ಮಡಿಕೇರಿ, ಫೆ. 19: ಸುಳ್ಯದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮಡಿಕೇರಿ ಶಾಖೆ ವತಿಯಿಂದ ಪ್ರಾಕೃತಿಕ ವಿಕೋಪದಲ್ಲಿ ಹಾನಿಗೊಳಗಾದ ಸಂತ್ರಸ್ತರಿಗೆ ನೆರವು ವಿತರಿಸಲಾಯಿತು. ಇಲ್ಲಿನ ಕೊಡಗು ಗೌಡ ವಿದ್ಯಾಸಂಘದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಒಟ್ಟು 74 ಮಂದಿ ಫಲಾನುಭವಿಗಳಿಗೆ ರೂ. 8.53 ಲಕ್ಷ ಮೊತ್ತದ ನೆರವನ್ನು ಪರಿಹಾರವಾಗಿ ವಿತರಣೆ ಮಾಡಲಾಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ ಅವರು, ಸಂತ್ರಸ್ತರಿಗೆ ಸರಕಾರದಿಂದ, ಸಂಘ- ಸಂಸ್ಥೆಗಳು ನೆರವು ನೀಡಿವೆ. ಗೌಡ ಸಮಾಜಗಳ ಒಕ್ಕೂಟದ ಮೂಲಕವೂ ನೆರವು ಕಲ್ಪಿಸಲಾಗಿದೆ. ಅದರಂತೆ ಇದೀಗ ವೆಂಕಟರಮಣ ಸೊಸೈಟಿಯವರು ನೀಡುತ್ತಿರುವ ನೆರವನ್ನು ಸಂತೋಷದಿಂದ (ಮೊದಲ ಪುಟದಿಂದ) ಸ್ವೀಕರಿಸಿ, ಸಂಸ್ಥೆಯ ಸಹಕಾರವನ್ನು ಪಡೆದುಕೊಳ್ಳುವಂತೆ ಹೇಳಿದರು. ನದಿದಡಗಳಲ್ಲಿ ಮನೆಗಳನ್ನು ಕಟ್ಟಬಾರದೆಂದು ನಿಯಮವಿದ್ದರೂ ಕೆಲವರು ರಾಜಕೀಯ ಲಾಭಕ್ಕಾಗಿ ನದಿದಡದಲ್ಲಿ ಮನೆ ಕಟ್ಟಿಕೊಳ್ಳಲು ಅವಕಾಶ ನೀಡುತ್ತಿದ್ದಾರೆ. ಇದು ಸರಿಯಲ್ಲ; ನದಿ ದಡದಲ್ಲಿ ಮನೆ ಕಟ್ಟಬೇಡಿ ಎಂದು ಮನವಿ ಮಾಡಿಕೊಂಡರು. ಅತಿಥಿಯಾಗಿದ್ದ ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಅವರು ಮಾತನಾಡಿ, ಬ್ಯಾಂಕ್‍ಗಳ ಸ್ಥಾಪನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಅಲ್ಲಿನವರ ಪ್ರಾಮಾಣಿಕತೆ, ನಿಸ್ವಾರ್ಥ ಸೇವೆಗಳಿಂದಾಗಿ ಬ್ಯಾಂಕ್‍ಗಳು ಪ್ರಗತಿ ಸಾಧಿಸುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಆಗಸ್ಟ್ ತಿಂಗಳ ಕಹಿನೆನಪನ್ನು ಮರೆತು ದಾನಿಗಳು ನೀಡುವ ನೆರವನ್ನು ದುರುಪಯೋಗ ಪಡಿಸಿಕೊಳ್ಳದೆ ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಿಕೊಂಡು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂತೆ ಕೋರಿದರು.ಸೊಸೈಟಿಯ ಸ್ಥಾಪಕಾಧ್ಯಕ್ಷ, ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರೂ ಆಗಿರುವ ಪಿ.ಸಿ. ಜಯರಾಂ ಅವರು ಮಾತನಾಡಿ, 20 ವರ್ಷಗಳ ಹಿಂದೆ ಗೌಡ ಸಮುದಾಯದವರಿಂದ ಸ್ಥಾಪನೆಗೊಂಡ ಬ್ಯಾಂಕ್ ಇಂದು ಎಲ್ಲಾ ವರ್ಗದವರ ನೆರವಿಗೆ ಮುಂದಾಗಿದೆ. ಗ್ರಾಹಕರ ಸಹಕಾರ ದಿಂದ ಬ್ಯಾಂಕ್ ಬೆಳೆಯುತ್ತಿದೆ. ನಾವಿಂದು ಪರಿಹಾರ ರೂಪದಲ್ಲಿ ನೀಡುತ್ತಿರುವ ಅಲ್ಪ ಪ್ರಸಾದ ಪ್ರಯೋಜನಕಾರಿಯಾಗಲಿ ಎಂದು ಆಶಿಸಿದರು.

