ವೀರಾಜಪೇಟೆ, ಫೆ. 20: ಮಂಗಳೂರು ವಿಶ್ವವಿದ್ಯಾಲಯದ ಅಧೀನದಲ್ಲಿರುವ ಕೊಡಗು ವಲಯದ ಮೂರನೇ ವರ್ಷದ ಜಿಲ್ಲಾ ಮಟ್ಟದ ಪದವಿ ಅಂತರ ಕಾಲೇಜು ಗ್ರಾಮೀಣ ಕ್ರೀಡಾಕೂಟವನ್ನು ವೀರಾಜಪೇಟೆಯ ಕಾವೇರಿ ಪದವಿ ಕಾಲೇಜಿನಲ್ಲಿ ತಾ. 27 ರಂದು ಆಯೋಜಿಸಲಾಗಿದೆ ಎಂದು ಕಾಲೇಜಿನ ಅಸೋಸಿಯೇಟೆಡ್ ಫಿಸಿಕಲ್ ಡೈರೆಕ್ಟರ್ ಡಾ. ಎಂ.ಎಂ ದೇಚಮ್ಮ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇಂದಿನ ಆಧುನಿಕ ಯುಗದಲ್ಲಿ ನಶಿಸಿಹೋಗುತ್ತಿರುವ ಗ್ರಾಮೀಣ ಕ್ರೀಡೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಮಂಗಳೂರು ವಿಶ್ವವಿದ್ಯಾಲಯ ಕ್ರೀಡೆಗಾಗಿಯೇ ಹಣವನ್ನು ಮೀಸಲಿಟ್ಟಿದೆ. ಕ್ರೀಡಾಕೂಟದಲ್ಲಿ ಗ್ರಾಮೀಣ ಕ್ರೀಡೆಗಳಾದ ತೆಂಗಿನಕಾಯಿಗೆ ಕಲ್ಲು ಹೊಡೆಯುವದು, ಹಗ್ಗಜಗ್ಗಾಟ, ರಬ್ಬರ್‍ಬಿಲ್ಲು, ಚಿನ್ನಿದಾಂಡು, ಲಗೋರಿ, ಶಕ್ತಿಕೋಲ್‍ನಂತಹ ಕ್ರೀಡೆಗಳನ್ನು ಏರ್ಪಡಿಸಲಾಗಿದೆ. ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಉಂಟಾದ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಇಲ್ಲದೆ ಸರಳವಾಗಿ ಕ್ರೀಡಾಕೂಟವನ್ನು ಆಚರಿಸಲಾಗುವದು. ಕ್ರ್ರೀಡಾಕೂಟವನ್ನು ಕಾಲೇಜಿನ ಪ್ರಾಂಶುಪಾಲ ಪ್ರೋ ಸಿ.ಎಂ ನಾಚಪ್ಪ ಉದ್ಘಾಟಿಸಲಿದ್ದಾರೆ. ಕಾವೇರಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ಕುಲ್ಲಚಂಡ ಬೋಪಣ್ಣ ಮುಖ್ಯ ಅತಿಥಿಗಳಾಗಿರುತ್ತಾರೆ. ಸಮಾರೋಪ ಸಮಾರಂಭ ಅಪರಾಹ್ನ 3 ಗಂಟೆಗೆ ನಡೆಯಲಿದ್ದು, ಮಂಗಳೂರು ವಿಶ್ವವಿದ್ಯಾಲಯದ ಸಹಾಯಕ ದೈಹಿಕ ನಿರ್ದೇಶಕ ಪ್ರಸನ್ನ ಉಪಸ್ಥಿತಲಿರುವರು ಎಂದು ಹೇಳಿದರು.

ಗೋಷ್ಠಿಯಲ್ಲಿ ಕ್ರೀಡಾ ಸಂಚಾಲಕರಾದ ಐನಂಡ ಸೋಮಣ್ಣ, ಅಮ್ಮಣಿಚಂಡ ಪ್ರವೀಣ್ ಚಂಗಪ್ಪ, ಸಿ.ಎನ್ ಸೋಮಣ್ಣ, ಎಂ.ಎನ್ ನಾಚಪ್ಪ, ಪಿ.ಬಿ ಪ್ರೇಮ ಉಪಸ್ಥಿತರಿದ್ದರು.