ಮಡಿಕೇರಿ, ಫೆ. 22: ಕೊಡಗು ಜಿಲ್ಲೆಯಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ನೂರಾರು ಮಂದಿ ಮನೆ, ಮಠಗಳನ್ನು ಕಳೆದುಕೊಂಡಿದ್ದರೆ, ಸಹಸ್ರಾರು ಮಂದಿ ಆಸ್ತಿ - ಪಾಸ್ತಿ ಕಳೆದು ಕೊಂಡಿದ್ದಾರೆ. ಮನೆ ಕಳೆದು ಕೊಂಡವರಿಗೆ ಪರಿಹಾರದ ಹಣ ಬಂದಿದೆ, ಪುನರ್ವಸತಿ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿದ್ದರೂ ಇಂದಲ್ಲ ನಾಳೆ ಸಿಗಬಹುದೆಂಬ ನಿರೀಕ್ಷೆಯಲ್ಲಿ ಸಂತ್ರಸ್ತರು ದಿನದೂಡುತ್ತಿದ್ದಾರೆ.ಆದರೆ..,ಅತಿವೃಷ್ಟಿ ವಿಕೋಪದಿಂದಾಗಿ ತೋಟ, ಕೃಷಿ ಫಸಲು ಹಾನಿಗೊಳ ಗಾದವರಿಗೆ ಇನ್ನೂ ಕೂಡ ಸೂಕ್ತ ಪರಿಹಾರ ಸಿಕ್ಕಿಲ್ಲ. ಎರಡು - ಮೂರು ಸಮೀಕ್ಷೆ ನಡೆಸಿದ ಮೇಲೂ ಇದೀಗ ಕೆಲವು ಕೃಷಿಕರಿಗೆ ಒಂದಿಷ್ಟು ಅಲ್ಪ ಪ್ರಮಾಣದ ಪರಿಹಾರ ಅವರವರ ಬ್ಯಾಂಕ್ ಖಾತೆಗೆ ಬಂದಿದೆ. ವಿಪರ್ಯಾಸವೆಂದರೆ ಪರಿಹಾರ ನೀಡಿರುವ ಸರಕಾರದ ಕಂದಾಯ ಇಲಾಖೆಯೆ ಇದೀಗ ಕೊಟ್ಟಿರುವ ಪರಿಹಾರವನ್ನು ಮತ್ತೆ ಕಿತ್ತುಕೊಳ್ಳುತ್ತಿದೆ, ರೈತರ ಖಾತೆಗೆ ಜಮೆಯಾಗಿರುವ ಪರಿಹಾರ ಮೊತ್ತವನ್ನು ರೈತರಿಂದ ವಾಪಸ್ ಪಡೆದುಕೊಳ್ಳುತ್ತಿರುವ ಕಾರ್ಯವನ್ನು ಕಂದಾಯ ಇಲಾಖೆ ಮಾಡುತ್ತಿದೆ.!
ಸಂತಸ
ಅತಿವೃಷ್ಟಿಯಿಂದಾಗಿ ನಷ್ಟಕ್ಕೊಳ ಗಾಗಿರುವ ರೈತರು, ಬೆಳೆಗಾರರು ಸರಕಾರದ ನಿಯಮಾನುಸಾರ ಪರಿಹಾರಕ್ಕಾಗಿ ಅರ್ಜಿ ಗುಜರಾಯಿಸಿ ದ್ದರು. ಇದನ್ನು ಪರಿಶೀಲಿಸಿರುವ ಕಂದಾಯ ಇಲಾಖೆ ನಿಯಮಾನು ಸಾರ ಆರ್‍ಟಿಸಿಯಲ್ಲಿರುವ ಕೃಷಿಕರ ಜಾಗದ ವಿಸ್ತೀರ್ಣಗನುಗುಣವಾಗಿ ಇಂತಿಷ್ಟು ಪರಿಹಾರವೆಂದು ಅವರವರ ಖಾತೆಗಳಿಗೆ ಪರಿಹಾರ ಹಣ ಜಮಾ ಮಾಡಿದೆ. ಕಳೆದ ಫೆ. 4 ರಂದೇ ಖಾತೆಗಳಿಗೆ ಹಣ ಜಮೆಯಾಗಿದೆ. ಪರಿಹಾರ ಸಿಕ್ಕಿದ ಹರ್ಷ, ಅಸಮಾ ಧಾನಗಳ ನಡುವೆ ‘ಪಾಲಿಗೆ ಬಂದದ್ದು ಪಂಚಾಮೃತ’ ಎಂಬಂತೆ ರೈತರು ಹಣ ಡ್ರಾ ಮಾಡಿ ತಮಗಳ ಕಷ್ಟ ಕಾರ್ಪಣ್ಯ ಗಳಿಗೆ ಬಳಸಿಕೊಂಡಿದ್ದಾರೆ. ಇನ್ನೂ ಹಲವರು ಖಾತೆಯಲ್ಲಿಯೇ ಹಾಗೆಯೇ ಉಳಿಸಿಕೊಂಡಿದ್ದಾರೆ.