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷ ಹಾಗೂ ಬ್ಯಾಂಕ್‍ನ ನಿರ್ದೇಶಕರೂ ಆಗಿರುವ ನಿತ್ಯಾನಂದ ಮುಂಡೋಡಿ ಅವರು ಮಾತನಾಡಿ, ಬ್ಯಾಂಕ್‍ನ ಈ ಬಾರಿಯ ಲಾಭಾಂಶದಲ್ಲಿ ಶೇ. 18ರಷ್ಟು ಸದಸ್ಯರುಗಳಿಗೆ ಡಿವಿಡೆಂಡ್ ನೀಡಲು ನಿರ್ಧರಿಸಲಾಗಿತ್ತು. ಆ ಡಿವಿಡೆಂಡ್‍ನಲ್ಲಿ ಶೇ. 4ರಷ್ಟನ್ನು ಶೇಖರಿಸಿ ಸಂತ್ರಸ್ತರಿಗೆ ಪರಿಹಾರವಾಗಿ ನೀಡಲಾಗುತ್ತಿದೆ. ಬ್ಯಾಂಕ್‍ನ ಎಲ್ಲಾ ಸದಸ್ಯರುಗಳ ನೆರವಿನ ಹಣ ಇದರಲ್ಲಿ ಸೇರಿದೆ. ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ವಿದ್ಯೆಗೆ ಆದ್ಯತೆ ನೀಡುವಂತೆ ಕೋರಿದರು. ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರೂ. 3 ಕೋಟಿ ನೀಡಿರುವದಾಗಿ ಹೇಳಿದ ಅವರು, ಈಗ ನೀಡುತ್ತಿರುವ ಸಣ್ಣ ಸಹಾಯವಷ್ಟೇ ಎಂದು ಹೇಳಿದರು.

ಬ್ಯಾಂಕ್‍ನ ಪೂರ್ವಾಧ್ಯಕ್ಷರು ಹಾಗೂ ದ.ಕ. ಜೇನು ವ್ಯವಸಾಯ ಗಾರರ ಸಹಕಾರ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರು ಮಾತನಾಡಿ, ವೆಂಕಟರಮಣ ಸೊಸೈಟಿಯ 10 ಶಾಖೆಗಳ ಪೈಕಿ ಮಡಿಕೇರಿ ಶಾಖೆ ಪ್ರಥಮ ಸ್ಥಾನದಲ್ಲಿದ್ದು, ಇಲ್ಲಿನ ಗ್ರಾಹಕರ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ ಎಂದರು. ಸಂತ್ರಸ್ತರ ನೋವು; ಅನುಭವಿಸಿದವರಿಗೆ ಗೊತ್ತು ಎಂದು ಹೇಳಿದ ಅವರು, ಯಾರೂ ಎದೆಗುಂದಬಾರದೆಂದು ಹೇಳಿದರು.

ಸುಳ್ಯ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಮೋಹನ್‍ರಾಂ ಸುಳ್ಳಿ ಮಾತನಾಡಿ, ಗೌಡರ ಯುವ ಸೇವಾ ಸಂಘ ಜಾತೀಯ ಸಂಘಟನೆಯಾಗದೆ ಆರ್ಥಿಕ ಸಂಸ್ಥೆ, ಶಾಲೆಯನ್ನು ಹುಟ್ಟುಹಾಕಿದೆ. ವಿದ್ಯಾರ್ಥಿ ವೇತನ ನೀಡುತ್ತಾ ಬರುತ್ತಿದೆ. ಇದೀಗ ಸಂತ್ರಸ್ತರಿಗೂ ಸಹಾಯ ಮಾಡುವ ಉದ್ದೇಶದೊಂದಿಗೆ ನೊಂದವರಿಗೆ ಪರಿಹಾರ ನೀಡುತ್ತಿರುವದಾಗಿ ಹೇಳಿದರು.

