ಮಡಿಕೇರಿ, ಫೆ. 19: ಭಾರತೀಯ ದೂರಸಂಪರ್ಕ ಇಲಾಖೆಯ ಅಧೀನದಲ್ಲಿದ್ದ ದೇಶದ ದೂರವಾಣಿ ವ್ಯವಸ್ಥೆಯು, ಗ್ರಾಹಕರಿಗೆ ಉತ್ತಮ ಸೇವೆಯೊಂದಿಗೆ ದೇಶದ ಉದ್ದಗಲಕ್ಕೂ ತನ್ನ ಸಂಪರ್ಕ ಜಾಲವನ್ನು ಪಸರಿಸಿಕೊಂಡಿತ್ತು. ಆನಂತರದಲ್ಲಿ 2000ನೇ ಇಸವಿಯಲ್ಲಿ ಭಾರತ ಸಂಚಾರ ನಿಗಮ ಲಿಮಿಟೆಡ್ ಆಗಿ ಪರಿವರ್ತನೆಗೊಂಡು ಕೇವಲ ಕೇಂದ್ರ ಸರಕಾರಿ ಸಾಮ್ಯದ ಒಂದು ಉದ್ದಿಮೆಯಾಗಿ ರೂಪುಗೊಂಡಿತು.ಆ ದಿನಗಳಲ್ಲಿ ಆರಂಭದ ಉತ್ತಮ ಸೇವೆ ಸಲ್ಲಿಸುತ್ತಾ ಬಂದರೂ, ಇಲಾಖೆಯ ಮಂದಿಯಿಂದಲೇ ಸಾಕಷ್ಟು ಅಕ್ರಮ, ದುರುಪಯೋಗ ಆರೋಪಗಳು ವ್ಯಕ್ತಗೊಳ್ಳುವಂತಾಯಿತು. ಇನ್ನೊಂದೆಡೆ ಇಲಾಖೆಯಡಿ ಉನ್ನತ ಸ್ಥಾನದಲ್ಲಿದ್ದ ಅನೇಕ ಅಧಿಕಾರಿಗಳು ಹುದ್ದೆಗಳನ್ನು ತೊರೆದು ಖಾಸಗಿ ದೂರವಾಣಿ ಉದ್ದಿಮೆಗಳಲ್ಲಿ ಸ್ಥಾನ ಪಡೆಯುವಂತಾಯಿತು. ಪರಿಣಾಮ ಬಿಎಸ್‍ಎನ್‍ಎಲ್ ವರ್ಷಗಳು ಉರುಳಿದಂತೆ ತನ್ನ ಹಿರಿಮೆಯನ್ನು ಕಳೆದುಕೊಳ್ಳುವಂತಾಯಿತು.ಮಲತಾಯಿ ಧೋರಣೆ : ಒಂದು ರೀತಿಯಲ್ಲಿ ಇಂತಹ ಖಾಸಗಿ ಉದ್ದಿಮೆಗಳಿಗೆ ಮಣೆ ಹಾಕಿದ ಕೇಂದ್ರ ಸರಕಾರ, ಪೈಪೋಟಿಯ ದಿಸೆಯಲ್ಲಿ ಅಂತಹ ಸಂಸ್ಥೆಗಳನ್ನು ಆರಂಭಿಕವಾಗಿ ಪ್ರೋತ್ಸಾಹಿಸುವಂತಾದರೆ, ಬಿಎಸ್‍ಎನ್‍ಎಲ್‍ಗೆ ಯಾವದೇ ಅನುದಾನ ಕಲ್ಪಿಸುವದನ್ನು ಸಂಪೂರ್ಣ ಸ್ಥಗಿತಗೊಳಿಸಿತು. ಪರಿಣಾಮ ಭಾರತ ಸಂಚಾರ ನಿಗಮಕ್ಕೆ ಆದಾಯದಲ್ಲಿ ತೀವ್ರ ಹೊಡೆತದೊಂದಿಗೆ, ದೇಶದಲ್ಲಿ ಟವರ್‍ಗಳ ನಿರ್ವಹಣೆ, ಲಕ್ಷಾಂತರ ನೌಕರರ ವೇತನ, ಭತ್ಯೆ, ಕಟ್ಟಡಗಳ ಬಾಡಿಗೆ ಭರಿಸುವದು ಇತ್ಯಾದಿಗೆ ಆರ್ಥಿಕ ಸಮಸ್ಯೆ ಎದುರಾಗುವಂತಾಯಿತು. ಪರಿಣಾಮ ಪ್ರಸಕ್ತ ದೇಶದಲ್ಲಿ ಸುಮಾರು 1.80 ಲಕ್ಷ ಉದ್ಯೋಗಿಗಳು ಭವಿಷÀ್ಯದ ಆತಂಕ ಎದುರಿಸುವಂತಾಗಿದೆ.ಬಾಗಿಲು ಬಂದ್ ಹೇಳಿಕೆ : ಈಚೆಗೆ ಕೇಂದ್ರ ದೂರ ಸಂಪರ್ಕ ಖಾತೆ ಸಚಿವ ಮನೋಜ್ ಸಿನ್ಹಾ ಕೂಡ ನಷ್ಟದಲ್ಲಿರುವ ಬಿಎಸ್‍ಎನ್‍ಎಲ್ ಉದ್ದಿಮೆಯನ್ನು ಬಾಗಿಲು ಬಂದ್ ಮಾಡಲಾಗುವದು ಎಂಬ ಹೇಳಿಕೆ ನೀಡಿ ಸಂಬಂಧಿಸಿದ ಉದ್ಯೋಗಿಗಳಿಗೆ ಮತ್ತಷ್ಟು ‘ಶಾಕ್’ ನೀಡಿದ್ದರು. ಆ ಬೆನ್ನಲ್ಲೇ ನವದೆಹಲಿ ಕೇಂದ್ರ ಕಚೇರಿಯ ಮಹಾ ನಿರ್ದೇಶಕರು ಸ್ಪಷ್ಟೀಕರಣ ನೀಡಿ ಬಿಎಸ್‍ಎನ್‍ಎಲ್ ಮುಚ್ಚುವ ಪ್ರಶ್ನೆಯೇ ಇಲ್ಲವೆಂದು ಸಮರ್ಥಿಸಿ ಕೊಂಡಿದ್ದರು. ಈ ಎಲ್ಲಾ ಗೊಂದಲಗಳ ನಡುವೆ ಖಾಸಗಿ ಉದ್ದಿಮೆಗಳು ಗ್ರಾಹಕರಿಗೆ ಪೈಪೋಟಿಯ ಸೇವೆಯೊಂದಿಗೆ,

