ಮಡಿಕೇರಿ, ಫೆ. 23: ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿ ಹೃದಯ ಭಾಗದಲ್ಲಿ ಹರಿಯುತ್ತಿರುವ ಚರಂಡಿ ತುಂಬಾ ತ್ಯಾಜ್ಯ ತುಂಬಿ ದುರ್ವಾಸನೆ ಬೀರುತ್ತಿತ್ತು. ನಗರಸಭೆ ಮೂಲಕ ಚರಂಡಿ ಸ್ವಚ್ಛಗೊಳಿಸುವ ಕಾರ್ಯ ಶನಿವಾರ ಮುಂಜಾನೆ ಚಾಲನೆ ನೀಡಲಾಯಿತು.

ಸ್ವಚ್ಛತೆ ಬಗ್ಗೆ ಹೆಚ್ಚಿನ ಮುತುವರ್ಜಿ ತೋರುತ್ತಿರುವ ಗ್ರೀನ್ ಸಿಟಿ ಫೋರಂ ಸಂಘಟನೆ ನಗರಸಭೆ ಗಮನ ಸೆಳೆಯುವದರ ಮೂಲಕ ಚರಂಡಿ ಸ್ವಚ್ಛಗೊಳಿಸಲು ಮುಂದಾಗಿತ್ತು. ಸಕಾರಾತ್ಮಕವಾಗಿ ಸ್ಪಂದಿಸಿದ ನಗರಸಭೆ ಶನಿವಾರ ಚರಂಡಿ ಸ್ವಚ್ಛತಾ ಕಾರ್ಯ ಕೈಗೆತ್ತಿಕೊಂಡಿತು.

ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಮುಂಭಾಗದಲ್ಲಿ ಹರಿಯುತ್ತಿರುವ ಚರಂಡಿ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಪೌರಕಾರ್ಮಿಕರು ತಮ್ಮನ್ನು ತೊಡಗಿಸಿಕೊಂಡರು. ಚರಂಡಿಯಲ್ಲಿದ್ದ ಬಾಟಲಿಗಳು ಸೇರಿದ್ದಂತೆ ಶೇಖರಣೆಗೊಂಡಿದ್ದ ತ್ಯಾಜ್ಯಗಳನ್ನು ತೆರವುಗೊಳಿಸಿದರು. ಜೆಸಿಬಿ ಯಂತ್ರದ ಮೂಲಕ ಚರಂಡಿಯಲ್ಲಿದ್ದ ತ್ಯಾಜ್ಯಗಳನ್ನು ಹೊರ ತೆಗೆಯಲಾಯಿತು. ಚರಂಡಿಯಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಸ್ವಚ್ಛಗೊಳಿಸಲಾಯಿತು.

ನಗರಸಭೆ ಅಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ, ಸದಸ್ಯ ಪ್ರಕಾಶ್ ಆಚಾರ್ಯ, ಪೌರಾಯುಕ್ತ ಬಿ.ರಮೇಶ್ ಚರಂಡಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ, ಸ್ಥಳಕ್ಕೆ ಆಗಮಿಸಿದರು. ಪಟ್ಟಣದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಗ್ರೀನ್ ಸಿಟಿ ಫೋರಂ ಕಳಕಳಿ ವ್ಯಕ್ತ ಪಡಿಸುತ್ತಿರುವದಕ್ಕೆ ಹರ್ಷ ವ್ಯಕ್ತ ಪಡಿಸಿದರು. ಸಂಘ- ಸಂಸ್ಥೆಗಳು ಹಾಗೂ ಸಾರ್ವಜನಿಕರು ಸ್ವಚ್ಛತೆ ಕಾಪಾಡಲು ನಗರಸಭೆಯೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.

ಚರಂಡಿ ಸಮೀಪದಲ್ಲಿರುವ ವಸತಿಗೃಹ, ಹೋಟೆಲ್‍ಗಳು ಸೇರಿದ್ದಂತೆ ವಿವಿಧೆಡೆಯಿಂದ ತ್ಯಾಜ್ಯಗಳನ್ನು ಚರಂಡಿಗೆ ನೇರವಾಗಿ ಬಿಡುತ್ತಿರುವ ಬಗ್ಗೆ ಗಮನ ಹರಿಸುವಂತೆ ಗ್ರೀನ್ ಸಿಟಿ ಫೋರಂ ಪ್ರಮುಖರು ನಗರಸಭೆ ಪ್ರಮುಖರಲ್ಲಿ ಮನವಿ ಮಾಡಿದರು.

ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಮುಂದಾಳತ್ವದಲ್ಲಿ ಗ್ರೀನ್ ಸಿಟಿ ಫೋರಂ ಪ್ರಮುಖರು, ಚರಂಡಿ ಸಮೀಪದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವ ವರ್ತಕರ ಬಳಿಗೆ ತೆರಳಿ, ತ್ಯಾಜ್ಯ ಹಾಕದ್ದಂತೆ ಮನವಿ ಮಾಡಿಕೊಂಡರು. ಸಾರ್ವಜನಿಕರು ಕೂಡ ತ್ಯಾಜ್ಯವನ್ನು ಚರಂಡಿಗೆ ಹಾಕದ್ದಂತೆ ನೋಡಿಕೊಳ್ಳುವಂತೆ ಮನವಿ ಮಾಡಲಾಯಿತು. ಇದಕ್ಕೆ ವರ್ತಕ ರು ಸಕಾರತ್ಮಕವಾಗಿ ಸ್ಪಂದಿಸಿದರು.

ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ, ಪ್ರಧಾನ ಕಾರ್ಯದರ್ಶಿ ಪೂಳಕಂಡ ರಾಜೇಶ್, ಖಜಾಂಚಿ ಕನ್ನಂಡ ಕವಿತಾ ಬೊಳ್ಳಪ್ಪ, ಸ್ಥಾಪಕಾಧ್ಯಕ್ಷ ಚೈಯ್ಯಂಡ ಸತ್ಯ ಗಣಪತಿ, ಮಾಜಿ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ನಿರ್ದೇಶಕರಾದ ಪಿ.ಕೃಷ್ಣಮೂರ್ತಿ, ಅಜ್ಜಮಾಡ ರಮೇಶ್ ಕುಟ್ಟಪ್ಪ, ಕಿರಿಯಮಾಡ ರತನ್ ತಮ್ಮಯ್ಯ, ಮೋಂತಿ ಗಣೇಶ್, ಸವಿತಾ ಭಟ್ ಇದ್ದರು.