ಗ್ರಹಚಾರ
ಆದರೆ, ಗ್ರಹಚಾರವೆಂಬಂತೆ ನಿನ್ನೆ ಕಂದಾಯ ಇಲಾಖೆಯಿಂದ ಬ್ಯಾಂಕ್ ಗಳಿಗೆ ಆದೇಶ ರವಾನೆಯಾಗಿದೆ. ‘ನಮಗೆ ಸರಕಾರದಿಂದ ಕಡಿಮೆ ಪರಿಹಾರ ಬಂದಿದೆ, ಕೈ ತಪ್ಪಿನಿಂದಾಗಿ ರೈತರಿಗೆ ಹೆಚ್ಚಿನ ಪರಿಹಾರ ಹೋಗಿದೆ. ಹಾಗಾಗಿ ಬ್ಯಾಂಕ್‍ಗಳು ರೈತರ ಹಣವನ್ನು ಕಂದಾಯ ಇಲಾಖೆಗೆ ಹಿಂತಿರುಗಿಸಬೇಕು’ ಎಂಬ ಆದೇಶ ಹೋಗಿದೆ. ಇದನ್ನು ಪಾಲಿಸುತ್ತಿರುವ ಬ್ಯಾಂಕ್‍ನವರು ಖಾತೆಯಲ್ಲಿ ಹಣ ಉಳಿಸಿಕೊಂಡಿರುವ ಹಣವನ್ನು ಕಂದಾಯ ಇಲಾಖೆಗೆ ಹಿಂತಿರುಗಿ ಸುತ್ತಿದ್ದಾರೆ. ಈಗಾಗಲೇ ಹಣ ಡ್ರಾ ಮಾಡಿಕೊಂಡಿರುವ ರೈತರಿಗೆ ‘ ನೀವು ಡ್ರಾ ಮಾಡಿರುವ ಹಣವನ್ನು ವಾಪಸ್ ಜಮಾ ಮಾಡಬೇಕು’ ಎಂದು ಕರೆ ಮಾಡಿ ಸೂಚಿಸುತ್ತಿದ್ದಾರೆ.
ಇದೆಂತಹ ವಿಪರ್ಯಾಸವೆಂದರೆ ಕಂದಾಯ ಇಲಾಖೆಯ ಸಂತ್ರಸ್ತ ರೊಂದಿನ ಚೆಲ್ಲಾಟದಿಂದಾಗಿ ಈಗಲೇ ಸಂತ್ರಸ್ತರು ಪರಿತಪಿಸುತ್ತಿರುವ ಸಂದರ್ಭದಲ್ಲಿ ಮತ್ತೊಂದು ಬರೆ ಎಳೆದಂತಾಗಿದೆ. ವಿಕೋಪ ಸಂಭವಿಸಿ ಏಳು ತಿಂಗಳು ಕಳೆದ ಬಳಿಕ ಪರಿಹಾರ
(ಮೊದಲ ಪುಟದಿಂದ) ನೀಡುವ ಕಾರ್ಯವಾಗುತ್ತಿದ್ದರೂ ಮತ್ತೆ ಅದರಲ್ಲೂ ಲೋಪದೋಷವೆಂದರೆ ಇತರ ಕಾರ್ಯವೈಖರಿ ಹೇಗಿದೆಯೆಂಬದು ಪ್ರಶ್ನಾಹ್ನ? ಇತ್ತ ಪರಿಹಾರ ಹಣವನ್ನು ಖಾತೆಯಲ್ಲಿ ಉಳಿಸಿಕೊಂಡವರು ‘ಕೈಗೆ ಬಂದದ್ದು ಬಾಯಿಗೆ ಬರಲಿಲ್ಲ’ ಎಂದು ಪರಿತಪಿಸುತ್ತಿದ್ದರೆ, ಹಣ ಡ್ರಾ ಮಾಡಿದವರು ‘ನಾವ್ಯಾಕೆ ಕೊಡಬೇಕು, ಸಿಕ್ಕಿದೆ ಪುಡಿಗಾಸು, ಎಲ್ಲಿಂದ ಕೊಡೋದು?’ ಎಂದು ಹಂಬಲಿಸುವಂತಾಗಿದೆ.
