ಗೋಣಿಕೊಪ್ಪಲು, ಫೆ. 20: ಹೊರ ರಾಜ್ಯದ ಕಾರ್ಮಿಕರಿಂದ ಹತ್ಯೆಯಾದ ವಿದ್ಯಾರ್ಥಿನಿ ಸಂಧ್ಯಾಳ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಅಸ್ಸಾಮಿ ಕಾರ್ಮಿಕರನ್ನು ಜಿಲ್ಲೆಯಿಂದ ಹೊರ ಕಳುಹಿಸಬೇಕು ಎಂದು ಆಗ್ರಹಿಸಿ ಗೋಣಿಕೊಪ್ಪ ಕಾವೇರಿ ಕಾಲೇಜಿನ ಪದವಿ, ಪದವಿ ಪೂರ್ವ ಹಾಗೂ ಪಾಲಿಟಿಕ್ನಿಕ್ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಗೋಣಿಕೊಪ್ಪ ಬಸ್ ನಿಲ್ದಾಣದಲ್ಲಿ ಜಮಾವಣೆ ಗೊಂಡು ಆಗ್ರಹಿಸಿದರು.

ಗೋಣಿಕೊಪ್ಪ ಕಾವೇರಿ ಕಾಲೇಜಿನಿಂದ ಮೆರವಣಿಗೆಯಲ್ಲಿ ಸಾಗಿ ಬಂದ ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ಅಸ್ಸಾಮಿ ಕಾರ್ಮಿಕರ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನಾ ಸಭೆಯ ನ್ನುದ್ದೇಶಿಸಿ ಮಾತನಾಡಿದ, ಅಂತಿಮ ಬಿ.ಎ. ಪದವಿ ವಿದ್ಯಾರ್ಥಿ ಮಹಮ್ಮದ್ ಶಾಹಿನ್ ಹೊರ ರಾಜ್ಯದ ಕಾರ್ಮಿಕರಿಂದ ಹತ್ಯೆಯಾದ ಸಂಧ್ಯಾಳ ಕುಟುಂಬಕ್ಕೆ ಸರಕಾರ ಸೂಕ್ತ ಪರಿಹಾರ ನೀಡಬೇಕು. ಆಕೆಯ ಕುಟುಂಬದ ಸದಸ್ಯರೋರ್ವರಿಗೆ ಸರಕಾರಿ ಕೆಲಸ ನೀಡಬೇಕು ಆದಷ್ಟು ಬೇಗನೇ ಜಿಲ್ಲೆಯಲ್ಲಿ ಅನಧಿಕೃತವಾಗಿ ನೆಲೆನಿಂತಿರುವ ಹೊರ ರಾಜ್ಯದ ಕಾರ್ಮಿಕರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ವಿದ್ಯಾರ್ಥಿ ನಾಯಕಿ ಪೂಜ ಮೊಹನ್ ರಾವ್ ಮಾತನಾಡಿ, ಹೊರರಾಜ್ಯದ ಕಾರ್ಮಿಕರಿಂದ ಮುಗ್ಧ ಯುವತಿಯ ಹತ್ಯೆಯಾಗಿದ್ದು, ಈ ಹಿನ್ನೆಲೆಯಲ್ಲಿ ಹೊರ ರಾಜ್ಯದ ಕಾರ್ಮಿಕರಿಗೆ ತೋಟಗಳಲ್ಲಿ ಅವಕಾಶ ನೀಡಬಾರದು ಎಂದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಗೋಣಿಕೊಪ್ಪ ಶಾಖೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಮನವಿ ಪತ್ರವನ್ನು ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳ ಮೂಲಕ ಜಿಲ್ಲಾಡಳಿತಕ್ಕೆ ಕಳುಹಿಸಿ ಕೊಡಲಾಯಿತು.

ಪ್ರತಿಭಟನೆಯಲ್ಲಿ ವಿದ್ಯಾರ್ಥಿ ನಾಯಕರುಗಳಾದ ಅಭಿಲಾಷ್, ದೀಪಕ್, ಸಿತೇಶ್ ಮುಂತಾದವರು ಹಾಜರಿದ್ದರು. ಗೋಣಿಕೊಪ್ಪ ಪೊಲೀಸ್ ಠಾಣೆಯ ಠಾಣಾಧಿಕಾರಿ ಶ್ರೀಧರ್ ನೇತೃತ್ವದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು.