ಸೂರ್ಯಕಿರಣ್ ಪತನ : ಕಮಾಂಡರ್ ಸಾವು

ಬೆಂಗಳೂರು, ಫೆ. 19: ಏರೋ ಇಂಡಿಯಾ 2019 ಆರಂಭಕ್ಕೂ ಮುನ್ನಾದಿನವೇ ಸಂಭವಿಸಿರುವ ಸೂರ್ಯಕಿರಣ್ ಯುದ್ಧ ವಿಮಾನಗಳ ಪತನ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆಗೆ ಸಮಿತಿ ರಚನೆ ಮಾಡಲಾಗಿದೆ ಎಂದು ಭಾರತೀಯ ವಾಯುಸೇನೆ ಮಾಹಿತಿ ನೀಡಿದೆ. ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ತಾಲೀಮು ನಿರತವಾಗಿದ್ದ ಸೂರ್ಯಕಿರಣ್ ಹಾಕ್ ಯುದ್ಧ ವಿಮಾನಗಳು ಪತನವಾದ ಬೆನ್ನಲ್ಲೇ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ವಾಯುಸೇನೆ, ಪ್ರಕರಣದ ತನಿಖೆಗೆ ಆದೇಶ ನೀಡಿರುವದಾಗಿ ಹೇಳಿದೆ. ಅಂತೆಯೇ ಪ್ರಕರಣದಲ್ಲಿ ಓರ್ವ ಪೈಲಟ್ ಸಾವನ್ನಪ್ಪಿದ್ದು, ಮೃತ ಪೈಲಟ್‍ರನ್ನು ವಿಂಗ್ ಕಮಾಂಡರ್ ಸಾಹಿಲ್ ಗಾಂಧಿ ಎಂದು ಗುರುತಿಸಲಾಗಿದೆ. ಅಂತೆಯೇ ಗಾಯಾಳು ಪೈಲಟ್‍ಗಳನ್ನು ಸ್ಕ್ವಾಡ್ರನ್ ಲೀಡರ್ ವಿಜಯ್ ಶೇಳ್ಕೆ ಮತ್ತು ವಿಂಗ್ ಕಮಾಂಡರ್ ತೇಜೇಶ್ವರ್ ಸಿಂಗ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ವಿಮಾನ ನೆಲಕ್ಕೆ ಅಪ್ಪಳಿಸಿದ ರಭಸಕ್ಕೆ ವಿಮಾನಗಳ ಇಂಧನ ಟ್ಯಾಂಕ್‍ಗಳು ಸ್ಫೋಟಗೊಂಡಿದ್ದು, ಘಟನಾ ಪ್ರದೇಶದ ಸಮೀಪದಲ್ಲಿದ್ದ ಕಟ್ಟಡಗಳಿಗೂ ಹಾನಿಯಾಗಿದೆ. ಆದರೆ ಅದೃಷ್ಟವಶಾತ್ ಯಾವದೇ ಸ್ಥಳೀಯರಿಗೆ ಗಾಯಗಳಾಗಿಲ್ಲ ಎಂದು ಸೇನೆ ಮಾಹಿತಿ ನೀಡಿದೆ.

ಶರಣಾಗದಿದ್ದರೆ ಸಾವಿಗೆ ಸಿದ್ಧರಾಗಿ

ನವದೆಹಲಿ, ಫೆ. 19: ಪಾಕಿಸ್ತಾನ ಮುಂದಾಳತ್ವದ ಭಯೋತ್ಪಾದಕ ಸಂಘಟನೆಗಳನ್ನು ಕಾಶ್ಮೀರದ ಕಣಿವೆಯಿಂದ ಸಂಪೂರ್ಣವಾಗಿ ನಾವು ನಿರ್ಮೂಲನೆ ಮಾಡುತ್ತೇವೆ. ದೇಶವೂ ಗನ್ ಹಿಡಿದ ಕಾಶ್ಮೀರಿ ಯುವಕರಿಗೆ ಶರಣಾಗುವ ಅವಕಾಶವನ್ನು ನೀಡಿದೆ. ಈ ಮೂಲಕ ಮತ್ತೆ ಸಮಾಜದ ಮುಖ್ಯವಾಹಿನಿಗೆ ಬಂದು ಜೀವನ ನಡೆಸಲು ಅವಕಾಶ ನೀಡಲಾಗಿದೆ ಎಂದು ಸೇನಾ ಲೆಫ್ಟಿನೆಂಟ್ ಕನ್ವಾಲ್ ಜೀತ್ ಸಿಂಗ್ ಧಿಲ್ಲೊನ್ ಹೇಳಿದ್ದಾರೆ. ಕಾಶ್ಮೀರಿ ಸಮಾಜದಲ್ಲಿ ಮಕ್ಕಳ ತಾಯಂದಿರು ವಿಶೇಷ ಪಾತ್ರವಹಿಸುತ್ತಾರೆ. ಹೀಗಾಗಿ ಮಾಧ್ಯಮಗಳ ಮೂಲಕ ಅವರಲ್ಲಿ ಮನವಿ ಮಾಡುತ್ತಿದ್ದೇವೆ. ಉಗ್ರರ ಜೊತೆ ಕೈ ಜೋಡಿಸಿರುವ ಮಕ್ಕಳನ್ನು ಶರಣಾಗುವಂತೆ ಮನವೊಲಿಸಿ ಮುಖ್ಯವಾಹಿನಿಗೆ ಮರಳುವಬಂತೆ ಮಾಡಬೇಕು. ಒಂದು ವೇಳೆ ಶರಣಾಗದೇ ಗನ್ ಹಿಡಿದರೆ ಅವರನ್ನು ಸೇನೆ ನಿರ್ಮೂಲನೆ ಮಾಡುತ್ತದೆ ಎಂದಿದ್ದಾರೆ.

