ಸಿದ್ದಾಪುರ, ಫೆ. 22: ಕೇಂದ್ರ ಮತ್ತು ರಾಜ್ಯ ಸರಕಾರಗಳ ಕಾರ್ಮಿಕ ಹಾಗೂ ರೈತ ವಿರೋಧಿ ನೀತಿಗಳ ವಿರುದ್ಧ ಕರ್ನಾಟಕ ಪ್ಲಾಂಟೇಷನ್ ವರ್ಕರ್ಸ್ ಫೆಡರೇಶನ್ ರಾಜ್ಯ ಸಮ್ಮೇಳನ ತಾ. 24 ರಂದು ಸಿದ್ದಾಪುರದ ಎಸ್.ಎನ್.ಡಿ.ಪಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘಟನೆಯ ರಾಜ್ಯ ಅಧ್ಯಕ್ಷ ಮಹದೇವ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನದಲ್ಲಿ ಕಾಫಿ, ಕರಿಮೆಣಸು, ಭತ್ತ, ಅಡಿಕೆ, ಏಲಕ್ಕಿ ಮತ್ತು ಕಾರ್ಮಿಕರ ಸಮಸ್ಯೆಗಳ ಬಗ್ಗೆ ಚರ್ಚಿಸಿ ತೀರ್ಮಾನಗಳನ್ನು ಕೈಗೊಂಡು ಕೇಂದ್ರ ಮತ್ತು ರಾಜ್ಯ ಸರಕಾರದ ಗಮನಕ್ಕೆ ತರಲಾಗುವದು. ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಂದ ಪ್ರತಿನಿಧಿಗಳು ಭಾಗವಹಿಸಲಿದ್ದು, ಸಂಘಟನೆಯ ಅಖಿಲ ಭಾರತ ಕಾರ್ಯದರ್ಶಿ ಲಾಲಾಜಿ ಬಾಬು, ದಕ್ಷಿಣ ವಲಯ ಉಪಾಧ್ಯಕ್ಷ ಗೋಪಿ ಕುಮಾರ್, ಸಿ ಐ ಟಿ ಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಪ್ರಮುಖರಾದ ಸುಗುಮಾರ್ ಧರ್ಮೇಶ್ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಎನ್.ಡಿ ಕುಟ್ಟಪ್ಪ ಹಾಗೂ ಹೆಚ್.ಬಿ ರಮೇಶ್ ಇದ್ದರು.