ಮಡಿಕೇರಿ, ಫೆ.19 : ಕೊಡಗು ಜಿಲ್ಲೆಯಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದಾಗಿ ಸಾಕಷ್ಟು ನಷ್ಟ ಉಂಟಾಯಿತು. ಆದ್ದರಿಂದ ಕೊಡಗು ಪುನರ್ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸ ಬೇಕಿದೆ ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ತಿಳಿಸಿದ್ದಾರೆ.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ‘ಪ್ರಕೃತಿ ವಿಕೋಪ ನಿರ್ವಹಣೆ’ ಕುರಿತು ನಡೆದ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಕೃತಿ ವಿಕೋಪದ ಬಗ್ಗೆ ಮುನ್ನೆಚ್ಚರಿಕೆ ವಹಿಸಿ, ಹೆಚ್ಚಿನ ಅನಾಹುತ ಸಂಭವಿಸದಂತೆ ಜಾಗೃತಿ ವಹಿಸುವದು ಅಗತ್ಯ ಎಂದು ಅಪ್ಪಚ್ಚುರಂಜನ್ ಅಭಿಪ್ರಾಯ ವ್ಯಕ್ತಪಡಿಸಿದರು.

ಅತಿವೃಷ್ಟಿ ಮತ್ತು ಅನಾವೃಷ್ಟಿ ಬಗ್ಗೆ ಮೊದಲೇ ಮುನ್ಸೂಚನೆ ಇದ್ದಲ್ಲಿ ಹೆಚ್ಚಿನ ಜಾಗೃತಿ ವಹಿಸಲು ಸಾಧ್ಯ ಎಂದು ಶಾಸಕರು ತಿಳಿಸಿದರು.

ಆಗಸ್ಟ್ ತಿಂಗಳಲ್ಲಿ ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಉಂಟಾದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. ಸ್ಥಳೀಯರ ಸಹಾಯದಿಂದ ಅಪಾರ ಜೀವ ರಕ್ಷಣೆ ಮಾಡಿದ್ದು, ಹೆಚ್ಚಿನ ಅನಾಹುತವನ್ನು ತಡೆಯಲು ಸಾಧ್ಯವಾಯಿತು ಎಂದು ಅವರು ಸ್ಮರಿಸಿದರು.

ತಿರುವನಂತಪುರ ಕೇಂದ್ರೀಯ ಭೂ ವಿಜ್ಞಾನ ಸಂಶೋಧನಾ ಕೇಂದ್ರದ ನಿವೃತ್ತ ವಿಜ್ಞಾನಿಗಳಾದ ಡಾ. ಶ್ರೀಕುಮಾರ್ ಚಟ್ಟೋಪಾಧ್ಯಾಯ ಮಾತನಾಡಿ ಭೂಮಿಯ ರಚನೆ ಹಾಗೂ ಭೂಗರ್ಭದಲ್ಲಿ ಆಗುವಂತಹ ಬದಲಾವಣೆಗಳಿಂದ ಸಂಭವಿಸು ವಂತಹ ಭೂಕುಸಿತ, ಭೂಕಂಪನ ಇವುಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. ಭೂಕುಸಿತ ಅತಿವೃಷ್ಟಿ ಉಂಟಾದಾಗ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಭವಿಷ್ಯದಲ್ಲಿ ಇಂತಹ ಅನಾಹುತಗಳು ಸಂಭವಿಸದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಿದರು. ವಿವಿಧೆಡೆಗಳಿಂದ ಆಗಮಿಸಿದ ವಿಜ್ಞಾನಿಗಳು ಭೂವಿಜ್ಞಾನ ಮತ್ತು ಪ್ರಕೃತಿ ವಿಕೋಪ ನಿರ್ವಹಣೆ ಕುರಿತು ವಿಚಾರ ಮಂಡಿಸಿದರು.

ಕಾರ್ಯಕ್ರಮದಲ್ಲಿ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಪ್ರೊ.ಚಿತ್ರಾ, ರಾಜ್ಯ ನ್ಯಾಕ್ ಸಂಯೋಜಕ ಡಾ.ಸಿದ್ದಲಿಂಗಸ್ವಾಮಿ, ವಿಜ್ಞಾನಿಗಳಾದ ಸಿ.ಎಸ್.ಪಾಟೀಲ್, ನಿವೃತ್ತ ಐಎಎಸ್ ಅಧಿಕಾರಿ ಎ.ಕೆ.ಮೊಣ್ಣಪ್ಪ, ಪೊನ್ನಂಪೇಟೆ ಅರಣ್ಯ ಸಂಶೋಧನಾ ಕಾಲೇಜಿನ ನಿವೃತ್ತ ಡೀನ್ ಕುಶಾಲಪ್ಪ, ವಿವಿಧ ಕಾಲೇಜಿನ ಉಪನ್ಯಾಸಕರು ಇತರರು ಇದ್ದರು. ಉಪನ್ಯಾಸಕರಾದ ಅನುಪಮ ಅವರು ಸ್ವಾಗತಿಸಿ, ಪ್ರಥಮ ಬಿ.ಎ.ವಿದ್ಯಾರ್ಥಿ ದೀಕ್ಷಿತ್ ಗೌಡ ಅತಿವೃಷ್ಟಿಯಿಂದ ಹಾನಿಗೊಳಗಾದ ಸ್ಥಳಗಳ ಕುರಿತು ಪಿಪಿಟಿ ಪ್ರದರ್ಶನ ನೀಡಿದರು.