ಮಡಿಕೇರಿ, ಫೆ. 21: ಇತ್ತೀಚೆಗೆ ವಿದ್ಯಾರ್ಥಿನಿಯನ್ನು ಅತ್ಯಾಚಾರಗೈದು ಹತ್ಯೆ ಮಾಡಿರುವ ಆರೋಪಿಗಳನ್ನು ಮರಣ ದಂಡನೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿರುವ ಪ್ರಜಾ ಪರಿವರ್ತನಾ ವೇದಿಕೆಯ ಕೊಡಗು ಜಿಲ್ಲಾ ಘಟಕ, ಹೊರ ರಾಜ್ಯದ ವಲಸೆ ಕಾರ್ಮಿಕರ ಬಗ್ಗೆ ಜಿಲ್ಲಾಡಳಿತ ಎಚ್ಚರ ವಹಿಸಬೇಕು ಎಂದು ಸಲಹೆ ಮಾಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಜಿಲ್ಲಾಧ್ಯಕ್ಷ ಹೆಚ್.ಎಸ್. ಮುತ್ತಪ್ಪ, ಪ್ರಕರಣವನ್ನು ಜಿಲ್ಲಾ ಪೊಲೀಸ್ ಇಲಾಖೆ ಅತಿ ಶೀಘ್ರವಾಗಿ ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಪ್ರಕರಣದ ಆರೋಪಿಗಳನ್ನು ಮರಣ ದಂಡನೆಗೆ ಗುರಿಪಡಿಸುವದರೊಂದಿಗೆ ಇನ್ನು ಮುಂದೆ ಇಂತಹ ಪ್ರಕರಣಗಳು ನಡೆಯದಂತೆ ಸಮಾಜಕ್ಕೆ ಎಚ್ಚರಿಕೆ ನೀಡಬೇಕಿದೆ ಎಂದು ಅಭಿಪ್ರಾಯಪಟ್ಟರು.

ಕಡಿಮೆ ಸಂಬಳಕ್ಕೆ ದುಡಿಯುವ ಕಾರಣಕ್ಕಾಗಿ ಹೊರ ರಾಜ್ಯದ ಕಾರ್ಮಿಕರನ್ನು ಪೂರ್ವಾಪರ ವಿಚಾರಿಸದೆ ಕೆಲಸಕ್ಕೆ ಸೇರಿಸಿಕೊಂಡು ಲೈನ್‍ಮನೆಗಳಲ್ಲಿ ಆಶ್ರಯ ನೀಡುವದರಿಂದ ಇಂತಹ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿಕೊಟ್ಟಂತಾಗುತ್ತಿದೆ. ಜಿಲ್ಲೆಯ ಎಲ್ಲಾ ಬೆಳೆಗಾರರು ಎಚ್ಚೆತ್ತುಕೊಂಡು ಬೆಳೆಗಾರರ ಸಂಘದ ಮೂಲಕ ಜಿಲ್ಲಾಮಟ್ಟದ ಸಭೆ ನಡೆಸಿ ತಮ್ಮ ತಮ್ಮ ತೋಟಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದರು.

ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎನ್. ಗಣೇಶ್ ಮಾತನಾಡಿ, ಭಾರತದ ಯೋಧರ ಮೇಲೆ ಉಗ್ರಗಾಮಿಗಳು ನಡೆಸಿರುವ ಧಾಳಿಯನ್ನು ಸಂಘಟನೆ ಉಗ್ರವಾಗಿ ಖಂಡಿಸುತ್ತದೆ ಎಂದರು. ಗೋಷ್ಠಿಯಲ್ಲಿ ಸಂಘನೆಯ ಜಿಲ್ಲಾ ಖಜಾಂಚಿ ರಾಮ, ತಾಲೂಕು ಅಧ್ಯಕ್ಷ ಮುತ್ತ ಉಪಸ್ಥಿತರಿದ್ದರು.