ಸೋಮವಾರಪೇಟೆ, ಫೆ. 19: ಇಲ್ಲಿನ ಅಕ್ಷಯ ಪತ್ತಿನ ಮಹಿಳಾ ಸಹಕಾರಿ ಬ್ಯಾಂಕ್‍ನ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೂಮಿಪೂಜೆ ನೆರವೇರಿಸಿದರು.

ಪಟ್ಟಣದ ಮಹದೇಶ್ವರ ಬಡಾವಣೆಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ಪಕ್ಕದಲ್ಲಿರುವ ನಿವೇಶನದಲ್ಲಿ ಮಹಿಳಾ ಬ್ಯಾಂಕ್‍ನ ನೂತನ ಕಟ್ಟಡ ನಿರ್ಮಾಣಕ್ಕೆ ಉದ್ದೇಶಿಸಲಾಗಿದ್ದು, ಭೂಮಿಪೂಜೆ ನೆರವೇರಿಸಿದ ಶಾಸಕರು ಅನುದಾನ ಒದಗಿಸುವ ಭರವಸೆ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಮಹಿಳೆಯರೇ ಸೇರಿಕೊಂಡು ಬ್ಯಾಂಕ್ ಸ್ಥಾಪಿಸಿರುವದು ಶ್ಲಾಘನೀಯ. ಅಲ್ಲದೆ, ಈ ಬಾರಿ ಸ್ವಂತ ಕಟ್ಟಡÀ ನಿರ್ಮಾಣಕ್ಕೆ ಸಂಸದರ ನಿಧಿಯಿಂದ ಈಗಾಗಲೇ ರೂ. 5 ಲಕ್ಷ ಅನುದಾನ ಒದಗಿಸಲಾಗಿದ್ದು, ಅಗತ್ಯವಾದಲ್ಲಿ ಮುಂದಿನ ದಿನಗಳಲ್ಲೂ ಅನುದಾನ ನೀಡುವದಾಗಿ ಭರವಸೆಯಿತ್ತರು. ಈ ಸಂದರ್ಭ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್, ನಿರ್ದೇಶಕ ಕುಮಾರಪ್ಪ, ತಾ.ಪಂ. ಉಪಾಧ್ಯಕ್ಷ ಅಭಿಮನ್ಯು ಕುಮಾರ್, ಅಕ್ಷಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಹಾಗೂ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿಲ್ಲಾ ಪಂಚಾಯಿತಿ ಸದಸ್ಯೆ ಸರೋಜಮ್ಮ, ಬ್ಯಾಂಕ್‍ನ ಉಪಾಧ್ಯಕ್ಷೆ ಜಲಜಾ ಶೇಖರ್, ನಿರ್ದೇಶಕರುಗಳಾದ ಉಮಾ ರುದ್ರಪ್ರಸಾದ್, ರೂಪಶ್ರೀ, ಜಯಂತಿ ಶಿವಕುಮಾರ್, ಬೇಬಿ ಚಂದ್ರಹಾಸ್, ಸಂಧ್ಯಾ ಕೃಷ್ಣಪ್ಪ, ಸುಮಾ ಸುದೀಪ್ ಹಾಗೂ ಬ್ಯಾಂಕ್ ಸಿಬ್ಬಂದಿ ಹಾಜರಿದ್ದರು.