ಕುಶಾಲನಗರ, ಫೆ. 22: ಭಾರತೀಯ ಜನತಾ ಪಕ್ಷದ ವತಿಯಿಂದ ತಾ. 24 ರಂದು ಜಿಲ್ಲೆಯಾದ್ಯಂತ ಪಕ್ಷದ ಕಾರ್ಯಕರ್ತರು ಮನೆಮನೆಗೆ ಭೇಟಿ ನೀಡುವ ಮಹಾಸಂಪರ್ಕ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ.ಭಾರತೀಶ್ ಹೇಳಿದರು.
ಕುಶಾಲನಗರದಲ್ಲಿ ಸುದ್ದಿಗೋಷ್ಠಿ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಮತದಾರರು ಒಲವು ಹೊಂದಿದ್ದು ಕೇಂದ್ರ ಸರಕಾರದ ಜನಪರ ಯೋಜನೆಗಳಿಂದ ಪ್ರೇರಿತರಾಗಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕೆಂಬ ಅಪೇಕ್ಷೆಯ ನಿರೀಕ್ಷೆಯಲ್ಲಿದ್ದಾರೆ. ವಿಶ್ವದ ನಂ 1 ಪಕ್ಷವೆನಿಸಿರುವ ಬಿಜೆಪಿ ಇತರ ಪಕ್ಷಗಳಿಂದ ವಿಭಿನ್ನವಾಗಿದೆ. ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಅಖಾಡಕ್ಕೆ ಧುಮುಕದೆ ಪ್ರತಿನಿತ್ಯ ಕಾರ್ಯಕರ್ತರು ಕಾರ್ಯನಿರ್ವಹಿಸುವ ಪಕ್ಷವಾಗಿದೆ. ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೆ ಹಲವು ಅಂಶಗಳ ಆಶಯದಡಿ ಪಕ್ಷದ ಕಾರ್ಯಚಟುವಟಿಕೆ ಭರದಿಂದ ಸಾಗಿದೆ ಎಂದರು.
ಪಂಡಿತ್ ದೀನ ದಯಾಳ್ ಪುಣ್ಯಸ್ಮರಣೆ, ಮೇರಾ ಪರಿವಾರ್ ಬಿಜೆಪಿ ಪರಿವಾರ್‍ನಂತ ಕಾರ್ಯಕ್ರಮಗಳ ಮೂಲಕ ಪಕ್ಷ ಸಂಘಟನೆ ಕಾರ್ಯ ನಡೆಯುತ್ತಿದೆ. ತಾ. 24 ರಂದು ಮಹಾಸಂಪರ್ಕ ಅಭಿಯಾನದೊಂದಿಗೆ ಪ್ರಧಾನಿ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮ ನಡೆಯಲಿದೆ. ಮಹಾಸಂಪರ್ಕ ಅಭಿಯಾನದಡಿ ಜಿಲ್ಲೆಯ ಪಕ್ಷದ ಚುನಾಯಿತ ಜನಪ್ರತಿನಿಧಿಗಳು ಒಳಗೊಂಡಂತೆ ವಿವಿಧ ಘಟಕಗಳ, ಬೂತ್ ಮಟ್ಟದ ಪದಾಧಿಕಾರಿಗಳು ತಮ್ಮ ವ್ಯಾಪ್ತಿಯ ಮನೆಗಳಿಗೆ ಭೇಟಿ ನೀಡಿ ಕೇಂದ್ರ ಸರಕಾರದ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವದು, ಮನೆಯಲ್ಲಿ ಸ್ಟಿಕರ್ ಮತ್ತು ಪಕ್ಷದ ಬಾವುಟಗಳ ಅಳವಡಿಕೆ ಕಾರ್ಯ ನಡೆಸಲಿದ್ದಾರೆ. ಕೇಂದ್ರದ ವಿವಿಧ ಯೋಜನೆಗಳ ಫಲಾನುಭವಿಗಳು ಮನ್ ಕಿ ಬಾತ್ ಕಾರ್ಯಕ್ರಮ ಆಲಿಸುವಂತೆ ಮಾಡುವದು, ಕಮಲ ಜ್ಯೋತಿ ಕಾರ್ಯಕ್ರಮ ನಡೆಯಲಿದೆ. ಮಾರ್ಚ್ 5 ರಂದು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಬೃಹತ್ ಬೈಕ್ ರ್ಯಾಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಶ್ ತಿಳಿಸಿದರು.
ಇದರೊಂದಿಗೆ ಯುವಮೋರ್ಚಾ ಸೇರಿದಂತೆ ವಿವಿಧ ಮೋರ್ಚಾ ಘಟಕಗಳಿಗೆ ವಹಿಸಿದ ಜವಾಬ್ದಾರಿ ಮತ್ತು ಕಾರ್ಯಕ್ರಮಗಳು ಚಾಲನೆಗೊಳ್ಳಲಿವೆ ಎಂದು ತಿಳಿಸಿದರು. ಮತ್ತೊಮ್ಮೆ ಮೋದಿ ಪ್ರಧಾನಿಯಾಗಿಸುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಶ್ರಮವಹಿಸಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಗಣಿಪ್ರಸಾದ್, ಪ್ರಧಾನ ಕಾರ್ಯದರ್ಶಿ ವಿ.ಕೆ.ಲೋಕೇಶ್, ಸೋಮವಾರಪೇಟೆ ಮಂಡಲ ಅಧ್ಯಕ್ಷ ಕುಮಾರಪ್ಪ, ಕುಶಾಲನಗರ ಘಟಕ ಅಧ್ಯಕ್ಷ ಕೆ.ಜಿ.ಮನು, ಜಿಲ್ಲಾ ಸಮಿತಿ ಸದಸ್ಯ ಎಂ.ವಿ.ನಾರಾಯಣ ಇದ್ದರು.