ಸೋಮವಾರಪೇಟೆ, ಫೆ. 19: ರಾಜ್ಯ ಹೆದ್ದಾರಿ ಬದಿಯ ದೊಡ್ಡಮಳ್ತೆ ಗ್ರಾಮದ ಜಂಕ್ಷನ್‍ನಲ್ಲಿ ಬೃಹತ್ ಗಾತ್ರದ ನಂದಿಮರವೊಂದು ಬೀಳುವ ಆತಂಕ ಎದುರಾಗಿದ್ದು ಕೂಡಲೇ ಮರವನ್ನು ತೆರವುಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮರದ ಬುಡದ ಸುತ್ತ ಮಣ್ಣು ತೆಗೆದಿರುವದರಿಂದ ಬೇರುಗಳು ಸಡಿಲಗೊಂಡಿದ್ದು, ಗಾಳಿ-ಮಳೆಗೆ ಬೀಳುವ ಸಂಭವವಿದೆ. ಪಕ್ಕದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಬಸ್ ತಂಗುದಾಣವಿದ್ದು, ಪ್ರತಿ ದಿನ ಜನಸಂದಣಿ ಇರುತ್ತದೆ. ರಾಜ್ಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರವಿರುತ್ತದೆ. ಸಮೀಪದಲ್ಲೇ ಸರ್ಕಾರಿ ಶಾಲೆಯಿದ್ದು, ಮಕ್ಕಳ ಓಡಾಟ ವಿರುತ್ತದೆ. ಮರ ಉರುಳಿದರೆ ಅನಾಹುತ ವಾಗಬಹುದು ಎಂದು ದೊಡ್ಡಮಳ್ತೆ ಗ್ರಾ.ಪಂ. ಉಪಾಧ್ಯಕ್ಷ ಗೋಪಾಲಕೃಷ್ಣ ಎಚ್ಚರಿಸಿದ್ದಾರೆ. ಲೋಕೋಪಯೋಗಿ, ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳುವ ಮೂಲಕ ಅಪಾಯಕಾರಿ ಮರವನ್ನು ತೆರವು ಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.