ಎಐಎಡಿಎಂಕೆ, ಬಿಜೆಪಿ ಲೋಕಮೈತ್ರಿ

ಚೆನ್ನೈ, ಫೆ. 19: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹೊಸ್ತಿಲಲ್ಲೇ ತಮಿಳುನಾಡಿನ ಪಾಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ) ಮತ್ತು ಆಡಳಿತಾರೂಢ ಎಐಎಡಿಎಂಕೆ ಹಾಗೂ ಬಿಜೆಪಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿವೆ. ಲೋಕಸಭಾ ಚುನಾವಣೆಗೆ ಪಿಎಂಕೆ ಮತ್ತು ಬಿಜೆಪಿ ಪಕ್ಷಗಳೊಂದಿಗೆ ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಿದೆ. ಸೀಟು ಹಂಚಿಕೆ ಕುರಿತಂತೆ ಎಐಎಡಿಎಂಕೆ ಮಂಗಳವಾರ ಪಿಎಂಕೆ ಸ್ಥಾಪಕ ಡಾ. ಎಸ್. ರಾಮದಾಸ್ ಅವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಒಪ್ಪಂದಂತೆ ತಮಿಳುನಾಡಿನ ಒಟ್ಟು 39 ಲೋಕಸಭಾ ಕ್ಷೇತ್ರಗಳ ಪೈಕಿ ಏಳು ಕ್ಷೇತ್ರಗಳನ್ನು ಪಿಎಂಕೆಗೆ ಹಂಚಿಕೆ ಮಾಡಲಾಗಿದೆ. ಇದಲ್ಲದೆ, ಮುಂದಿನ ವರ್ಷ ನಡೆಯುವ ರಾಜ್ಯಸಭಾ ಚುನಾವಣೆಯಲ್ಲಿ ಒಂದು ಸೀಟು ಪಿಎಂಕೆಗೆ ನೀಡಲಾಗುತ್ತಿದೆ. ಇನ್ನು, ತಮಿಳುನಾಡು ಬಿಜೆಪಿ ಚುನಾವಣಾ ಉಸ್ತುವಾರಿ ಹಾಗೂ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರೊಂದಿಗೆ ಮಂಗಳವಾರ ನಗರದಲ್ಲಿ ನಾಲ್ಕು ತಾಸು ಮಾತುಕತೆ ನಡೆಸಿದ ಎಐಎಡಿಎಂಕೆ ಸೀಟು ಹಂಚಿಕೆ ಅಂತಿಮಗೊಳಿಸಿದೆ. ಇದರಂತೆ ಬಿಜೆಪಿಗೆ ಐದು ಲೋಕಸಭಾ ಕ್ಷೇತ್ರಗಳನ್ನು ಬಿಟ್ಟುಕೊಡಲಾಗಿದೆ.

