ಮಡಿಕೇರಿ, ಫೆ. 23: ಕೊಡಗು ಸೇರಿದಂತೆ ದೇಶದಲ್ಲಿ ತಲಾತಲಾಂತರ ದಿಂದ ಕಾಡಿನ ನಡುವೆ ಬದುಕು ಕಟ್ಟಿಕೊಂಡಿರುವ ಕುಟುಂಬಗಳಿಗೆ ಕೇಂದ್ರ ಸರಕಾರ ಕಲ್ಪಿಸಿರುವ; ವಿಶೇಷ ಅರಣ್ಯ ಹಕ್ಕು ಕಾಯ್ದೆಯ ದುರ್ಬಳಕೆ ತಡೆಗೆ ತಾ. 13 ರಂದು ದೇಶದ ಸರ್ವೋಚ್ಚ ನ್ಯಾಯಾಲಯದಿಂದ ಅಂಕುಶ ನೀಡಲಾಗಿದೆ. ಕೊಡಗು ಜಿಲ್ಲೆ ಹಾಗೂ ಪೂರ್ವ-ಈಶಾನ್ಯ, ಪಶ್ಚಿಮ ರಾಜ್ಯಗಳ ಬುಡಕಟ್ಟು ಆದಿವಾಸಿಗಳು ಮತ್ತು ಪಾರಂಪಾರಿಕ ಬದುಕು ಕಲ್ಪಿಸಿಕೊಂಡವರ ಹೊರತು 2005ನೇ ಇಸವಿಯಿಂದ ಇತ್ತೀಚೆಗೆ ಅಥವಾ ಮೂರು ತಲೆಮಾರಿನ ಸುಮಾರು 75 ವರ್ಷ ಹಿಂದಿನವರ ಹೊರತು ಸಂರಕ್ಷಿತ ಅರಣ್ಯ ಭೂಮಿ ಅತಿಕ್ರಮಣಕ್ಕೆ ಇಲ್ಲಿ ಸ್ಪಷ್ಟ ಕಡಿವಾಣ ಹಾಕಿದಂತಾಗಿದೆ.

2006ನೇ ಇಸವಿಯಲ್ಲಿ ದಶಕದ ಹಿಂದೆಯೇ ದೇಶದ ಸಂಪತ್ತು ನಿರ್ಣಯವೊಂದನ್ನು ಕೈಗೊಂಡು, 2005ನೇ ಇಸವಿಯ ಡಿಸೆಂಬರ್ 13ಕ್ಕೆ ಮುನ್ನ ದೇಶದಲ್ಲಿ ಪಾರಂಪರಿಕ ಮತ್ತು ಬುಡಕಟ್ಟು ಜನತೆಯ ಕುಟುಂಬಗಳು ಅರಣ್ಯ ವಾಸಿಗಳಾಗಿ ಬದುಕು ಕಟ್ಟಿಕೊಳ್ಳಲು ಅನುವು ಮಾಡಿಕೊಟ್ಟು ವಿಧೇಯಕ ಮುಖಾಂತರ ಹಕ್ಕುಪತ್ರ ಕಲ್ಪಿಸಲು ಕ್ರಮ ವಹಿಸಿತ್ತು.

ಈ ಮೇರೆಗೆ ಭಾರತದ ಒಟ್ಟಾರೆ 72,23,132 ಹೆಕ್ಟೇರ್ ಅರಣ್ಯ ಭೂಮಿ ಬುಡಕಟ್ಟು ಸಮುದಾಯಕ್ಕೆ ಮಂಜೂರಾಗಿತ್ತು. ಆ ಬಳಿಕ ಈ ಕಾಯ್ದೆಯ ದುರುಪಯೋಗದೊಂದಿಗೆ ಅಲ್ಲಲ್ಲಿ ಆದಿವಾಸಿಗಳು ಹಾಗೂ ಇತರರ ಸೋಗಿನಲ್ಲಿ ಅರಣ್ಯ ಭೂಮಿಯ ಅತಿಕ್ರಮಣಕ್ಕೆ ಕುಮ್ಮಕ್ಕು ದೊರಕುವಂತಾಗಿತ್ತು.

ಅಲ್ಲದೆ ಗ್ರಾಮ ಅರಣ್ಯ ಹಕ್ಕು ಸಂರಕ್ಷಣಾ ಸಮಿತಿಗಳಿಗೆ ದೇಶದೆಲ್ಲೆಡೆ ಅರ್ಜಿಗಳು ಸಲ್ಲಿಕೆಯಾಗಿ, ಈ ರೀತಿ ಸಲ್ಲಿಕೆಯಾಗಿದ್ದ ಸುಮಾರು 14 ಲಕ್ಷ ಅರ್ಜಿಗಳು ನಕಲಿಯೆಂಬ ಸುಳಿವಿನ ಮೇರೆಗೆ ತಿರಸ್ಕರಿಸಲ್ಪಟ್ಟು, ಉಪವಿಭಾಗ ಅಥವಾ ಜಿಲ್ಲಾ ಮಟ್ಟದ ಸಮಿತಿಗಳಿಂದಲೂ ಪರಿಶೀಲಿಸಿ ಅಂತಹವುಗಳನ್ನು ಅಂಗೀಕರಿಸಿರಲಿಲ್ಲ.

