ಕುಶಾಲನಗರ, ಫೆ. 20: ದುಬಾರೆಯಲ್ಲಿ ವನದೇವಿ ಅಮ್ಮಾಳಮ್ಮ ದೇವಿಯ ವಾರ್ಷಿಕ ಪೂಜಾ ಕೈಂಕರ್ಯ ಸೋಮವಾರ ಶ್ರದ್ಧಾಭಕ್ತಿಯಿಂದ ನೆರವೇರಿತು.

ದುಬಾರೆ ಸಾಕಾನೆ ಶಿಬಿರದಿಂದ 5 ಕಿ.ಮೀ. ಅಂತರದ ಅರಣ್ಯ ಪ್ರದೇಶದಲ್ಲಿರುವ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಅಮ್ಮಾಳೆ ದೇವಿಗೆ ಅರಣ್ಯ ಇಲಾಖೆ ಸಹಯೋಗದೊಂದಿಗೆ ಸ್ಥಳೀಯರಿಂದ ವಿಶೇಷ ಪೂಜಾ ವಿಧಿಗಳನ್ನು ನೆರವೇರಿಸಲಾಯಿತು.

ಶ್ರೀ ಅಮ್ಮಾಳಮ್ಮ, ಬಸವೇಶ್ವರ ಮತ್ತು ನಾಗದೇವರಿಗೆ ಹಾಲು ತುಪ್ಪದ ಅಭಿಷೇಕ, ನೈವೇದ್ಯ ಮತ್ತಿತರ ಪೂಜೆ ನಡೆಯಿತು. ಪೂಜಾ ಕೈಂಕರ್ಯದಲ್ಲಿ ಸಾಕಾನೆ ಶಿಬಿರದ ಸಿಬ್ಬಂದಿಗಳು, ಅರಣ್ಯ ವಾಸಿಗಳು ಪಾಲ್ಗೊಂಡು ಕಾಡು ಮತ್ತು ಕಾಡಿನ ಜನರ ಸುಭೀಕ್ಷೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಆದಿವಾಸಿಗಳ ಒಡನಾಡಿಯಾಗಿರುವ ಸಾಕಾನೆಗಳನ್ನು ಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿ ಹಣ್ಣು ಹಂಪಲು ತಿನ್ನಿಸಲಾಯಿತು. ಸಾಕಾನೆ ಶಿಬಿರದ ಕಂಜನ್, ಇಂದ್ರ ಮತ್ತು ಏಕದಂತ ಆನೆಗಳು ಪೂಜೆಯಲ್ಲಿ ಪಾಲ್ಗೊಂಡು ದೇವರನ್ನು ಆರಾಧಿಸುವದರೊಂದಿಗೆ ಪೂಜೆಯಲ್ಲಿ ಪಾಲ್ಗೊಂಡಿದ್ದವು.

ಈ ಸಂದರ್ಭ ಮಾತನಾಡಿದ ಬುಡಕಟ್ಟು ಕೃಷಿಕರ ಸಂಘದ ತಾಲೂಕು ಅಧ್ಯಕ್ಷ ಆರ್.ಕೆ. ಚಂದ್ರ, ನೂರಾರು ವರ್ಷಗಳ ಇತಿಹಾಸ ಹೊಂದಿರುವ ಅಮ್ಮಾಳೆ ದೇವರ ಕೃಪೆಯಿಂದ ಅರಣ್ಯ ವಾಸಿಗಳು ಮತ್ತು ಅರಣ್ಯ ಸದಾ ಸುರಕ್ಷತೆಯಿಂದ ಕೂಡಿದೆ. ತಮ್ಮ ಬೇಡಿಕೆಗಳು, ಇಷ್ಟಾರ್ಥಗಳ ಈಡೇರಿಕೆಗೆ ಹೊತ್ತ ಹರಕೆಯಂತೆ ಪ್ರತಿ ವರ್ಷ ಸಂಭ್ರಮದಿಂದ ಅಮ್ಮಾಳೆ ಪೂಜೆ ನೆರವೇರಿಸಲಾಗುತ್ತದೆ. ಕಾಡಿಗೆ ಬೆಂಕಿ ಬಿದ್ದು ಅನಾಹುತವಾಗದಂತೆ, ಕಾಲಕಾಲಕ್ಕೆ ಮಳೆಯಾಗುವಂತೆ, ವನ್ಯಮೃಗಗಳಿಂದ ಆಪತ್ತು ಎದುರಾಗದಂತೆ ದೇವಿ ಕಾಪಾಡುತ್ತಾ ಬರುತ್ತಿದ್ದು ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ಕೆಲಸ ಕಾರ್ಯದ ಸಂದರ್ಭ ಪ್ರಥಮವಾಗಿ ಅಮ್ಮಾಳಮ್ಮ ದೇವರನ್ನು ಸ್ಮರಿಸಿ ತೆರಳುವದು ವಾಡಿಕೆ ಎಂದರು. ದುಬಾರೆಯ ದೇವ ಮತ್ತು ಶಂಕರ ಪೂಜಾ ವಿಧಿ ನೆರವೇರಿಸಿದರು. ಮರವೊಂದಕ್ಕೆ ಪೂಜೆ ಸಲ್ಲಿಸಿ ನೈವೇದ್ಯ ಸಮರ್ಪಿಸಿ ಹಿರಿಯರನ್ನು ಕೂಗಿ ಕರೆದು ಸಂತುಷ್ಟಗೊಳಿಸುವ ಆಚರಣೆ ನಡೆಯಿತು. ಬಳಿಕ ನೆರೆದಿದ್ದ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು.

ಈ ಸಂದರ್ಭ ಅರಣ್ಯ ಇಲಾಖೆ ಸಿಬ್ಬಂದಿಗಳಾದ ರಮೇಶ್, ಅಶೋಕ, ಲಕ್ಷ್ಮಣ ರೈ, ಪೂವಪ್ಪ, ಕಣಿವೆ ನಂಜುಂಡ, ಶಿಬಿರದ ನಿವಾಸಿಗಳಾದ ಚಿನ್ನಪ್ಪ, ಬಸವರಾಜು, ಈರ, ನಯಾಜ್, ವಿಜಯ, ಹರೀಶ್, ಕಿರಣ, ಚಂದ್ರ, ಭಾಸ್ಕರ, ಮಾವುತ ಕವಾಡಿಗರಾದ ರಾಜು, ಶಿವು, ರಂಗ, ಮಣಿ, ವಿಜಯ ಮತ್ತಿತರರು ಇದ್ದರು.