ವಿ ಆರ್ ನಾಟ್ ಬೆಗ್ಗರ್ಸ್ ಎಂದ ಸಿಎಂ

ನವದೆಹಲಿ, ಫೆ. 19: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಏಳೋ, ಐದೋ, ಮೂರೋ ಸೀಟು ಬಿಟ್ಟು ಕೊಡ್ತಾರೋ ಎಂಬದು ಗೊತ್ತಿಲ್ಲ. ಆದರೆ ನಾವೇನು ಭಿಕ್ಷುಕರಲ್ಲ (ವಿ ಆರ್ ನಾಟ್ ಬೆಗ್ಗರ್ಸ್) ಎಂದು ಕಾಂಗ್ರೆಸ್ ನಾಯಕರ ಸೀಟು ಹಂಚಿಕೆ ನಿರ್ಧಾರಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ತಿರುಗೇಟು ನೀಡಿದ್ದು, ಇದರಿಂದಾಗಿ ಎರಡು ಪಕ್ಷಗಳ ನಾಯಕರ ಜಟಾಪಟಿ ತೀವ್ರಗೊಂಡಿದೆ. ಮೈಸೂರು ನಗರದ ಹಳೆಯ ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್ ಡೌನ್ ಕಟ್ಟಡಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ರಚನೆಯಿಂದ ರಾಷ್ಟ್ರಕ್ಕೆ ಸ್ಪಷ್ಟ ಸಂದೇಶ ರವಾನೆಯಾಗಬೇಕಾದರೆ ಎಲ್ಲರೂ ಕುಳಿತು ಸ್ಥಾನ ಹಂಚಿಕೆ ಬಗ್ಗೆ ಚರ್ಚೆ ಮಾಡಬೇಕು. ರಾಜ್ಯದ ಅಭಿವೃದ್ಧಿಗಾಗಿ ಆಡಳಿತ ಕಡೆಗೆ ನಾನು ಗಮನ ಹರಿಸಿದ್ದೇನೆ. ಜೆಡಿಎಸ್ ವರಿಷ್ಠರಾದ ಹೆಚ್.ಡಿ. ದೇವೇಗೌಡರು ಕಾಂಗ್ರೆಸ್ ಪಕ್ಷ ಅಧ್ಯಕ್ಷರ ಜೊತೆ ಮಾತುಕತೆ ನಡೆಸಿ ಸೀಟು ಹಂಚಿಕೆ ಮಾಡಿಕೊಳ್ಳುತ್ತಾರೆ. ಸದ್ಯ ಲೋಕಸಭಾ ಸೀಟು ಹಂಚಿಕೆ ಬಗ್ಗೆ ಯೋಚನೆ ಮಾಡಿಲ್ಲ ಎಂದು ತಿಳಿಸಿದರು.

ವಿದ್ಯುತ್ ಪರಿವರ್ತಿತ ರೈಲಿಗೆ ಚಾಲನೆ

ವಾರಾಣಸಿ, ಫೆ. 19: ಉತ್ತರ ಪ್ರದೇಶದ ವಾರಾಣಸಿಯ ಡೀಸೆಲ್ ಲೋಕೊಮೋಟಿವ್ಸ್ ವಕ್ರ್ಸ್(ಡಿಎಲ್‍ಡಬ್ಯ್ಲೂ)ನಲ್ಲಿಂದು ಡೀಸೆಲ್‍ನಿಂದ ವಿದ್ಯುತ್ತಿಗೆ ಪರಿವರ್ತಿಸಲ್ಪಟ್ಟ ಇಲೆಕ್ಟ್ರಿಕ್ ಲೋಕೊಮೋಟಿವ್‍ಗೆ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದರು. ದೇಶದಲ್ಲಿನ ಬ್ರಾಡ್ ಗೇಜ್ ನೆಟ್‍ವರ್ಕನ್ನು ಸಂಪೂರ್ಣವಾಗಿ ವಿದ್ಯುದೀಕರಿಸುವ ಪ್ರಯತ್ನದ ಭಾಗವಾಗಿ ಭಾರತೀಯ ರೈಲ್ವೇ ಇದೇ ಮೊದಲ ಬಾರಿಗೆ ಡೀಸಿಲ್ ಲೋಕೊಮೋಟಿವ್ ಅನ್ನು ವಿದ್ಯುತ್ತಿಗೆ ಪರಿವರ್ತಿಸಿದೆ. ವಾರಾಣಸಿಗೆ ಬಂದ ತಕ್ಷಣ ಪ್ರಧಾನಿ ಮೋದಿ ಅವರು ಮೊತ್ತ ಮೊದಲಾಗಿ ಡಿಎಲ್‍ಡಬ್ಲ್ಯು ತಲಪಿ ಇಲೆಕ್ಟ್ರಿಲ್ ಲೋಕೊಮೋಟಿವ್‍ಗೆ ಹಸಿರು ನಿಶಾನೆ ತೋರಿದರು. ಬಳಿಕ ಇಂಜಿನ್ ಒಳಭಾಗವನ್ನು ತಾವೇ ಖುದ್ದು ಪರಿಶೀಲಿಸಿದರು. 2017ರ ಡಿ. 22 ರಂದು ದೇಶದ ಮೊತ್ತ ಮೊದಲ ಈ ಪರಿವರ್ತನೆ ಯೋಜನೆಯನ್ನು ಆರಂಭಿಸಲಾಗಿತ್ತು. ಕೇವಲ 69 ದಿನಗಳ ಒಳಗೆ ಮೊದಲ ಪರಿವರ್ತಿತ ಲೋಕೊಮೋಟಿವ್ ಇಂಜಿನ್ ಸಿದ್ಧಗೊಂಡಿರುವದು ಒಂದು ಸಾಧನೆಯೇ ಆಗಿದೆ.

