯಾಳನ್ನು ಅಪಹರಿಸಿ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ. ಸಂಧ್ಯಾ ಮೃತಪಟ್ಟು ಎರಡು ವಾರಗಳು ಕಳೆದರೂ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿ ಭೇಟಿ ನೀಡಿಲ್ಲ ಎಂದು ಅಳಲು ತೋಡಿಕೊಂಡರು. ಕೂಡಲೇ ಸರಕಾರದಿಂದ ಪರಿಹಾರ ಒದಗಿಸಿಕೊಡಬೇಕೆಂದು ಮನವಿ ಮಾಡಿದರು. ಈ ಬಗ್ಗೆ ಕೆ.ಕೆ. ಮಂಜುನಾಥ್ ದೂರವಾಣಿ ಮುಖಾಂತರ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ ಮೃತ ಸಂಧ್ಯಾಳ ಕುಟುಂಬಕ್ಕೆ ಶೀಘ್ರವಾಗಿ ಪರಿಹಾರ ಒದಗಿಸಿಕೊಡ ಬೇಕೆಂದು ಮನವಿ ಮಾಡಿದರು. ಅಲ್ಲದೆ ಸಂದ್ಯಾಳ ಕುಟುಂಬದ ಓರ್ವ ಸದಸ್ಯನಿಗೆ ಸರಕಾರಿ ಉದ್ಯೋಗಕ್ಕಾಗಿ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ ತನಗೆ ನೀಡುವಂತೆ ಸೂಚಿಸಿದರು. ಘಟನೆಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರುವದಾಗಿ ತಿಳಿಸಿದರು.

ಈ ಸಂದರ್ಭ ತೋಟ ಕಾರ್ಮಿಕರು ನಿವೇಶನ ಹಾಗೂ ಪಡಿತರ ಚೀಟಿಯನ್ನು ಒದಗಿಸಿಕೊಡ ಬೇಕೆಂದು ಮನವಿ ಮಾಡಿದರು. ಭೇಟಿಯ ಸಂದರ್ಭ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ. ಸಲಾಂ, ಕುಶಾಲನಗರ ಬ್ಲಾಕ್ ಅಧ್ಯಕ್ಷ ವಿ.ಪಿ. ಶಶಿಧರ್, ತಾ.ಪಂ. ಸದಸ್ಯೆ ಚಿನ್ನಮ್ಮ, ವಲಯ ಅಧ್ಯಕ್ಷ ಮೂಸ, ಜಿಲ್ಲಾ ಅಲ್ಪ ಸಂಖ್ಯಾ ಘಟಕದ ಅಧ್ಯಕ್ಷ ಜೋಸೆಫ್ ಶ್ಯಾಮ್ ಹಾಗೂ ಗ್ರಾ.ಪಂ. ಸದಸ್ಯರುಗಳು ಹಾಜರಿದ್ದರು.

ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ನೂತನ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್ ಭೇಟಿ ನೀಡಿ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು.

ಕುಟುಂಬದ ಸಮಸ್ಯೆಗಳನ್ನು ಆಲಿಸಿದ ಅವರು ಸರಕಾರದಿಂದ ಸಿಗುವ ಪರಿಹಾರದ ಹಣವನ್ನು ಕೂಡಲೇ ಕೊಡಿಸಲು ಪ್ರಯತ್ನಿಸುವ ದಾಗಿ ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರುವದಾಗಿ ತಿಳಿಸಿದ ಅವರು, ಮೃತ ಸಂಧ್ಯಾಳ ಕುಟುಂಬಕ್ಕೆ ಪಡಿತರ ಚೀಟಿ ಇಲ್ಲದಿರುವ ಬಗ್ಗೆ ಸಂಬಂಧ ಪಟ್ಟ ವೀರಾಜಪೇಟೆ ಆಹಾರ ಇಲಾಖೆಯ ಉಪ ನಿರೀಕ್ಷಕರ ಬಳಿ ದೂರವಾಣಿ ಕರೆಮಾಡಿ ಮಾತನಾಡಿ ಕೂಡಲೇ ಪಡಿತರ ಚೀಟಿ ನೀಡುವಂತೆ ಸೂಚಿಸಿದರು. ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಉಪಾಧ್ಯಕ್ಷೆ ಪುಷ್ಪವಲ್ಲಿ ಮಾತನಾಡಿ ಸಂಧ್ಯಾಳ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಕುರಿತು ರಾಜ್ಯ ಸರ್ಕಾರದ ಗಮನಕ್ಕೆ ತರುವ ಮುಖಾಂತರ ಮೃತ ಸಂಧ್ಯಾಳ ಕುಟುಂಬಕ್ಕೆ ಸೂಕ್ತರೀತಿಯಲ್ಲಿ ಸ್ಪಂದಿಸುವದಾಗಿ ತಿಳಿಸಿದರು. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾಗಿ ಸೂಕ್ತ ಸೌಲಭ್ಯಗಳ ಒದಗಿಸಿಕೊಡುವಂತೆ ಮನವಿ ಮಾಡಲಾಗುವದೆಂದು ಹೇಳಿದರು.

ಈ ಸಂದರ್ಭ ಕಾಂಗ್ರೆಸ್ ಮಹಿಳಾ ಘಟಕದ ಪದಾಧಿಕಾರಿ ಗಳಾದ ಜುಲೈಕಾಬಿ, ಶೈಲಾ ಕುಟ್ಟಪ್ಪ, ಪ್ರೇಮಾ ಕೃಷ್ಣಪ್ಪ, ಮಿನಾಜ್, ಪ್ರವೀಣ್, ಫ್ಯಾನ್ಸಿ ಪಾರ್ವತಿ, ಶಶಿ, ಇಂದಿರಾ, ಚಂದ್ರಿಕಾ, ರಿಹಾನಾ ಬಾನು, ತಾಹಿರಾ ಹಫೀಜ್, ಮುಮ್ತಾಜ್ ಬೇಗನ್ ಹಾಜರಿದ್ದರು.