ಮಡಿಕೇರಿ, ಫೆ. 19: ಕಾಫಿ ಪಲ್ಪಿಂಗ್‍ನ ಸಮಯದಲ್ಲಿ ಕೊಡಗಿನ ಹಲವೆಡೆ ಸಮೀಪದ ನದಿಗೆ ಪಲ್ಪಿಂಗ್‍ನ ವಿಷಕಾರಿ ತ್ಯಾಜ್ಯವನ್ನು ಕೆಲವು ಕಾಫಿ ತೋಟ ಮಾಲೀಕರು ಹರಿಸುತ್ತಿದ್ದು, ಇದರ ಬಗ್ಗೆ ಕೊಡಗಿನ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಜಿಲ್ಲಾಧಿಕಾರಿಗಳು ಕ್ರಮಕೈಗೊಂಡಿದ್ದಾರೆ.ಕಾಫಿ ತೋಟ ಒಂದರಲ್ಲಿ ಕಾಫಿ ಪಲ್ಪ್ ಮಾಡಿದ ತ್ಯಾಜ್ಯ ನೀರನ್ನು ನೇರವಾಗಿ ಕಾವೇರಿ ನದಿಗೆ ಹರಿಸಿರುವ ವಿಷಯ ಕರ್ನಾಟಕದ ಸಮಾಜ ಕಲ್ಯಾಣ ಹಾಗೂ ಅಭಿವೃದ್ಧಿ ಇಲಾಖೆಯ ಸಚಿವರ ಗಮನ ಸೆಳೆದಿದ್ದು, ಸಚಿವರ ಆದೇಶದ ಮೇಲೆ ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಮ ಕೈಗೊಂಡಿದೆ. ಸಿದ್ದಾಪುರದ ಕರಡಿಗೋಡಿನ ತೋಟ ಒಂದರಲ್ಲಿ ಕಾಫಿ ಪಲ್ಪ್ ಮಾಡಿದ ತ್ಯಾಜ್ಯ ನೀರನ್ನು ನೇರವಾಗಿ ಕಾವೇರಿ ನದಿಗೆ ಹರಿಸಿರುವ ಚಿತ್ರ ಜಾಲತಾಣದಲ್ಲಿ ಹರಿದಾಡುತ್ತಿದ್ದುದನ್ನು ಸಚಿವ ಪ್ರಿಯಾಂಕ ಖರ್ಗೆ ಗಮನಿಸಿದ್ದಾರೆ. ಅಲ್ಲಿಂದ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಸಿದ್ದಾಪುರದಲ್ಲಿ ಕಾವೇರಿ ನದಿ ಕಲುಷಿತಗೊಳ್ಳುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಸ್ಥಳ ಪರಿಶೀಲನೆ ಮಾಡಲು ಆದೇಶ ಹೊರಡಿಸಿದ್ದೇನೆ. ಪರಿಶೀಲನೆಯ ನಂತರ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವದು,” ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್‍ರವರು ‘ಶಕ್ತಿ’ಗೆ ತಿಳಿಸಿದ್ದಾರೆ.(ಮೊದಲ ಪುಟದಿಂದ) ಈ ನಡುವೆ, ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ಡಾ.ಸುಧಾರವರು ಸೋಮವಾರದಂದು ತೋಟದ ಪರಿಶೀಲನೆ ನಡೆಸಿದ್ದು ಈ ತೋಟದ ಮಾಲೀಕರು ಕಾನೂನು ಉಲ್ಲಂಘನೆಮಾಡಿರುವದನ್ನು ಸ್ಪಷ್ಟಿಕರಿಸಿದ್ದಾರೆ. “ಕಾಫಿ ಪಲ್ಪಿಂಗ್‍ನ ತ್ಯಾಜ್ಯ ಹೆಚ್ಚಾಗಿ ಆಮ್ಲಿಯವಾಗಿದ್ದು (ಚಿಛಿiಜiಛಿ) ಇದನ್ನು ವೈಜ್ಞಾನಿಕವಾಗಿ ಪರಿಗಣಿಸಿ ನಿರ್ವಹಿಸಬೇಕು. ಕಾನೂರು ಉಲ್ಲಂಘಿಸಿರುವ ತೋಟದಲ್ಲಿ ವೈಜ್ಞಾನಿಕ ಘಟಕಗಳಿದ್ದರೂ, ಅವು ಹಳೆಯದ್ದಾಗಿವೆ. ಇದರಿಂದ ಆಮ್ಲೀಯ ತ್ಯಾಜ್ಯ, ಘಟಕದಿಂದ ತುಂಬಿ ಹರಿದು ಕಾವೇರಿ ನದಿಯನ್ನು ಕಲುಷಿತಗೊಳಿಸುತ್ತಿತ್ತು,” ಎಂದು ವಿವರಿಸಿದ್ದಾರೆ. ಪರಿಶೀಲನೆಯ ನಂತರ ಇದನ್ನು ತಡೆಗಟ್ಟಿರುವ ಮಾಲಿನ್ಯ ನಿಯಂತ್ರಣ ಮಂಡಳಿಯವರು, ಕಾಫಿ ತೋಟದ ಮಾಲೀಕರಿಗೆ ನೋಟೀಸ್ ನೀಡಿದ್ದಾರೆ. ತೋಟದ ಮಾಲೀಕರು ಇದನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಅಗತ್ಯ ಕ್ರಮವನ್ನು ತೆಗೆದುಕೊಂಡು ಪಲ್ಪಿಂಗ್ ಘಟಕವನ್ನು ಸರಿಪಡಿಸಲು ಸಿದ್ದರಾಗಿದ್ದಾರೆಂದು ಡಾ.ಸುಧಾ ತಿಳಿಸಿದ್ದಾರೆ.ಇದಲ್ಲದೆ, ಈ ಹಿಂದೆ ಕ್ಯಾತೇನಹÀಳ್ಳಿ ಗ್ರಾಮದಲ್ಲಿ ಈ ರೀತಿಯ ಉಲ್ಲಂಘನೆಯಾಗಿದ್ದು ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶದ ಮೇರೆಗೆ ಗ್ರಾಮ ಪಂಚಾಯಿತಿ ಪಲ್ಪಿಂಗ್ ಘಟಕವನ್ನು ವಶಪಡಿಸಿಕೊಂಡಿದ್ದನ್ನು ‘ಶಕ್ತಿ’ಗೆ ನೆನಪಿಸಿದ್ದಾರೆ. “ನಾವು ಪ್ರತಿದಿನ ಸ್ಥಳ ಪರಿಶೀಲನೆಗೆ ತೆರಳುತ್ತಿದ್ದು, ಉಲ್ಲಂಘನೆ ಕಂಡುಬಂದಲ್ಲಿ ನೋಟೀಸ್ ನೀಡುತ್ತಿದ್ದೇವೆ. ಈ ನೋಟೀಸನ್ನು ಪರಿಗಣಿಸದ ತೋಟ ಮಾಲೀಕರ ವಿರುದ್ಧ ಕ್ರಮ ತೆಗೆದುಕೊಂಡು ಗ್ರಾಮ ಪಂಚಾಯಿತಿಯ ಮೂಲಕ ಘಟಕವನ್ನು ವಶಪಡಿಸಿಕೊಳ್ಳುವ ಕ್ರಮ ಕೈಗೊಳ್ಳುತ್ತಿದ್ದೇವೆ,” ಎಂದು ಡಾ.ಸುಧಾರವರು ಎಚ್ಚರಿಸಿದ್ದಾರೆ.