ನಾಪೆÉÇೀಕ್ಲು, ಫೆ. 19: ಕಳೆದ ಬಾರಿಯ ಅತಿವೃಷ್ಟಿಯಿಂದ ಜಿಲ್ಲೆಯ ಬೆಳೆಗಾರರ ಕಾಫಿ ಮತ್ತು ಕಾಳುಮೆಣಸು ನಷ್ಟ ಸಂಭವಿಸಿರುವ ಹಿನ್ನೆಲೆ ಪರಿಹಾರ ಕೋರಿ ಸರಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಕಂದಾಯ ಇಲಾಖೆ ಅರ್ಜಿ ಪಡೆದಿದ್ದರು, ಕೆಲವು ಬೆಳೆಗಾರರನ್ನು ಹೊರತು ಪಡಿಸಿ ಉಳಿದವರಿಗೆ ಪರಿಹಾರ ದೊರೆತಿಲ್ಲ. ಸಂಬಂಧಿಸಿದವರು ಕೂಡಲೇ ಪರಿಹಾರ ವಿತರಿಸಲು ಕ್ರಮಕೈಗೊಳ್ಳಬೇಕು ಎಂದು ಬೆಳೆಗಾರರಾದ ಮಣವಟ್ಟೀರ ಸುಬ್ರಮಣಿ, ಕೋಟೆರ ಸಾಬು ಪಳಂಗಪ್ಪ, ಮಣವಟ್ಟೀರ ದೊರೆ ಸೋಮಣ್ಣ, ಅಪ್ಪಚ್ಚಿರ ವಾಸು ನಂಜಪ್ಪ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸರಕಾರದ ಆದೇಶದಂತೆ ಸಮಯಕ್ಕೆ ಸರಿಯಾಗಿ ಪರಿಹಾರದ ಅರ್ಜಿಯನ್ನು ಸಲ್ಲಿಸಿದ್ದೇವೆ. ಈಗ ಕೆಲವೇ ಅರ್ಜಿದಾರರಿಗೆ ಮಾತ್ರ ಬೆಳೆ ಪರಿಹಾರದ ಹಣ ದೊರೆತಿದೆ. ಅಧಿಕಾರಿಗಳು ರೈತರ ಅರ್ಜಿಯನ್ನು ಸರಕಾರಕ್ಕೆ ರವಾನಿಸಿದ್ದಾರೋ ಇಲ್ಲವೋ ಎನ್ನುವ ಸಂಶಯ ಮೂಡಿದೆ ಎಂದರು. ಈ ಬಗ್ಗೆ ಜಿಲ್ಲಾಧಿಕಾರಿಗಳು ನಾಪೆÉÇೀಕ್ಲು ವಿಭಾಗದ ಕಂದಾಯ ಅಧಿಕಾರಿಗಳ ಬೇಜವಾಬ್ದಾರಿತನದ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಮಡಿಕೇರಿ ತಾಲೂಕು ತಹಶೀಲ್ದಾರ್ ಎಲ್ಲಾ ಅರ್ಜಿದಾರರಿಗೆ ಪರಿಹಾರ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಅವರು ಬೆಳೆಗಾರರಿಗೆ ಪೂರ್ಣ ಮಾಹಿತಿಯನ್ನು ನೀಡಬೇಕೆಂದು ಆಗ್ರಹಿಸಿದ ಅವರು ತಪ್ಪಿದ್ದಲ್ಲಿ ಪ್ರತಿಭಟನೆ ನಡೆಸಬೇಕಾದೀತು ಎಂದು ಎಚ್ಚರಿಸಿದ್ದಾರೆ.