ನ್ಯಾಯಾಲಯಕ್ಕೆ ದೂರು: ಇಲ್ಲಿ ಅರಣ್ಯ ಹಕ್ಕು ಕಾಯ್ದೆಯಿಂದ ನೈಜ ಫಲಾನುಭವಿಗಳಿಗಷ್ಟೇ ನ್ಯಾಯವನ್ನು ಕಲ್ಪಿಸುವದು ಮತ್ತು ಕಾಯ್ದೆ ದುರ್ಬಳಕೆಯಿಂದ ಪಟ್ಟಭದ್ರರಿಗೆ ನೆಲೆ ಕಲ್ಪಿಸದೆ, ಅಂತಹವರನ್ನು ತೆರವು ಗೊಳಿಸಬೇಕೆಂದು ವೈಲ್ಡ್ ಲೈಫ್‍ಫಸ್ಟ್, ನೇಚರ್ ಕನ್ಸರ್‍ವೇಷನ್ ಸೊಸೈಟಿ ಹಾಗೂ ಟೈಗರ್ ರೀಸರ್ಚ್ ಮತ್ತು ಕನ್ಸರ್‍ವೇಷನ್ ಟ್ರಸ್ಟ್ ಎಂಬ ಸಂಸ್ಥೆಗಳು 2008ರಲ್ಲಿ ಸರ್ವೋಚ್ಚ ನ್ಯಾಯಾಲ ಯದಲ್ಲಿ ಮನವಿ ಸಲ್ಲಿಸಿದ್ದವು.

ಆ ಬಗ್ಗೆ ಆದೇಶ ಹೊರ ಬೀಳುವದರೊಂದಿಗೆ, ಮೇಲಿನ ದೂರಿನ ಪ್ರಕಾರ ಒಂದು ದಶಕದ ಬಳಿಕ ಭಾರತದ 17 ರಾಜ್ಯ ಸರಕಾರಗಳ ಮುಖ್ಯ ಕಾರ್ಯದರ್ಶಿ ಗಳಿಂದ ಮುಂದಿನ ಜುಲೈಯೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಆದೇಶಿ¸ Àಲಾಗಿದೆ. ನಿಗದಿತ ಸಮಯದೊಳಗೆ ವರದಿ ಸಲ್ಲಿಸದಿದ್ದರೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವದಾಗಿ ಮುನ್ಸೂಚನೆ ನೀಡಿದೆ.

ಕೊಡಗಿಗೂ ಬಿಸಿ: ಒಂದು ಮೂಲಕ ಪ್ರಕಾರ ಸಿದ್ದಾಪುರ ವ್ಯಾಪ್ತಿಯ ಜಿ.ಪಂ. ಮಹಿಳಾ ಪ್ರತಿನಿಧಿಯೊಬ್ಬರು ಇಂತಹ 2000ಕ್ಕೂ ಅಧಿಕ ನಕಲಿ ಅರ್ಜಿಗಳನ್ನು ಸೃಷ್ಟಿಸಿ ಅರಣ್ಯ ಹಕ್ಕು ಗ್ರಾಮ ಸಮಿತಿ ಅಡಿಯಲ್ಲಿ ಸಲ್ಲಿಸಿರುವ ಆರೋಪವಿದೆ. ಅಲ್ಲದೆ ಅರಣ್ಯ ಇಲಾಖೆಯಿಂದ ನೇರ ಸಂರಕ್ಷಿತ ಅರಣ್ಯ ಜಾಗದ ಅತಿಕ್ರಮಣ ಸಂಬಂಧವೂ ಹಲವಷ್ಟು ದೂರುಗಳಿವೆ. ಇಲ್ಲಿ ದೇವರ ಕಾಡು, ಕಂದಾಯ ಭೂಮಿ ಸೇರಿದಂತೆ ಜಮ್ಮಾ, ಸಾಗು ಇತ್ಯಾದಿ ಅರಣ್ಯ ಭೂಪ್ರದೇಶಗಳು ಸರ್ವೋಚ್ಚ ನ್ಯಾಯಾಲಯ ಆದೇಶಕ್ಕೆ ಒಳಪಡುವದಿಲ್ಲವೆಂದು ಗೊತ್ತಾಗಿದೆ.

ಬದಲಾಗಿ ನಿತ್ಯಹರಿದ್ವರ್ಣದಿಂದ ಕೂಡಿರುವ ಸಂರಕ್ಷಿತ ಅರಣ್ಯ ಪ್ರದೇಶಗಳ ಅತಿಕ್ರಮಣಕ್ಕೆ ಭವಿಷ್ಯದಲ್ಲಿ ಅಂಕುಶ ಬೀಳುವದು ಬಹುತೇಕ ಖಾತರಿಯಾಗಿದೆ.