ಶ್ರೀಮಂಗಲ, ಫೆ. 21: ಸೇವ್ ಕೊಡಗು ಫೋರಂ ಸಂಘಟನೆಯ ನೇತೃತ್ವದಲ್ಲಿ ಗೋಣಿಕೊಪ್ಪದಲ್ಲಿ ಕೊಡಗಿನ ಮೂಲಕ ಹಲವು ಬಹುಪಥ ರಾಷ್ಟ್ರೀಯ ಹೆದ್ದಾರಿ ಮತ್ತು ರೈಲ್ವೆ ಮಾರ್ಗ ಯೋಜನೆಯನ್ನು ಮಾಡಬೇಕೆಂದು ಒತ್ತಾಯಿಸಿ ನಡೆಸುತ್ತಿರುವ ರ್ಯಾಲಿಯ ಬಗ್ಗೆ ಕೊಡಗು ಮಾರಕ ಯೋಜನೆ ವಿರೋಧಿ ಹೋರಾಟ ವೇದಿಕೆ ಅಸಮಾಧಾನ ವ್ಯಕ್ತಪಡಿಸಿದೆ. ಸೇವ್ ಕೊಡಗು ಫೋರಂ ಟಿಂಬರ್, ಮರಳು, ರಿಯಲ್ ಎಸ್ಟೇಟ್ ಮಾಫಿಯಾದ ಕಪಿಮುಷ್ಟಿಯಲ್ಲಿ ಸಿಲುಕಿದ್ದು, ಈ ದಂಧೆ ನಡೆಸುವವರ ಪರವಾಗಿ ಹೋರಾಟ ನಡೆಸುತ್ತಿದೆ ಎಂದು ವೇದಿಕೆಯ ಪ್ರಮುಖರು ಹೇಳಿದ್ದಾರೆ.

ಪೊನ್ನಂಪೇಟೆಯಲ್ಲಿ ವೇದಿಕೆಯ ಅಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್‍ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಮುಖರು ಚರ್ಚಿಸಿ ಸೇವ್ ಕೊಡಗು ಫೋರಂ ಪ್ರಮುಖರ ನಿಲುವನ್ನು ಸ್ಪಷ್ಟಪಡಿಸಲು ಒತ್ತಾಯಿಸಿದ್ದಾರೆ.

ಕೊಡಗಿನಲ್ಲಿ ಕೆಲವು ಗ್ರಾಮ ಪಂಚಾಯಿತಿಗಳು ಬಹುಪಥ ಹೆದ್ದಾರಿ ಯೋಜನೆ ವಿರುದ್ಧ ನಿರ್ಣಯ ಮಾಡಿವೆ ಅವರ ಅಭಿಪ್ರಾಯವನ್ನು ಸೇವ್ ಕೊಡಗು ಕೇಳಿದೆಯೆ?. ಕೊಡಗಿನ ಮೂಲಕ ನಾಲ್ಕು ಬಹುಪಥದ ರಾಷ್ಟ್ರೀಯ ಹೆದ್ದಾರಿ ಯೋಜನೆ ಪ್ರಸ್ತಾವವಿದೆ ಇದರಲ್ಲಿ ಈಗ ಇರುವ ರಸ್ತೆಯ ಎರಡು ಬದಿಯ ಜಾಗವನ್ನು ಬಳಸಿಕೊಂಡು ಎರಡು ಪಥದ ರಸ್ತೆ ಮತ್ತು ಮೇಲ್ದರ್ಜೆಗೇರಿಸಲು ನಮ್ಮ ಆಕ್ಷೇಪವಿಲ್ಲ. ಅಂದರೆ ಕುಶಾಲನಗರದಿಂದ ಹುಣಸೂರುವರೆಗೆ ಈಗ ಇರುವ ಹೆದ್ದಾರಿಯಷ್ಟು ಅಗಲೀಕರಣ ಮಾಡಲು ನಮ್ಮ ವಿರೋಧವಿಲ್ಲ. ಆದರೆ ನಾಲ್ಕುಪಥದ ಹೆದ್ದಾರಿ ಅನುಷ್ಠಾನವಾದರೆ ಜಿಲ್ಲೆಯ ಕೆಲವು ಪಟ್ಟಣಗಳೇ ನಾಶವಾಗಲಿವÉ. ರಸ್ತೆಯ ಬದಿ ಕಾಫಿ ಬೆಳೆಗಾರರು ರೈತರು ತಮ್ಮ ಕೃಷಿ ಭೂಮಿಯನ್ನು ಕಳೆದುಕೊಳ್ಳುತ್ತಾರೆ. ರೈಲ್ವೆ ಹಾಗೂ ಬಹುಪಥ ಹೆದ್ದಾರಿ ಮಾಡಲು ಬೆಂಬಲಿಸುತ್ತಿರುವ ಸೇವ್ ಕೊಡಗು ಫೋರಂ ಇವರೆಲ್ಲರ ಅಭಿಪ್ರಾಯ ಹಾಗೂ ಒಪ್ಪಿಗೆ ಪಡೆದಿದ್ದಾರಾ ಎಂದು ವೇದಿಕೆಯ ಪ್ರಮುಖರು ಪ್ರಶ್ನಿಸಿದರು.