ಸೊಸೈಟಿಯ ಅಧ್ಯಕ್ಷ ಕೆ.ಸಿ. ನಾರಾಯಣ ಗೌಡ ಅವರ ಅಧ್ಯಕ್ಷತೆ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ. ವಿಶ್ವನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಬ್ಯಾಂಕ್‍ನ ಪ್ರಗತಿ ಬಗ್ಗೆ ಮಾಹಿತಿ ನೀಡಿದರು. ಮಡಿಕೇರಿ ಶಾಖೆಯಲ್ಲಿ 950 ಮಂದಿ ಸದಸ್ಯರುಗಳಿದ್ದು, 14,79,100ರಷ್ಟು ಪಾಲು ಹಣ ಹೊಂದಿದೆ. 6.74 ಕೋಟಿ ಠೇವಣಿಯಿದ್ದು, 5.10 ಕೋಟಿಯಷ್ಟು ಸಾಲ ವಿತರಣೆ ಮಾಡಲಾಗಿದೆ. ರೂ. 32 ಕೋಟಿ ಯಷ್ಟು ವ್ಯವಹಾರ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ರಾಷ್ಟ್ರೀಕೃತ ಬ್ಯಾಂಕ್‍ಗಳ ಲ್ಲಿರುವಂತೆ ಎಲ್ಲಾ ರೀತಿಯ ಸೌಲಭ್ಯಗಳಿದ್ದು, ಸಾರ್ವಜನಿಕರು ಸದಸ್ಯರಾಗುವ ಮೂಲಕ ಬ್ಯಾಂಕ್‍ನ ಪ್ರಯೋಜನ ಪಡೆದುಕೊಳ್ಳುವಂತೆ ಕೋರಿದರು.

ವೇದಿಕೆಯಲ್ಲಿ ಸೊಸೈಟಿ ಪೂರ್ವಾಧ್ಯಕ್ಷ ಜಾಕೆ ಸದಾನಂದ, ಉಪಾಧ್ಯಕ್ಷ ಪಿ.ಎಸ್. ಗಂಗಾಧರ, ಸೊಸೈಟಿಯ ಪೂರ್ವಾಧ್ಯಕ್ಷ ಎ.ವಿ. ತೀರ್ಥರಾಮ, ನಿರ್ದೇಶಕರಾದ, ಕೆ.ಸಿ. ಸದಾನಂದ, ಲಕ್ಷ್ಮಿನಾರಾಯಣ ನಡ್ಕ, ದಾಮೋದರ ಎನ್.ಎಸ್., ಸಲಹಾ ಸಮಿತಿ ಸಹಾಯಕರಾದ ಕೇಶವಾನಂದ ಯಾಲದಾಳು, ವೆಂಕಟರಮಣ ಗೌಡ ಪಡ್ಪು, ಪಿ.ಎನ್. ದೇವಿಪ್ರಸಾದ್, ನವೀನ್ ಅಂಬೆಕಲ್, ಬ್ಯಾಂಕ್ ವ್ಯವಸ್ಥಾಪಕ ಅಶೋಕ್ ಬೊಳುಗಲ್ಲು, ಇನ್ನಿತರರು ಉಪಸ್ಥಿತರಿದ್ದರು.

ಸೊಸೈಟಿಯ ನಿರ್ದೇಶಕ ದಿನೇಶ್ ಮಡಪ್ಪಾಡಿ ಸ್ವಾಗತಿಸಿ, ನಿರೂಪಿಸಿದರೆ, ಕಡ್ಲೇರ ತುಳಸಿ ಮೋಹನ್ ಪ್ರಾರ್ಥಿಸಿದರು. ಸಲಹಾ ಸಮಿತಿ ಸದಸ್ಯ ನವೀನ್ ಅಂಬೆಕಲ್ಲು ವಂದಿಸಿದರು.