ಮಡಿಕೇರಿ, ಫೆ. 20: ಬಜೆಟ್ನಲ್ಲಿ ಮುಸ್ಲಿಂರನ್ನು ರಾಜ್ಯ ಸರಕಾರ ಕಡೆಗಣಿಸಿದೆ ಎಂದು ಆರೋಪಿಸಿ ಎಸ್ಡಿಪಿಐ ವತಿಯಿಂದ ರಾಜ್ಯ ದಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ಮಡಿಕೇರಿಯಲ್ಲೂ ಪ್ರತಿಭಟನೆ ನಡೆಯಿತು.
ನಗರದ ಇಂದಿರಾಗಾಂಧಿ ವೃತ್ತದ ಬಳಿ ಜಮಾಯಿಸಿದ ಪ್ರತಿಭಟನಾ ಕಾರರು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಎಸ್ಡಿಪಿಐ ಸಂಘಟನೆಯ ಪ್ರಮುಖರಾದ ಟಿ.ಹೆಚ್. ಅಬೂಬಕರ್, ರಾಜ್ಯ ಸಮ್ಮಿಶ್ರ ಸರಕಾರ ಮಂಡನೆ ಮಾಡಿದ ಬಜೆಟ್ನಲ್ಲಿ ಕೇವಲ 700 ರಿಂದ 800 ಕೋಟಿ ಅನುದಾನವನ್ನು ಮಾತ್ರ ಅಲ್ಪಸಂಖ್ಯಾತರಿಗಾಗಿ ಮೀಸಲಿಡ ಲಾಗಿದೆ. ರೂ. 6 ಕೋಟಿ ಜನರಲ್ಲಿ ಶೇ.20 ರಷ್ಟು ಅಲ್ಪಸಂಖ್ಯಾತ ಜನಾಂಗದವರಿದ್ದಾರೆ. ಆದರೆ ಚುನಾವಣೆ ದೃಷ್ಟಿಯನ್ನಿಟ್ಟುಕೊಂಡು ಘೋಷಣೆ ಮಾಡಿದ ಬಜೆಟ್ನಲ್ಲಿ ಅಲ್ಪಸಂಖ್ಯಾತರ ವಿರುದ್ಧ ಸೇಡಿನ ರಾಜಕಾರಣ ಮಾಡಿದಂತಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯ ಅಮಿನ್ ಮೊಹಿಸಿನ್ ಸೇರಿದಂತೆ, ಸಂಘಟನೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.