ಇಂಡಿಯನ್ ಇನ್ಸ್‍ಟ್ಯೂಟ್ ಆಫ್ ಸೈನ್ಸ್ ವತಿಯಿಂದ ಕೊಡಗು ಮೂಲಕ ಬಹುಪಥ ಹೆದ್ದಾರಿ ಮತ್ತು ರೈಲ್ವೆ ಮಾರ್ಗದ ಬಗ್ಗೆ ವರದಿಯೊಂದನ್ನು ತಯಾರಿಸಿದ್ದು, ಈ ವರದಿ ಪ್ರಕಾರ ಈ ಯೋಜನೆಯಿಂದ ಕೊಡಗಿನ ಪರಿಸರ, ಇಲ್ಲಿನ ಕೃಷಿ ಹಾಗೂ ಕಾಫಿ ಬೆಳೆಗಾರರಿಗೆ ಹೆಚ್ಚಿನ ಧÀಕ್ಕೆ ಉಂಟಾಗಲಿದೆ ಎಂಬದನ್ನು ಪ್ರತಿಪಾದಿಸಿದೆ. ಮೈಸೂರು, ಕುಶಾಲನಗರ, ಮಡಿಕೇರಿ ರೈಲ್ವೆ ಯೋಜನೆಯಲ್ಲಿ ಮಡಿಕೇರಿಯ ರೈಲ್ವೆ ನಿಲ್ದಾಣ ಮಕ್ಕಂದೂರಿನಲ್ಲಿ ಸ್ಥಾಪನೆ ಮಾಡುವ ಯೋಜನೆ ಇದೆ. ಮಕ್ಕಂದೂರಿನಲ್ಲಿ ಕಳೆದ ಆಗಸ್ಟ್‍ನಲ್ಲಿ ಸಂಭವಿಸಿದ ಪ್ರಾಕೃತಿಕ ದುರಂತದಿಂದ ದೊಡ್ಡ ಮಟ್ಟದ ಭೂಕುಸಿತ ಉಂಟಾಗಿದೆ. ಈ ಯೋಜನೆ ರೂಪುಗೊಂಡರೆ ಅದನ್ನು ತಡೆದುಕೊಳ್ಳುವ ಶಕ್ತಿ ಈ ವ್ಯಾಪ್ತಿಗೆ ಇದೆಯೆ ಹಾಗೂ ಮಕ್ಕಂದೂರಿನಲ್ಲಿ ರೈಲ್ವೆ ನಿಲ್ದಾಣ ಸ್ಥಾಪಿಸುವ ಬಗ್ಗೆ ಅಲ್ಲಿನ ಜನರ ಅಭಿಪ್ರಾಯ ಕೇಳಿದ್ದೀರಾ ಎಂದು ವೇದಿಕೆಯ ಪ್ರಮುಖರು ಪ್ರಶ್ನಿಸಿದರು.

