ಭಾಗಮಂಡಲ, ಫೆ. 19: ಭಾರತ ಸರಕಾರದ ಖಾದಿ ಗ್ರಾಮೋದ್ಯೋಗ ಆಯೋಗದ ಸಂಘಟನೆಯೊಂದಿಗೆ ಭಾರತ ಸರಕಾರದ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಧನ ಸಹಾಯದೊಂದಿಗೆ ಕೊಡಗು ಪ್ರಗತಿಪರ ಜೇನು ಕೃಷಿಕರ ಜಂಟಿ ಆಶ್ರಯದಲ್ಲಿ ಭಾಗಮಂಡಲ ಜೇನು ಕೃಷಿ ತರಬೇತಿ ಕೇಂದ್ರದಲ್ಲಿ ಸಂಘದ ಅಧ್ಯಕ್ಷ ಹೊಸೂರು ಜೆ. ಸತೀಶ್‍ಕುಮಾರ್ ಅಧ್ಯಕ್ಷತೆಯಲ್ಲಿ ತಾ. 12 ರಿಂದ 16 ರವರೆಗೆ 5 ದಿನಗಳ ಜೇನು ಕೃಷಿ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ಉದ್ಘಾಟನೆಯನ್ನು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ನರೇಂದ್ರನಾಥ್ ನೆರವೇರಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ನಿರ್ದೇಶಕ ನಲ್ಲಮುತ್ತು, ಖಾದಿ ಗ್ರಾಮೋದ್ಯೋಗ ಆಯೋಗದ ಸಹಾಯಕ ನಿರ್ದೇಶಕ ಮೋಸಸ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಆಯ್ದ 25 ಜೇನು ಕೃಷಿಕರಿಗೆ ತರಬೇತಿ ಕಾರ್ಯಾಗಾರ ನಡೆಯಲಿದ್ದು, ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸಂಸ್ಥೆಯು ಆರ್ಥಿಕ ನೆರವು ನೀಡಿದ್ದು, ಪ್ರತಿ ಫಲಾನುಭವಿಗಳಿಗೆ 10 ಜೇನು ಪೆಟ್ಟಿಗೆ, 10 ಸ್ಟ್ಯಾಂಡ್, ಸ್ಮೋಕರ್, ಮುಖಪರದೆ ಮತ್ತು ಜೇನು ತೆಗೆಯುವ ಯಂತ್ರವನ್ನು ಉಚಿತವಾಗಿ ನೀಡುವದಾಗಿ ರಾಜ್ಯ ನಿರ್ದೇಶಕರು ಖಾದಿ ಗ್ರಾಮೋದ್ಯೋಗ ಆಯೋಗದ ಅಧಿಕಾರಿ ಮಾಹಿತಿ ನೀಡಿದರು.