ಅಹೋರಾತ್ರಿ ಧರಣಿ
ಜಲಪ್ರಳಯದಿಂದಾದ ರೈತರ ಬೆಳೆ ನಷ್ಟಕ್ಕೆ ಕನಿಷ್ಟ ಬೆಳೆ ಪರಿಹಾರವನ್ನು ರೈತರ ಬ್ಯಾಂಕ್ ಖಾತೆಗೆ ಹಾಕಿತ್ತಾದರೂ ಇದೀಗ ಆ ಹಣವನ್ನೂ ಖಾತೆಯಿಂದ ಹಿಂಪಡೆದು ರೈತರ ಗಾಯದ ಮೇಲೆ ಬರೆ ಎಳೆದಿದೆ ಎಂದು ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ಆರೋಪಿಸಿದ್ದಾರೆ. ಮೂರು ದಿನಗಳೊಳಗಾಗಿ ಸಂತ್ರಸ್ತ ರೈತರ ಖಾತೆಗೆ ಪರಿಹಾರದ ಹಣವನ್ನು ಮರುಪಾವತಿ ಮಾಡದೇ ಹೋದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಅಹೋರಾತ್ರಿ ಧರಣಿ ಆಯೋಜಿಸುವದಾಗಿಯೂ ಬಿಜೆಪಿ ಪ್ರಮುಖರು ಎಚ್ಚರಿಸಿದ್ದಾರೆ.
ಪ್ರಕೃತ್ತಿ ವಿಕೋಪದಿಂದ ಸಂತ್ರಸ್ತರಾದ ರೈತರ ಖಾತೆಗೆ ಕನಿಷ್ಟ ಬೆಳೆ ಪರಿಹಾರ ರೂ.999 ನಿಂದ 2300 ರೂ. ವರೆಗೆ ಸರ್ಕಾರ ನೀಡಿತ್ತು. ಕೊಡಗು ಜಿಲ್ಲೆಯಲ್ಲಿ ಪ್ರಥಮ ಹಂತದಲ್ಲಿ 1260 ಸಂತ್ರಸ್ತ ಕೃಷಿಕರಿಗೆ ನೇರವಾಗಿ ಅವರ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್ ಖಾತೆಗೆ ಈ ಹಣವನ್ನು ಜಮಾ ಮಾಡಲಾಗಿತ್ತು.
ಆದರೆ, ಇದೀಗ ಈ ಸರ್ಕಾರವು ಯಾವದೇ ಸೂಕ್ತ ಕಾರಣ ನೀಡದೇ ನಷ್ಟಕ್ಕೊಳಗಾದ ರೈತರ ಖಾತೆಯಿಂದ ಭಾಗಷ ಹಣವನ್ನು ಹಿಂದಕ್ಕೆ ಪಡೆದಿದೆ. ಇದು ರೈತರ ಗಾಯದ ಮೇಲೆ ಮತ್ತೆ ಬರೆ ಎಳೆದಂತಾಗಿದ್ದು ಸರ್ಕಾರದ ಈ ಧೋರಣೆಯನ್ನು ಬಿಜೆಪಿ ಖಂಡಿಸುತ್ತದೆ ಎಂದು ಕೆ.ಜಿ.ಬೋಪಯ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರ ಈಗಾಗಲೇ ಎಷ್ಟು ಹಣವನ್ನು ಸಂತ್ರಸ್ತ ರೈತರ ಖಾತೆಗೆ ಜಮಾ ಮಾಡಿತ್ತೋ ಅಷ್ಟೇ ಹಣವನ್ನು ಇನ್ನು 3 ದಿನಗಳೊಳಗಾಗಿ ಮರು ಜಮಾವಣೆ ಮಾಡಬೇಕು. ತಪ್ಪಿದ್ದಲ್ಲಿ ಜಿಲ್ಲಾಧಿಕಾರಿಯವರ ಕಚೇರಿ ಮುಂದೆ ಬಿಜೆಪಿ ವತಿಯಿಂದ ಆಹೋರಾತ್ರಿ ಪ್ರತಿಭಟನಾ ಧರಣಿ ನಡೆಸುವದಾಗಿ ಶಾಸಕ ಕೆ.ಜಿ.ಬೋಪಯ್ಯ, ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್, ಬಿಜೆಪಿ ರಾಜ್ಯ ಕಾರ್ಯದರ್ಶಿ ಮನುಮುತ್ತಪ್ಪ, ಮಡಿಕೇರಿ ತಾಲೂಕು ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್, ಜಿಲ್ಲಾ ಸಹಕಾರ ಪ್ರಕೋಷ್ಟದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಸನ್ನ, ಪ್ರಧಾನ ಕಾರ್ಯದರ್ಶಿ ಡೀನ್ ಬೋಪಣ್ಣ, ಅಡಿಕೆ ಬೆಳೆಗಾರರ ಸಂಘದ ನಿಡ್ಯಮಲೆ ನಂಜಪ್ಪ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. -ಕುಡೆಕಲ್ ಸಂತೋಷ್