ಕುಶಾಲನಗರ, ಫೆ. 23: ಜೀವನದಿ ಕಾವೇರಿ ಸಂರಕ್ಷಣೆ ಹಿನ್ನೆಲೆ ಜನರಿಗೆ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯುವದ ರೊಂದಿಗೆ ಪ್ರಕೃತಿಯ ಉಳಿವಿಗಾಗಿ ಶ್ರಮಿಸಬೇಕಾಗಿದೆ ಎಂದು ಕುಶಾಲನಗರ ಗಣಪತಿ ದೇವಾಲಯ ಸಮಿತಿ ಅಧ್ಯಕ್ಷ ವಿ.ಎನ್. ವಸಂತಕುಮಾರ್ ಕರೆ ನೀಡಿದ್ದಾರೆ.
ಮಾತೆ ಕಾವೇರಿ ಆರತಿ ಬಳಗದ ಆಶ್ರಯದಲ್ಲಿ ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ಕಾವೇರಿ ನದಿಗೆ 91ನೇ ಮಹಾ ಆರತಿ ಬೆಳಗುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ನದಿ ಮೂಲದಿಂದಲೇ ಹರಿಯುವ ನೀರನ್ನು ಹಾಗೂ ಜಲಮೂಲಗಳನ್ನು ಸಂರಕ್ಷಿಸುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕಾಗಿದೆ. ಜಲಕ್ಷಾಮ ಉಂಟಾದಲ್ಲಿ ಜನರು ಆತಂಕದ ದಿನಗಳನ್ನು ಎದುರಿಸಬೇಕಾಗುತ್ತದೆ ಎಂದರು. ಈ ಸಂದರ್ಭ ಮಾತನಾಡಿದ ಕಾವೇರಿ ನದಿ ಸ್ವಚ್ಛತಾ ಆಂದೋಲನ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್, ಕಳೆದ 8 ವರ್ಷಗಳಿಂದ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ನದಿ ಸಂರಕ್ಷಣೆಯ ಬಗ್ಗೆ ಜನರಿಗೆ ಅರಿವು, ಜಾಗೃತಿ ಮೂಡಿಸಲಾಗುತ್ತಿದೆ.
ಅಕ್ಟೋಬರ್ ತಿಂಗಳಲ್ಲಿ ಜೀವನದಿ ಕಾವೇರಿಗೆ 100ನೆಯ ಮಹಾ ಆರತಿ ಕಾರ್ಯಕ್ರಮ ಜರುಗಲಿದ್ದು, ಈ ಸಂದರ್ಭ ಕುಶಾಲನಗರದಲ್ಲಿ ಮೂರು ದಿನಗಳ ಕಾಲ ಕಾವೇರಿ ನದಿ ಹಬ್ಬ ಆಚರಣೆ ಹಮ್ಮಿಕೊಳ್ಳಲಾಗುವದು. ಕಾವೇರಿ ನದಿಗೆ ಸಂಬಂಧಿಸಿದಂತೆ ವಿಶೇಷ ಸಂಚಿಕೆಯೊಂದನ್ನು ಹೊರತರ ಲಾಗುವದು ಎಂದು ಮಾಹಿತಿ ನೀಡಿದ ಅವರು, ಸಧ್ಯದಲ್ಲಿಯೇ ಪೂರ್ವಭಾವಿ ಸಭೆ ನಡೆಯಲಿದೆ ಎಂದರು.
ಅರ್ಚಕ ಕೃಷ್ಣಮೂರ್ತಿ ಭಟ್ ಅಷ್ಟೋತ್ತರ, ಪೂಜಾ ಕಾರ್ಯಕ್ರಮ ನೆರವೇರಿಸಿ ನಂತರ ನದಿಗೆ ಸಾಮೂಹಿಕವಾಗಿ ಮಹಾ ಆರತಿ ಬೆಳಗಲಾಯಿತು. ಈ ಸಂದರ್ಭ ಆರತಿ ಬಳಗದ ಪ್ರಮುಖರಾದ ವನಿತಾ ಚಂದ್ರಮೋಹನ್, ಡಿ.ಆರ್. ಸೋಮಶೇಖರ್, ಕೆ.ಆರ್. ಶಿವಾನಂದನ್, ಬಿ.ಜೆ. ಅಣ್ಣಯ್ಯ ಮತ್ತಿತರರು ಇದ್ದರು.