ಸಿದ್ದಾಪುರ, ಫೆ. 23: ಇತ್ತೀಚೆಗೆ ಹೊರ ರಾಜ್ಯದ ಕಾರ್ಮಿಕರಿಂದ ಅತ್ಯಾಚಾರಕ್ಕೆ ಒಳಗಾಗಿ, ಕೊಲೆಯಾಗಿರುವ ಸಂಧ್ಯಾಳ ಮನೆಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ ಮಹೇಶ್ ಭೇಟಿ ನೀಡಿ ಸಂಧ್ಯಾಳ ಪೋಷಕರಿಗೆ ಸಾಂತ್ವನ ಹೇಳಿ, ಸರಕಾರದಿಂದ ಅಗತ್ಯ ಸೌಲಭ್ಯವನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದರು.ಮೃತ ಸಂಧ್ಯಾಳ ಪೋಷಕರೊಂದಿಗೆ ಮಾತನಾಡಿದ ಸಚಿವರು ಘಟನೆಯನ್ನು ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಿ, ಸಂಧ್ಯಾಳ ಕುಟುಂಬಕ್ಕೆ ಸರಕಾರದಿಂದ ಸೌಲಭ್ಯಗಳನ್ನು ಒದಗಿಸಬೇಕೆಂದು ಸೂಚಿಸಿದ್ದು ಮಾನವೀಯ ದೃಷ್ಟಿಯಿಂದ ಇನ್ನಿತರ ಸೌಲಭ್ಯಗಳನ್ನು ನೀಡಲಾಗುವದೆಂದು ಭರವಸೆ ನೀಡಿದರು.

ಸಚಿವರೊಂದಿಗೆ ಮಾತನಾಡಿದ ಸಂಧ್ಯಾಳ ಪೋಷಕರು ಹಲವಾರು ವರ್ಷಗಳಿಂದ ನಿವೇಶನ ರಹಿತರಾಗಿ ತೋಟದ ಮನೆಯಲ್ಲಿ ವಾಸಮಾಡುತ್ತಿದ್ದು, ಇಂದಿಗೂ ಪಡಿತರ ಚೀಟಿ ಸಹಿತ ನಾಗರಿಕರಿಗೆ ಸಿಗಬೇಕಾದ ಕನಿಷ್ಠ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ ಎಂದ ಅವರು, ಕಾಫಿ ತೋಟದ ಲೈನ್ ಮನೆಗಳಲ್ಲಿ ಹೊರ ರಾಜ್ಯದ ಕೂಲಿ ಕಾರ್ಮಿಕರೇ ಹೆಚ್ಚಾಗಿದ್ದು ಪ್ರತಿ ದಿನ ಪ್ರಾಣ ಭೀತಿಯಿಂದ ಬದುಕುವ ಸ್ಥಿತಿ ನಿರ್ಮಾಣವಾಗಿದ್ದು ತಮಗೆ ಸರಕಾರದ ವತಿಯಿಂದ ನಿವೇಶನ ಒದಗಿಸಿಕೊಡಬೇಕೆಂದು ಮನವಿ ಮಾಡಿದರು.ಪೋಷಕರ ಮನವಿಯನ್ನು ಆಲಿಸಿದ ಸಚಿವರು ಜಿಲ್ಲೆಯ ನೆರೆ ಸಂತ್ರಸ್ತರಿಗೆ ಕಲ್ಪಿಸಲಾಗಿರುವ ನಿವೇಶನಗಳ ಪಟ್ಟಿಯಲ್ಲಿ ಸಂಧ್ಯಾಳ ಕುಟುಂಬವನ್ನು ಸೇರ್ಪಡಿಸುವ ಮೂಲಕ ನಿವೇಶನ ಒದಗಿಸಲಾಗುವದು ಎಂದರು. ಅಲ್ಲದೆ ಪಡಿತರ ಚೀಟಿಯಿಂದ ವಂಚಿತರಾದ ಫಲಾನುಭವಿಗಳ ಪಟ್ಟಿಯನ್ನು ಸಿದ್ದಪಡಿಸಿ ಪಡಿತರ ಚೀಟಿ ಒದಗಿಸಿಕೊಡುವಂತೆ ಜಿಲ್ಲಾಧಿಕಾರಿಯವರಿಗೆ ಸೂಚಿಸಿದರು.

