ವೀರಾಜಪೇಟೆ, ಫೆ.22: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಗಡಿ ಭಾಗವನ್ನು ಗುರುತಿಸಿ ಈ ವ್ಯಾಪ್ತಿಯಲ್ಲಿ ಬರುವ ಆಸ್ತಿಯ ಎಲ್ಲ ಅನುಭೋಗದಾರರ, ಮನೆ ಕಟ್ಟಿಕೊಂಡು ವಾಸಿಸುತ್ತಿರುವ ನಿವಾಸಿಗಳು ಕಡ್ಡಾಯವಾಗಿ ತೆರಿಗೆ ಹಾಗೂ ನೀರಿನ ಶುಲ್ಕವನ್ನು ಪಟ್ಟಣ ಪಂಚಾಯಿತಿಗೆ ಪಾವತಿ ಮಾಡಬೇಕು. ಇದರಿಂದ ಪಟ್ಟಣ ಪಂಚಾಯಿತಿ ಆದಾಯವನ್ನು ಅಧಿಕಗೊಳಿಸಿ ಸಂಪನ್ಮೂಲವನ್ನು ಕ್ರೋಢಿಕರಿಸಲು ಸಾಧ್ಯವಾಗಲಿದೆ ಎಂದು ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ಬಿ.ಎಂ.ಗೋವಿಂದರಾಜು ಹೇಳಿದರು.
ಪಟ್ಟಣ ಪಂಚಾಯಿತಿ ಇಂದು ಹಮ್ಮಿಕೊಂಡಿದ್ದ 2019-20ರ ಬಜೆಟ್ನ್ನು ಸಿದ್ಧಪಡಿಸುವ ಪೂರ್ವಭಾವಿ ಸಭೆಯ ವಿಚಾರ ವಿನಿಮಯದಲ್ಲಿ ಭಾಗವಹಿÀಸಿದ್ದ ಗೋವಿಂದರಾಜು ಅವರು ಈಗಾಗಲೇ ಪಟ್ಟಣ ಪಂಚಾಯಿತಿಯ ಗಡಿ ರೇಖೆಯನ್ನು ಗುರುತಿಸಿ ಕಲ್ಲು ಹಾಕಲಾಗಿದೆ. ಆಜು ಬಾಜಿನ ಗ್ರಾಮ ಪಂಚಾಯಿತಿಗಳಿಗೂ ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಸೇರಿದ ಸರಹದ್ದಿನಲ್ಲಿರುವ ನಿವಾಸಿಗಳಿಂದ ತೆರಿಗೆ ಸಂಗ್ರಹಿಸದಂತೆ ಸರಹದ್ದಿನ ಸಂಬಂಧದಲ್ಲಿ ನೋಟೀಸ್ ನೀಡಲಾಗಿದೆ. ಪಟ್ಟಣ sssಪಂಚಾಯಿತಿ ವ್ಯಾಪ್ತಿಯಲ್ಲಿರುವವರು ಪಟ್ಟಣ ಪಂಚಾಯಿತಿಯೊಂದಿಗೆ ಸಹಕsರಿಸುವಂತೆ ಕೋರಿದರು.
ಸಭೆಯಲ್ಲಿ ಕುಡಿಯುವ ನೀರು, ರಸ್ತೆ, ನೈರ್ಮಲ್ಯಕ್ಕೆ ಆದ್ಯತೆ ನೀಡುವಂತೆಯೂ ಹಾಗೂ ಪಟ್ಟಣ ಪಂಚಾಯಿತಿಯ ಎಲ್ಲ ಆದಾಯ ಮೂಲಗಳಿಂದ ಸಂಪನ್ಮೂಲಗಳನ್ನು ಕ್ರೋಡೀಕರಿಸಿಕೊಂಡು ಜನಪರ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳುವಂತೆ ಬಜೆಟ್ನ್ನು ಸಿದ್ಧ ಪಡಿಸಲು ಸಭೆ ತೀರ್ಮಾನಿಸಿತು.