ಮರ ತೆಗೆಯುವದು ಬೇಡ, ಮಾರಾಟ ಬೇಡ ಎಂಬುದು ನಮ್ಮ ನಿಲುವಲ್ಲ. ಕಾನೂನು ಪ್ರಕಾರ ಮಾಡಲು ಅವಕಾಶವಿದೆ. ಜಿಲ್ಲೆಯ ಮೂಲಕ ಪ್ರಸ್ತಾವನೆಯಲ್ಲಿ 2 ರೈಲ್ವೆ ಮಾರ್ಗ ಮತ್ತು 4 ಬಹುಪಥ ಹೆದ್ದಾರಿಯಿಂದ 3-4 ಲಕ್ಷ ಮರ ಖಂಡಿತ ಹನನವಾಗಲಿದೆ. ಈ ಯೋಜನೆಗೆ ಬೆಂಬಲಿಸುತ್ತಿರುವ ಇವರು ಏನಾದರೂ ಹನನವಾಗುವ ಮರಗಳನ್ನು ಖರೀದಿಸುವ ಮನಸ್ಸು ಇದೇಯಾ ಎಂದು ವೇದಿಕೆಯವರು ಪ್ರಶ್ನಿಸಿದರು.

ಕೊಡಗು ಮಾರಕ ಯೋಜನೆ ವಿರೋಧಿ ಹೋರಾಟ ವೇದಿಕೆ ಮತ್ತು ಪರಿಸರ ರಕ್ಷಣೆಗೆ ಹೋರಾಟ ನಡೆಸುತ್ತಿರುವವರಿಗೆ ವಿದೇಶಿ ಹಣ ಬರುವ ಬಗ್ಗೆ ಸೇವ್ ಕೊಡಗು ಫೋರಂ ಪ್ರಮುಖರು ಪ್ರಸ್ತಾಪ ಮಾಡಿದ್ದಾರೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾವ ಯಾವ ವ್ಯಕ್ತಿ ಮತ್ತು ಸಂಘಟನೆಗಳಿಗೆ ಕಾನೂನು ಉಲ್ಲಂಘಿಸಿ ಹಣ ಬರುತ್ತಿದೆ ಅಥವಾ ಬಂದಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಈ ಹಣ ಎಲ್ಲಿಂದ ಬಂತು ಹೇಗೆ ಮತ್ತು ಎಷ್ಟು ಬಂತು ಎಂಬುದರ ಮಾಹಿತಿಯನ್ನು ಕೂಡಲೆ ಬಹಿರಂಗ ಪಡಿಸುವಂತೆ ಒತ್ತಾಯಿಸಿದರು.

ಫೋರಂ, ರೈತರು ಹಾಗೂ ಬೆಳೆಗಾರರ ಹಿತಾಸಕ್ತಿಗೆ ಹೋರಾಟ ನಡೆಸಿದರೆ ಅದಕ್ಕೆ ತಾವು ಸಂಪೂರ್ಣ ಬೆಂಬಲ ನೀಡುವದಾಗಿ ವೇದಿಕೆಯ ಪ್ರಮುಖರು ಹೇಳಿದರು. ಪ್ರಮುಖರಾದ ಕರ್ನಲ್ ಸಿ.ಪಿ. ಮುತ್ತಣ್ಣ, ಜಮ್ಮಡ ಗಣೇಶ್ ಅಯ್ಯಣ್ಣ, ಚೆಪ್ಪುಡಿರ ಶೆರಿಸುಬ್ಬಯ್ಯ, ಮಲ್ಲಮಾಡ ಪ್ರಭುಪೂಣಚ್ಚ, ಶಾನ್‍ಬೋಪಯ್ಯ, ಹಾಜರಿದ್ದರು.