(ಮೊದಲ ಪುಟದಿಂದ) ವರ್ಷದಿಂದ ವರ್ಷಕ್ಕೆ ಹೆಸರುಗಳನ್ನು ಬದಲಾಯಿಸುತ್ತಾ, ಹೊಸ ಹೊಸ ಹೆಸರಿನಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವದು ವಾಸ್ತವ. ಇಂತಹ ಪರಿಸ್ಥಿತಿಯಲ್ಲಿ ಖಾಸಗಿಯೊಂದಿಗೆ ಪೈಪೋಟಿ ನೀಡಲಾರದೆ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬಿಎಸ್‍ಎನ್‍ಎಲ್ ಇಂದು ಗ್ರಾಹಕರಿಗೂ ಗುಣಮಟ್ಟದ ಸೇವೆ ನೀಡುವಲ್ಲಿ ನಲುಗತೊಡಗಿದೆ.

ಕೊಡಗಿನಲ್ಲಿಯೂ ನಷ್ಟ : ಒಂದೊಮ್ಮೆ ಕರ್ನಾಟಕ ವಲಯದಲ್ಲೇ ಆರ್ಥಿಕವಾಗಿ ಸದೃಢವಿದ್ದು, ಲಾಭದ ಪಥದಲ್ಲಿದ್ದ ಕೊಡಗಿನ ದೂರವಾಣಿ ನಿಗಮ ಕೂಡ, ಇಂದು ಆರ್ಥಿಕ ಸಂಕಷ್ಟದೊಂದಿಗೆ ವಾರ್ಷಿಕ ಸರಾಸರಿ ರೂ. 2 ಕೋಟಿಯಷ್ಟು ನಷ್ಟದಲ್ಲಿ ಸಿಲುಕುವಂತಾಗಿದೆ. ಹಿಂದೆ 45 ಸಾವಿರದಷ್ಟಿದ್ದ ಸ್ಥಿರ ದೂರವಾಣಿಗಳು ಇಂದು 15 ಸಾವಿರಕ್ಕೆ ಕುಸಿದಿವೆ.

ಮೊಬೈಲ್ ಸೇವೆ : ಬದಲಾಗಿ ಸುಮಾರು 2.70 ಲಕ್ಷ ಗ್ರಾಹಕರು ಬಿಎಸ್‍ಎನ್‍ಎಲ್ ಮೊಬೈಲ್ ಸೇವೆ ಹೊಂದಿದ್ದಾರಲ್ಲದೆ, 5,500 ‘ಬ್ರಾಡ್ ಬ್ಯಾಂಡ್’ ಗ್ರಾಹಕರಿದ್ದಾರೆ. ಜಿಲ್ಲೆಯ ಅಲ್ಲಲ್ಲಿ 76 ದೂರವಾಣಿ ವಿನಿಮಯ ಕಚೇರಿಗಳಿವೆ. ‘127 2ಉ’ ಹಾಗೂ ‘118 3ಉ’ ಟವರ್‍ಗಳಿವೆ. ಸರಾಸರಿ ಅಂದಾಜು ಈ ಎಲ್ಲಾ ಮೂಲಗಳಿಂದ 1.80 ಕೋಟಿ ಆದಾಯವಿದ್ದರೆ, ರೂ. 4 ಕೋಟಿಯಷ್ಟು ಒಟ್ಟಾರೆ ನಿರ್ವಹಣಾ ಖರ್ಚು ಭರಿಸಬೇಕಿದೆ.

ಇದಕ್ಕೆ ಕಾರಣ ಇಲಾಖೆಯಿಂದ ಭರಿಸುವ ರೂ. 30 ವೆಚ್ಚಕ್ಕೆ ರೂ. 100 ಆದಾಯವಿತ್ತು, ಇಂದು ಬದಲಾದ ಪರಿಸ್ಥಿತಿಯಲ್ಲಿ ರೂ. 100 ವೆಚ್ಚಕ್ಕೆ ಕೇವಲ ರೂ. 75 ಮಾತ್ರ ಆದಾಯ ಲಭಿಸುವಂತಾಗಿ ಆರ್ಥಿಕ ಹೊಡೆತ ಅನುಭವಿಸುವಂತಾಗಿದೆ ಎಂದು ಮೂಲಗಳಿಂದ ಗೊತ್ತಾಗಿದೆ. ಒಟ್ಟಿನಲ್ಲಿ ದೇಶದ ಸಾರ್ವಭೌಮತ್ವ ಸಾಧಿಸಿದ್ದ ದೂರ ಸಂಪರ್ಕ ಇಲಾಖೆಯ ವ್ಯವಸ್ಥೆ ದಿನಗಳು ಉರುಳಿದಂತೆ ನಲುಗುತ್ತಿರುವದು ದುರಂತವೆನ್ನಲೇಬೇಕು. -ಶ್ರೀಸುತ