ಮಕ್ಕಂದೂರು, ಮುಕ್ಕೋಡ್ಲು, ಕಾಲೂರು ಗ್ರಾಮಸ್ಥರ ಆಗ್ರಹ

ಮಡಿಕೇರಿ, ಫೆ. 24: ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಈಗಾಗಲೇ ಜನರು ತತ್ತರಿಸಿ ಹೋಗಿದ್ದು, ಹಲವರು ಮನೆ, ಮಠಗಳನ್ನು ಕಳೆದುಕೊಂಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಮಕ್ಕಂದೂರಿಗೆ ರೈಲ್ವೆ ಮಾರ್ಗ ನಿರ್ಮಿಸುವದು ಗಾಯದ ಮೇಲೆ ಬರೆ ಎಳೆದಂತೆ ಎಂದು ಮಕ್ಕಂದೂರು, ಮುಕ್ಕೋಡ್ಲು, ಕಾಲೂರು ಗ್ರಾಮದ ಪ್ರಮುಖರಾದ ಹಂಚೆಟ್ಟಿರ ಮನು ಮುದ್ದಪ್ಪ, ಕಾಳಚಂಡ ಪವನ್ ತಿಮ್ಮಯ್ಯ ಹಾಗೂ ಗ್ರಾಮಸ್ಥರು ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರುಗಳು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಅನೇಕರು ಸಂಕಷ್ಟಕ್ಕೆ ಸಿಲುಕಿದ್ದು, ಈ ಪರಿಸ್ಥಿತಿಯಲ್ಲಿ ರೈಲು ಮಾರ್ಗ ಮತ್ತು ಚತುಷ್ಪಥ ರಸ್ತೆಯ ಪ್ರಸ್ತಾಪಗಳು ಗ್ರಾಮೀಣ ಜನರನ್ನು ಮತ್ತಷ್ಟು ಕಷ್ಟಕ್ಕೆ ಸಿಲುಕಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೊಡಗಿನ ಜನ ಪ್ರಕೃತಿ ನಿರ್ಮಿತ ಅಂಕು ಡೊಂಕು ರಸ್ತೆಗಳ ಚಾಲನೆಯನ್ನು ಇಷ್ಟಪಡುತ್ತಾರೆ. ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಮುಕ್ಕೋಡ್ಲು, ಕಾಲೂರು, ಮಕ್ಕಂದೂರಿಗೆ ಸರಿಯಾದ ಪರಿಹಾರ ಇನ್ನೂ ವಿತರಣೆಯಾಗಿಲ್ಲ, ಅಲ್ಲದೆ ಇನ್ನೆರಡು ತಿಂಗಳಲ್ಲಿ ಮಳೆಗಾಲ ಪ್ರಾರಂಭವಾಗಲಿದ್ದು, ಜೂನ್‍ನಿಂದ ನವೆಂಬರ್ ತಿಂಗಳವರೆಗೆ ಈ ಗ್ರಾಮದಲ್ಲಿ ವಾಸಿಸಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಗ್ರಾಮಸ್ಥರು ಮುಂದಿನ ನೆಲೆ ಮತ್ತು ಜೀವನ ಕ್ರಮದ ಬಗ್ಗೆ ಆತಂಕದಲ್ಲಿದ್ದಾರೆ.

ಸಂಪೂರ್ಣ ಮನೆ ಕಳೆದುಕೊಂಡವರಿಗೆ ಸದ್ಯದ ಮಟ್ಟಿಗೆ ಮನೆ ನಿರ್ಮಾಣದ ಕಾರ್ಯ ಪ್ರಾರಂಭದ ಹಂತದಲ್ಲಿದ್ದು, ಇನ್ನೂ ಭಾಗಶಃ, ತೀವ್ರ, ಮನೆಯ ಹಿಂಬದಿಯ ಬರೆ, ಗುಡ್ಡ ಬಿರುಕು ಬಿಟ್ಟು ಜೂನ್ ಮಳೆಯ ಪ್ರಾರಂಭದಲ್ಲಿಯೇ ಕುಸಿಯುವ ಹಂತದಲ್ಲಿ ಇದೆ. ಅಲ್ಲದೆ, ಕೃಷಿ ಭೂಮಿಗಳು ಸಂಪೂರ್ಣ ನಾಶವಾಗಿದ್ದು, ಬೆಳೆಗಳು ಇರುವ ಕಡೆಗಳಲ್ಲಿಯೂ ವಿಪರೀತ ಮಳೆಯಿಂದಾಗಿ ಕಾಫಿ ಸಂಪೂರ್ಣ ಉದುರಿ ಹೋಗಿದೆ. ಒಳ್ಳೆಮೆಣಸು ಬಳ್ಳಿಗಳು ಸಂಪೂರ್ಣ ನಾಶವಾಗಿದ್ದು, ಭತ್ತ ಬೆಳೆಗಳು ಹೊಳೆ, ಚರಂಡಿಗಳ ಪಾಲಾಗಿದೆ.

ಸರ್ಕಾರದಿಂದ ಕೇವಲ ರೂ. 3,800 ಮಾತ್ರ ಪರಿಹಾರವಾಗಿ ಸಿಕ್ಕಿದ್ದು, ಇದರಲ್ಲಿ ಸಂತ್ರಸ್ತರು ಏನು ಮಾಡಬೇಕು ಎಂದು ಮನು ಮುದ್ದಪ್ಪ ಹಾಗೂ ಕಾಳಚಂಡ ಪವನ್ ಪ್ರಶ್ನಿಸಿದ್ದಾರೆ. ಹಾನಿ ಸಂಭವಿಸಿದ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ಜೂನ್‍ನಿಂದ ನವೆಂಬರ್‍ವರೆಗೆ ಊರಿಗೆ ಊರೇ ಗುಳೆ (ವಲಸೆ) ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಯಾರೊಬ್ಬ ಅಧಿಕಾರಿಗಳಿಗೂ ಈ ಬಗ್ಗೆ ಚಿಂತೆ ಇಲ್ಲದಂತಾಗಿದೆ. ಕಾವೇರಮ್ಮನ ಮಣ್ಣಿನಲ್ಲಿ ಹುಟ್ಟಿದ ನಮಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿರುವದು ಅತಿ ನೋವಿನ ಬೆಳವಣಿಗೆಯಾಗಿದೆ. ಗ್ರಾಮೀಣ ಪ್ರದೇಶದ ಜನರು ಇನ್ನೂ ಸಂಕಷ್ಟದ ಸ್ಥಿತಿಯನ್ನು ಎದುರಿಸುತ್ತಿರುವದರಿಂದ 4 ಅಥವಾ 6 ಪಥದ ರಸ್ತೆ ಹಾಗೂ ರೈಲ್ವೆ ಮಾರ್ಗದ ಯೋಜನೆಯನ್ನು ಕೈ ಬಿಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ಸಂಘ, ಸಂಸ್ಥೆಗಳು, ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಸಂತ್ರಸ್ತರ ಬಗ್ಗೆ ಗಮನ ಹರಿಸಿ ಮಳೆಗಾಲದ ಒಳಗಾಗಿ ಶಾಶ್ವತ ಪರಿಹಾರವನ್ನು ಸೂಚಿಸುವ ಮೂಲಕ ಗ್ರಾಮಸ್ಥರು ವಲಸೆ ಹೋಗುವದನ್ನು ತಪ್ಪಿಸಬೇಕೆಂದು ಮನು ಮುದ್ದಪ್ಪ ಹಾಗೂ ಕಾಳಚಂಡ ಪವನ್ ಮನವಿ ಮಾಡಿದ್ದಾರೆ.