ಈ ಸಂದರ್ಭ ಗ್ರಾಮ ಪಂಚಾಯತಿ ಸದಸ್ಯ ಹುಸೇನ್ ಮಾತನಾಡಿ ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯಲ್ಲಿ ಸುಮಾರು 600 ಕ್ಕೂ ಅಧಿಕ ಪಡಿತರ ಹಾಗೂ ನಿವೇಶನ ರಹಿತರಿದ್ದು ಸರಕಾರದ ವತಿಯಿಂದ ನಿವೇಶನ ರಹಿತರಿಗೆ ನಿವೇಶನ ಹಾಗೂ ಪಡಿತರ ಚೀಟಿ ವಂಚಿತರಿಗೆ ಪಡಿತರ ಚೀಟಿಯನ್ನು ಒದಗಿಸಿಕೊಡಬೇಕೆಂದು ಸಚಿವರೊಂದಿಗೆ ಮನವಿ ಮಾಡಿಕೊಂಡರು. ಸಚಿವರು ಮಾತನಾಡಿ ಪಡಿತರ ಚೀಟಿ ವಂಚಿತರಾಗಿರುವವರ ಸಂಪೂರ್ಣ ಮಾಹಿತಿಯನ್ನು ಸಂಬಂದಪಟ್ಟ ಅಧಿಕಾರಿಗಳಿಗೆ ನೀಡುವಂತೆ ಸೂಚಿಸಿದ್ದು, ನಿವೇಶನ ರಹಿತರಿಗೆ ಆದಷ್ಟು ಬೇಗ ನಿವೇಶನ ಒದಗಿಸುವ ಕುರಿತು ಕ್ರಮಕೈಗೊಳ್ಳುವದಾಗಿ ಭರವಸೆ ನೀಡಿದ ಅವರು, ಕಾಫಿ ತೋಟಗಳಲ್ಲಿ ವಾಸವಿರುವ ಹೊರ ರಾಜ್ಯದ ಕಾರ್ಮಿಕರ ಸಂಪೂರ್ಣ ಮಾಹಿತಿಯನ್ನು ತೋಟದ ಮಾಲಿಕರು ಸ್ಥಳೀಯ ಪೊಲೀಸ್ ಠಾಣೆಗೆ ನೀಡಬೇಕು, ಒಂದುವೇಳೆ ತೋಟದ ಮಾಲೀಕರು ನಿರ್ಲಕ್ಷ್ಯವಹಿಸಿದ್ದಲ್ಲಿ ಮಾಲಿಕರ ವಿರುದ್ದ ಇಲಾಖೆಯಿಂದ ಕ್ರಮಕೈಗೊಳ್ಳಲಾಗುವದೆಂದರು.

ಈ ಸಂದರ್ಭ ಶಾಸಕರಾದ ಕೆ.ಜಿ ಬೋಪಯ್ಯ, ಜಿಲ್ಲಾಧಿಕಾರಿ ಅನ್ನಿಸ್ ಕಣ್ಮಣಿ ಜಾಯ್, ವೀರಾಜಪೇಟೆ ತಾಲೂಕು ತಹಶಿಲ್ದಾರ್ ಗೋವಿಂದರಾಜು, ಮಡಿಕೇರಿ ಡಿವೈ ಎಸ್ಪಿ ಸುಂದರ್ ರಾಜ್, ವೀರಾಜಪೇಟೆ ಡಿವೈ ಎಸ್ಪಿ ನಾಗಪ್ಪ, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಸಿದ್ದಾಪುರ ಠಾಣಾಧಿಕಾರಿ ದಯಾನಂದ್, ಆರ್‍ಐ ವಿನು, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್, ಗ್ರಾ.ಪಂ ಸದಸ್ಯ ಜಾಫರ್, ಗ್ರಾಮಸ್ಥರಾದ ರಾಜು, ಪ್ರವೀಣ್ ಮತ್ತಿತರರು ಹಾಜರಿದ್ದರು.

ಆಕ್ರೋಶಗೊಂಡ ಸ್ಥಳೀಯರು

ಸಿದ್ದಾಪುರದಲ್ಲಿ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ನಡೆದು ಎರಡು ವಾರಗಳು ಕಳೆದಿದ್ದು ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮಕೈಗೊಳ್ಳಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ತಡವಾಗಿ ಭೇಟಿಮಾಡಿರುವದನ್ನು ಖಂಡಿಸಿ ಸ್ಥಳೀಯ ತೋಟ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.ಅಲ್ಲದೆ ಸಚಿವರು ಹಾಗೂ ಅಧಿಕಾರಿಗಳು ಕೇವಲ ಭರವಸೆ ,ಆಶ್ವಾಸನೆಗಳಿಗೆ ಮಾತ್ರ ಸೀಮಿತವಾಗದೆ ಅಗತ್ಯ ಸೌಲಭ್ಯಗಳನ್ನು ಆದಷ್ಟು ಬೇಗ ಸಂಧ್ಯಾಳ ಕುಟುಂಬಕ್ಕೆ ತಲುಪುವಂತಾಗಬೇಕೆಂದು ಒತ್ತಾಯಿಸಿದರು.