ಗೋಣಿಕೊಪ್ಪ ವರದಿ, ಫೆ. 23: ಇಲ್ಲಿನ ನಾಯರ್ ಸೊಸೈಟಿ ಶ್ರೀಲಕ್ಷ್ಮಿ ಮಹಿಳಾ ಘಟಕದ ವತಿಯಿಂದ ಅತ್ತೂರು ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಆಟುಕಲ್ ಪೊಂಗಾಲ್ ಆಚರಿಸಲಾಯಿತು.

ಮಹಿಳೆಯರು ಮಾತ್ರ ಪಾಲ್ಗೊಳ್ಳುವ ಈ ಆಚರಣೆಯಲ್ಲಿ ಘಟಕದ ಮಹಿಳೆಯರು ಪಾಲ್ಗೊಂಡರು. ಮಹಿಳೆಯರು ತಂದಿದ್ದ ಒಲೆಗಳಿಗೆ ದೀಪ ಹಚ್ಚುವ ಮೂಲಕ ಆಚರಣೆಗೆ ಚಾಲನೆ ನೀಡಲಾಯಿತು. ನಂತರ ಒಲೆಯಲ್ಲಿ ಬೇಯಿಸಿದ ಪಾಯಸವನ್ನು ಗಣಪತಿಗೆ ಪ್ರಸಾದವಾಗಿ ಅರ್ಪಿಸಲಾಯಿತು. ಮಹಿಳೆಯರು ಕೇರಳ ಶೈಲಿಯ ಉಡುಪು ತೊಟ್ಟು ಪಾಲ್ಗೊಂಡರು.

ಘಟಕದ ಅಧ್ಯಕ್ಷೆ ಸರಳ ಮಣಿಲಾಲ್ ಈ ಬಗ್ಗೆ ಮಾಹಿತಿ ನೀಡಿ, ಕೇರಳದ ಆಟುಕಲ್ ದೇವಿಯ ಸನ್ನಿಧಿಯಲ್ಲಿ ನಡೆಯುವ ಈ ಆಚರಣೆಯಲ್ಲಿ ಲಕ್ಷಾಂತರ ಮಹಿಳೆಯರು ಪಾಲ್ಗೊಂಡು ಹರಕೆ ತೀರಿಸುವ ಪದ್ಧತಿ ಇದೆ. ಇದರಂತೆ ಇಲ್ಲಿ ಆಚರಿಸಲಾಗುತ್ತಿದೆ ಎಂದರು.