ಸೋಮವಾರಪೇಟೆ, ಫೆ. 19: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಸೌಭಾಗ್ಯ ಯೋಜನೆಯಡಿ ದೇಶದ 5 ಕೋಟಿ ಮನೆಗಳಿಗೆ ವಿದ್ಯುತ್ ಕಲ್ಪಿಸುವ ಮಹತ್ವಾಕಾಂಕ್ಷಿ ಯೋಜನೆ ಪ್ರಗತಿಯಲ್ಲಿದ್ದು, 2019ರೊಳಗೆ ಮುಕ್ತಾಯಗೊಳ್ಳಲಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಇಲ್ಲಿನ ಶಾಸಕರ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಗ್ಯಾಸ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆ ದಿನದಂದು ನೀಡಿದ ಭರವಸೆಯಂತೆ ಈಗಾಗಲೇ ದೇಶದ 18 ಸಾವಿರ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಮಾರ್ಚ್ 2018ಕ್ಕೆ ಗುರಿ ಸಾಧಿಸಲಾಗಿದೆ. ಇದೀಗ ದೇಶದ ಎಲ್ಲಾ ಮನೆಗಳಿಗೂ ವಿದ್ಯುತ್ ಒದಗಿಸುವ ನಿಟ್ಟಿನಲ್ಲಿ ಸೌಭಾಗ್ಯ ಯೋಜನೆ ಜಾರಿಗೆ ತಂದಿದ್ದು, ರೂ. 16 ಸಾವಿರ ಕೋಟಿ ವೆಚ್ಚದಲ್ಲಿ ಯೋಜನೆ ಕೈಗೊಳ್ಳಲಾಗಿದೆ ಎಂದರು.

ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಏಪ್ರಿಲ್ 1 ರೊಳಗೆ ಅರ್ಹ ಫಲಾನುಭವಿಗಳಿಗೆ ಅಡುಗೆ ಅನಿಲ ಸಂಪರ್ಕ ಒದಗಿಸುವಂತೆ ಸಂಬಂಧಿಸಿದವರಿಗೆ ಸೂಚನೆ ನೀಡಲಾಗಿದೆ. ಇದುವರೆಗೂ ಗ್ಯಾಸ್ ಸಂಪರ್ಕ ಪಡೆಯದೇ ಇರುವವರು, ಅಗತ್ಯ ದಾಖಲಾತಿಗಳೊಂದಿಗೆ ಗ್ಯಾಸ್ ಏಜೆನ್ಸಿಯವರನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯೆ ಸರೋಜಮ್ಮ, ಪ.ಪಂ. ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಗಜಾನನ ಗ್ಯಾಸ್ ಏಜೆನ್ಸಿ ಮಾಲೀಕ ಪಿ.ಕೆ. ರವಿ, ಬಿಜೆಪಿ ನಗರಾಧ್ಯಕ್ಷ ಸೋಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.