ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಸಿ.ಐ. ಸಲಹೆ
ಸೋಮವಾರಪೇಟೆ, ಫೆ. 19: ರಸ್ತೆಗಳಲ್ಲಿ ಗುಂಡಿಗಳು ಕಂಡುಬಂದಲ್ಲಿ, ಬಾಳೆ ಗಿಡಗಳನ್ನು ನೆಟ್ಟು ಪ್ರತಿಭಟನೆ ಮಾಡುವ ಬದಲು, ಗುಂಡಿಗಳನ್ನು ಸ್ವತಃ ಮುಚ್ಚುವ ಕೆಲಸ ಮಾಡಬೇಕು ಎಂದು ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ ಸಲಹೆ ನೀಡಿದರು.
ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯ ಆಶ್ರಯದಲ್ಲಿ ಇಲ್ಲಿನ ಪೊಲೀಸ್ ಠಾಣಾ ವತಿಯಿಂದ ಜೇಸಿ ವೇದಿಕೆಯ ಮುಂಭಾಗದಲ್ಲಿ ಆಯೋಜಿಸಲಾಗಿದ್ದ 30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಸ್ತೆಗಳಲ್ಲಿ ಉಂಟಾಗುವ ಗುಂಡಿಗಳ ವಿರುದ್ಧ ಪ್ರತಿಭಟ ನಾರ್ಥಕವಾಗಿ ಬಾಳೆ ಗಿಡಗಳನ್ನು ನೆಟ್ಟು ಆಕ್ರೋಶ ವ್ಯಕ್ತಪಡಿಸಲಾಗುತ್ತದೆ. ಹಲವಷ್ಟು ದಿನಗಳ ಕಾಲ ಆ ರಸ್ತೆಯಲ್ಲಿ ನಾವು ನೀವುಗಳೇ ಸಂಚರಿಸ ಬೇಕಾಗುತ್ತದೆ. ಈ ಹಿನ್ನೆಲೆ ರಸ್ತೆಯಲ್ಲಿ ಉಂಟಾಗುವ ಸಣ್ಣಪುಟ್ಟ ಗುಂಡಿಗಳನ್ನು ನಾವುಗಳೇ ಮುಚ್ಚಿದರೆ ಸಂಚಾರ ದುಸ್ತರವಾಗುವದಿಲ್ಲ ಎಂದು ಮನವರಿಕೆ ಮಾಡಿದರು.
ಸಾರ್ವಜನಿಕರು ಮತ್ತು ವಾಹನ ಚಾಲಕರು ರಸ್ತೆ ನಿಯಮಗಳನ್ನು ಪಾಲಿಸಿದರೆ ಮಾತ್ರ ಅಪಘಾತಗಳನ್ನು ತಡೆಯಬಹುದು. ವಾಹನ ಚಾಲಕರು ರಸ್ತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಠಾಣಾಧಿಕಾರಿ ಶಿವಶಂಕರ್, ಸಿಬ್ಬಂದಿಗಳಾದ ಜಗದೀಶ್ ಮತ್ತಿತರರು ಇದ್ದರು. ಕುವೆಂಪು, ಜ್ಞಾನವಿಕಾಸ, ಓಎಲ್‍ವಿ ಶಾಲಾ ವಿದ್ಯಾರ್ಥಿಗಳು ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯ ಮೂಲಕ ತೆರಳಿ ರಸ್ತೆ ಸುರಕ್ಷತೆಯ ಬಗ್ಗೆ ಜಾಗ್ರತಿ ಮೂಡಿಸಿದರು.