ಸಭೆಯಲ್ಲಿ ಕುಡಿಯುವ ನೀರಿನ ದರ ಪರಿಷ್ಕರಣೆ, ಮೀಟರ್ ಅಳವಡಿಕೆ ವಿಚಾರ ಬಂದಾಗ ಇದಕ್ಕೆ ಸದಸ್ಯ ಸಿ.ಕೆ.ಪೃಥ್ವಿನಾಥ್ ವಿರೋಧಿಸಿದರಲ್ಲದೆ. ಕೆಲವು ಬಡಾವಣೆಗಳಿಗೆ ದಿನ ಬಿಟ್ಟು ದಿನ ನೀರು ಪೊರೈಕೆಯಾದರೆ ಇನ್ನೂ ಕೆಲವು ಪ್ರದೇಶಗಳಿಗೆ ನೀರೇ ಬರುತ್ತಿಲ್ಲ. ಅಧಿಕಾರಿಗಳು ಪಟ್ಟಣದ ನಿವಾಸಿಗಳಿಗೆ ನಿರಂತರ ನೀರು ಪೊರೈಕೆ ಮಾಡಲು ಕ್ರಮ ಕೈಗೊಳ್ಳಬೇಕು, ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯರಿಗೆ ಸಾರ್ವಜನಿಕ ಆಸ್ಪತ್ರೆಯ ಆಡಳಿತ ಸರಿಯಾದ ರೀತಿಯಲ್ಲಿ ಗೌರವ ನೀಡುತ್ತಿಲ್ಲ. ಆಸ್ಪತ್ರೆಗೆ ಮೂಲ ಸೌಲಭ್ಯಗಳನ್ನು ಹೊರತುಪಡಿಸಿದಂತೆ ಪಟ್ಟಣ ಪಂಚಾಯಿತಿಯಿಂದ ಯಾವದೇ ಸೌಲಭ್ಯಗಳನ್ನು ನೀಡಬಾರದೆಂದು ಆಗ್ರಹಿಸಿದರು.
ವೀರಾಜಪೇಟೆಯಲ್ಲಿರುವ ಎಲ್ಲ ಸ್ಮಶಾನಗಳ ಅಭಿವೃದ್ಧಿ, ಬಟರ್ ಫ್ಲೈ ಪಾರ್ಕ್ ನಿರ್ಮಾಣ ಮಾಡುವಂತೆ ಡಿ.ಪಿ.ರಾಜೇಶ್ ಪದ್ಮನಾಭ ಸಲಹೆ ನೀಡಿದರು. ಪೂರ್ವಭಾವಿ ಬಜೆಟ್ ಸಭೆಯಲ್ಲಿ ಎಸ್.ಎಚ್.ಮತೀನ್, ಮಹಮ್ಮದ್ ರಾಫಿ, ವಿ.ಆರ್.ರಜನಿಕಾಂತ್, ಸುನೀತಾ ಜೂನಾ, ಆಗಸ್ಟಿನ್ ಸುಭಾಷ್ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದ್ದರು.
ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಪೂರ್ವಭಾವಿ ಬಜೆಟ್ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಭಿಯಂತರ ಎನ್.ಪಿ.ಹೇಮ್ ಕುಮಾರ್ ಅವರು ಮುಂದಿನ ಸಾಲಿನ ಯೋಜನೆಗಳ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು. ಸರ್ಕಲ್ ಇನ್ಸ್ಪೆಕ್ಟರ್ ಕ್ಯಾತೆಗೌಡ, ಎಸ್.ಐ. ಸಂತೋಷ್ ಕಶ್ಯಪ್ ಸಭೆಯಲ್ಲಿ ಉಪಸ್ಥಿತರಿದ್ದರು. ಸಭೆಯ ಪ್ರಾರಂಭದಲ್ಲಿ ಕಾಶ್ಮೀರದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.