ಗುಡ್ಡೆಹೊಸೂರು, ಫೆ. 22: ಇಲ್ಲಿನ ಅತ್ತೂರು ಮೀಸಲು ಅರಣ್ಯಪ್ರದೇಶಕ್ಕೆ ಸೇರಿದ ಸುಣ್ಣದಕೆರೆ ಗ್ರಾಮದ ನಿವಾಸಿ ಎಸ್.ಕೆ.ಲೋಕೆಶ್ ಎಂಬುವವರ ಗಬ್ಬದ ಹಸು ಮತ್ತು 2 ವರ್ಷದ ಕರು ಹುಲಿಧಾಳಿಗೆ ಬಲಿಯಾಗಿದೆ. ಸುಣ್ಣದಕೆರೆ ಗ್ರಾಮದ ಅರಣ್ಯದಂಚಿನಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಈ ವಿಭಾಗದ ಅರಣ್ಯಧಿಕಾರಿಗಳು ಭೇಟಿನೀಡಿ ಪರಿಶೀಲಿಸಿದ್ದಾರೆ. ಕಳೆದ 20ದಿನಗಳ ಹಿಂದೆ ಚಿಕ್ಕಬೆಟ್ಟಗೇರಿಗ್ರಾಮದಲ್ಲಿ ಹುಲಿ ಧಾಳಿ ಮಾಡಿ ಹಸುವನ್ನು ಕೊಂದು ಅದರ ಮಾಂಸವನ್ನು ಸತತ ಎರಡು ದಿನಗಳ ಕಾಲ ತಿಂದು ತೆರಳಿತ್ತು.
ಇಲ್ಲಿಯೂ ಅದೇ ಪ್ರಸಂಗ ನಡೆದಿದೆ. ಕರುವಿನ ಮಾಂಸತಿಂದು ಮತ್ತೆ ಮರು ದಿನ ಹಸುವಿನ ಮಾಂಸ ಭಕ್ಷಣೆ ಮಾಡಿದೆ. ಈ ಘಟನೆಯು ಗ್ರಾಮದಿಂದ ಅರಣ್ಯ ಪ್ರದೇಶದಲ್ಲಿ 1.ಕಿ.ಮೀ ಅಂತರದಲ್ಲಿ ನಡೆದಿದೆ. ಲೋಕೇಶ್ ಮತ್ತು ಸಂಗಡಿಗರು ಮರುದಿನ ಸ್ಥಳಕ್ಕೆ ತೆರಳಿದ ಸಂದರ್ಭ ಹುಲಿರಾಯ ಸ್ಥಳದಿಂದ ಪಲಾಯನಗೊಂಡಿರುವದಾಗಿ ಲೋಕೇಶ್ ಅವರು ತಿಳಿಸಿದ್ದಾರೆ. ಅನೇಕ ದಿನಗಳಿಂದ ಈ ಹುಲಿಯು ಅನೇಕ ಜಾನುವಾರುಗಳನ್ನು ಭೇಟೆ ಮಾಡಿರುವ ವರದಿಯಾಗಿದೆ. ಜಾನುವಾರುಗಳ ಬದಲು ಜನರನ್ನು ಬೇಟೆಯಾಡುವ ಮುಂಚೆ ಈ ಹುಲಿಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
-ಗಣೇಶ್ ಕುಡೆಕ್ಕಲ್