ದೇಶದ್ರೋಹಿ ವಿದ್ಯಾರ್ಥಿಗಳ ಬಂಧನ

ಚಂಡೀಗಢ, ಫೆ. 19: ಪಾಕಿಸ್ತಾನಕ್ಕೆ ತೆರಳುತ್ತಿದ್ದ ಕಾಶ್ಮೀರಿ ವಿದ್ಯಾರ್ಥಿಯನ್ನು ಪಂಜಾಬ್ ಪೆÇಲೀಸರು ಅತ್ತಾರಿ ಗಡಿಭಾಗದಲ್ಲಿ ಬಂಧಿಸಿದ್ದಾರೆ. ದೇಶ ವಿರೋಧಿ ಚಟುವಟಿಕೆ ಮೇಲೆ ಕಾಶ್ಮೀರದ ಮತ್ತಿಬ್ಬರು ವಿದ್ಯಾರ್ಥಿಗಳನ್ನು ಹಿಮಾಚಲ ಪ್ರದೇಶ ಪೆÇಲೀಸರು ಬಂಧಿಸಿದ್ದಾರೆ. ಶ್ರೀನಗರದಲ್ಲಿ ತೆಹ್ಸೀಮ್ ಅಹ್ಮದ್ ಅಲಿಯಾಸ್ ಜುನೈದ್‍ನನ್ನು ಜಮ್ಮು-ಕಾಶ್ಮೀರದಲ್ಲಿ ಉಗ್ರಗಾಮಿಗಳ ಜೊತೆ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದ ಮೇಲೆ ಬಂಧಿಸಲಾಗಿದೆ. ಈತ ಕೊಲೆ ಕೇಸಿನಲ್ಲಿ ಪೆÇಲೀಸರಿಗೆ ಬೇಕಾದವನಾಗಿದ್ದ. ಆತನ ಪತ್ತೆಗಾಗಿ ಪೆÇಲೀಸರು ಶೋಧಕಾರ್ಯ ನಡೆಸುತ್ತಿದ್ದರು. ತೆಹ್ಸೀಮ್ ಹಿಜ್ ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಸದಸ್ಯನಾಗಿದ್ದ. ಆತನ ಬಳಿ ಸಾಕಷ್ಟು ಲಗ್ಗೇಜುಗಳಿಲ್ಲದ ಕಾರಣ ಪೆÇಲೀಸರಿಗೆ ಸಂಶಯ ಬಂದು ತಡೆದು ಪ್ರಶ್ನೆ ಮಾಡಿದ್ದಾರೆ. ಆತನ ಪಾಸ್ ಪೆÇೀರ್ಟನ್ನು ವಶಕ್ಕೆ ಪಡೆಯಲಾಗಿದೆ.

ಶಾಸಕ ಸಿ.ಟಿ. ರವಿ ಕಾರಿಗೆ 2 ಬಲಿ

ತುಮಕೂರು, ಫೆ. 19: ರಾಷ್ಟ್ರೀಯ ಹೆದ್ದಾರಿ 75ರ ಪಕ್ಕದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಇಬ್ಬರಿಗೆ ಶಾಸಕ ಸಿ.ಟಿ. ರವಿ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ ನಡೆದಿದೆ. ಸುನಿಲ್ ಗೌಡ ಮತ್ತೆ ಶಶಿಕುಮಾರ್ ಸ್ಥಳದಲ್ಲೇ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಇಬ್ಬರ ಮೃತದೇಹವನ್ನು ಕುಣಿಗಲ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಉರ್ಕೇಹಳ್ಳಿ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಈ ಘಟನೆ ನಡೆದಿದೆ. ಕನಕಪುರ ತಾಲೂಕಿನ ಸೂರನಹಳ್ಳಿ ಗ್ರಾಮದ ಯುವಕರು ಕೊಲ್ಲೂರು, ಧರ್ಮಸ್ಥಳ ದೇವಾಲಯಗಳ ದರ್ಶನ ಮಾಡಿ ವಾಪಸ್ ತೆರಳುವಾಗ ಈ ಘಟನೆ ಸಂಭವಿಸಿದೆ. ಮಂಗಳೂರು ಕಡೆಯಿಂದ ಬಂದ ಸಿ.ಟಿ. ರವಿ ಅವರ ಫಾರ್ಚೂನರ್ ಕಾರು ರಸ್ತೆ ಬದಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಸುನಿಲ್ ಗೌಡ ಮತ್ತು ಶಶಿಕುಮಾರ್ ಎಂಬವರಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.