*ಸಿದ್ದಾಪುರ, ಫೆ. 24: ಮಗಳ ಮದುವೆಯನ್ನು ಕಣ್ತುಂಬಿಕೊಳ್ಳಬೆಕೇಂಬ ಆಸೆಯಲ್ಲಿದ್ದ ತಂದೆ ಮಗಳ ಮದುವೆಯ ಚಪ್ಪರ ಶಾಸ್ತ್ರದ ದಿನವೇ ಸ್ವರ್ಗಸ್ಥರಾದ ಮನಕಲಕುವ ಘಟನೆ ನಡೆದಿದೆ. ನಂಜರಾಪಟ್ಟಣ ಗ್ರಾಮದ ಹೊಸಪಟ್ಟಣ್ಣದ ನಿವೃತ್ತ ಪೊಲೀಸ್ ಕರ್ಣಯ್ಯನ ವಸಂತ್ (61) ಕಳೆದ ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇತ್ತೀಚೆಗೆ ಅನಾರೋಗ್ಯ ಉಲ್ಬಣಗೊಂಡು ಬದುಕುಳಿಯುವ ಸಾಧ್ಯತೆ ಕ್ಷೀಣಿಸಿತ್ತು. ಇಬ್ಬರು ಪುತ್ರಿಯರು ಮತ್ತು ಓರ್ವ ಪುತ್ರನನ್ನು ಹೊಂದಿದ್ದ ಅವರು ತಮ್ಮ ಓರ್ವ ಮಗಳನ್ನು ಹಸೆಮಣೆಯಲ್ಲಿ ಕುಳ್ಳಿರಿಸಿ ಅಕ್ಷತೆ ಹಾಕಿ ಆಶೀರ್ವದಿಸಬೇಕು ಎಂಬುದು ತಮ್ಮ ಕೊನೆಯ ಆಸೆ ಎಂದು ಕುಟುಂಬಸ್ಥರಲ್ಲಿ ಹೇಳಿಕೊಂಡಿದ್ದರು.

ಕೆಲ ದಿನಗಳ ಹಿಂದೆ ಜಪಾನ್‍ನಲ್ಲಿ ಉದ್ಯೋಗದಲ್ಲಿರುವ ವರನನ್ನು ಹುಡುಕಿ ನಿಶ್ಚಿತಾರ್ಥ ನೆರವೇರಿಸಿ ಮದುವೆ ದಿನಾಂಕವನ್ನು ನಿಗದಿ ಮಾಡಿದ್ದರು. ತಾ. 23 ರಂದು ಚಪ್ಪರ ಶಾಸ್ತ್ರಕ್ಕೆ ತಯಾರಿ ನಡೆಸುತ್ತಿದ್ದಂತೆ ತಾ. 22 ರಂದು ರಾತ್ರಿ ಆರೋಗ್ಯದಲ್ಲಿ ಏರುಪೇರಾದ ಕಾರಣ ವಸಂತ್‍ರನ್ನು ಮಡಿಕೇರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತಾದರೂ, ವಸಂತ್ ಕೊನೆಯುಸಿರೆಳೆದರು.

- ಸುಧಿ