ಮಡಿಕೇರಿ, ಫೆ. 22: ಬೈಕ್ ಹಾಗೂ ಸ್ಕೂಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ, ನಿನ್ನೆ ರಾತ್ರಿ 8.45ರ ಸುಮಾರಿಗೆ ಇಲ್ಲಿನ ಅಶೋಕಪುರ ಬಳಿ, ಬೈಕ್ ಸವಾರ ಮೃತನಾಗಿರುವ ದುರ್ಘಟನೆ ಸಂಭವಿಸಿದೆ. ಕಾಮಧೇನು ಪೆಟ್ರೋಲ್ ಬಂಕ್ ಬಳಿಯ ಆಟೋ ಸರ್ವೀಸ್ ನೌಕರ ಶಶಿಕುಮಾರ್ (27) ಮೃತ ದುರ್ದೈವಿ.

ಈತ ಕಡಗದಾಳು ನಿವಾಸಿಯಾಗಿದ್ದು, ನಗರದತ್ತ ತನ್ನ ಬೈಕ್‍ನಲ್ಲಿ ಬರುವಾಗ, ಚೇರಳ ಶ್ರೀಮಂಗಲ ಕಂಡಕೆರೆ ನಿವಾಸಿ ಪ್ರಭಾಕರ್ ತನ್ನ ಸ್ಕೂಟರ್‍ನಲ್ಲಿ ಇಲ್ಲಿಂದ ಆಚೆಗೆ ತೆರಳುತ್ತಿರುವ ವೇಳೆ ಅಪಘಾತ ಸಂಭವಿಸಿದೆ.ಪ್ರಭಾಕರ್ ನೀಡಿರುವ ದೂರಿನ ಮೇರೆಗೆ ನಗರ ಸಂಚಾರಿ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಮೃತ ಶಶಿಕುಮಾರ್ ಹೆಲ್ಮೆಟ್ ಧರಿಸದ ಪರಿಣಾಮ ಅಪಘಾತ ಸಂದರ್ಭ ತಲೆಗೆ ಪೆಟ್ಟಾಗಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾನೆ. ಮೃತ ಶಶಿಕುಮಾರ್ ಕಡಗದಾಳುವಿನ ತೋಟವೊಂದರ ಕಾರ್ಮಿಕರಾಗಿರುವ ನಾರಾಯಣ ಹಾಗೂ ಕಮಲ ದಂಪತಿಯ ಪುತ್ರ.