ಆ ದಿನ ಅಲ್ಲಿ ಬಿಸಿಲಿನ ಬೇಗೆ ಇರಲಿಲ್ಲ. ವಾಹನಗಳ ಸದ್ದೂ ಕಿವಿಗೆ ರಾಚುತ್ತಿರಲಿಲ್ಲ. ಧೂಳಿನ ಕಾಟವೂ ಇದ್ದಂತಿರಲಿಲ್ಲ. ಹೌದು ! ಒಂಟಿಯಂಗಡಿ ಮಾದರಿ ಪ್ರಾಥಮಿಕ ಶಾಲೆಗೆ ಪ್ರವೇಶಿಸುತ್ತಿದ್ದಂತೆಯೇ ಮೌನ ವ್ರತದಲ್ಲಿದ್ದ ಮರಗಿಡಗಳೂ, ತೋರಣಗಳೂ, ಬ್ಯಾನರುಗಳೂ ಸಂಭ್ರಮದಿಂದ ಭರಮಾಡಿಕೊಂಡವು. ಹೆಜ್ಜೆ ಹೆಜ್ಜೆಯಲ್ಲೂ ಕುತೂಹಲವಿತ್ತು. ಸಮಾರಂಭದ ತಾಣಕ್ಕೆ ಕಾಲಿಟ್ಟೊಡನೆ ಮೂಕ ವಿಸ್ಮಿತವಾಗಿಬಿಟ್ಟೆವು.

ಅದು ಒಂಟಿಯಂಗಡಿ ಪ್ರಾಥಮಿಕ ಶಾಲಾ ಸಂಪನ್ಮೂಲ ಕೇಂದ್ರದ ನಲಿಕಲಿ ಮೇಳ ! ಹಿಂದೆಂದೂ ಕಂಡು ಕೇಳರಿದ ಸಂಭ್ರಮ ! ಎಲ್ಲಿ ನೋಡಿದರಲ್ಲಿ ನಲಿಕಲಿ ತರಗತಿಗಳಿಗೆ ಸಂಬಂಧಪಡುವ ಕಲಿಕೋಪಕರಣಗಳ ವರ್ಣರಂಜಿತ ಪ್ರದರ್ಶನವನ್ನು ಅಚ್ಚುಕಟ್ಟಾಗಿ ಏರ್ಪಡಿಸಲಾಗಿತ್ತು. ಕನ್ನಡ, ಗಣಿತ, ಪರಿಸರ ಅಧ್ಯಯನ, ಇಂಗ್ಲೀಷ್, ಸಾಮಾನ್ಯ ಜ್ಞಾನ ಹೀಗೆ ವಿಧ ವಿಧ ! ತರ ತರ !. ಒಂದಲ್ಲಾ... ಎರಡಲ್ಲಾ... ಒಂದಷ್ಟು, ಕಣ್ಮನ ತುಂಬುವಷ್ಟು... ಮಕ್ಕಳ ಮನವನ್ನು ಆಕರ್ಷಿಸಿ ಮಸ್ತಕವನ್ನು ಸುಲಭವಾಗಿ ಏರಿ ನೆಲೆಯೂರುವಷ್ಟು .

ಆ ಹಳ್ಳಿ ಶಾಲೆಗಳ ಯಶೋಗಾಥೆಯನ್ನು ವಿಸ್ಮಯ ಲೋಕವೆಂದು ಬಣ್ಣಿಸಬಹುದು. ಕಲಿಕೋಪಕರಣಗಳ ಮಳೆಯಲ್ಲಿ ಅಕ್ಷರ ಪಲ್ಲಕ್ಕಿಗಳೂ, ಪದಗಳ ತೇರುಗಳೂ, ವಾಕ್ಯಗಳ ರಥಗಳೂ ಒಂದೆಡೆ ರಾರಾಜಿಸುತ್ತಿದ್ದರೆ, ಗಣಿತ ಇಷ್ಟು ಸುಲಭವಿದೆಯಲ್ಲಾ ಎಂದು ಮಕ್ಕಳಿಗನಿಸುವಂತಹ ವಿವಿಧ ವಿನ್ಯಾಸಗಳ ಮಾದರಿಗಳು ವಿಜೃಂಭಿಸುತ್ತಿರುವದನ್ನು ಕಂಡು ಅಬ್ಬಾ ! ಆ ಎಲ್ಲಾ ರಂಜನೀಯ ದೃಶ್ಯಗಳ ಸೆರೆಹಿಡಿಯಲು ನನ್ನಿಂದಾಗಲಿಲ್ಲ. ಅವೆಲ್ಲವನ್ನು ಸವಿದು ಆಸನವನ್ನಿಡಿಯುವಷ್ಟರಲ್ಲಿ ಸಭಾ ಕಾರ್ಯಕ್ರಮ ಆರಂಭವಾಗಿ ಆ ಯಶಸ್ವಿ ಸಮಾರಂಭದ ರೂವಾರಿಯೂ, ಸಂಪನ್ಮೂಲ ವ್ಯಕ್ತಿಯೂ ಆದ ಶ್ರೀಮತಿ ಸುಷ ಆಗಮಿಸಿರುವ ಸರ್ವರನ್ನು ತುಂಬು ಹೃದಯದಿಂದ ಸ್ವಾಗತಿಸುತ್ತಾ ತನ್ನೊಡನೆ ಹೆಜ್ಜೆಯಿಟ್ಟವರನ್ನು ನೆನೆದು ಭಾವುಕರಾಗುತ್ತಿದ್ದರು.

ಚಿಲುಮೆ ಚಿಮ್ಮಿದಂತೆ ಉದ್ಘಾಟಿಸಿದ ಡಯಟ್ ಪ್ರಾಂಶುಪಾಲರಾದ ಶ್ರೀ ವಾಲ್ಟರ್ ಹಿಲೆರಿ ಡಿಮೆಲ್ಲೊ, “ಕೊಡಗಿನಲ್ಲಿ ನಲಿಕಲಿ ವ್ಯವಸ್ಥೆಯು ಯಶಸ್ಸು ಕಾಣುತ್ತಿದ್ದ ಶಿಕ್ಷಕರ ಅರ್ಪಣಾ ಭಾವವನ್ನು ಮೆಲುಕು ಹಾಕುತ್ತಾ ನಲಿಕಲಿಯಲ್ಲಿ ಮಾತ್ರ ಮಕ್ಕಳು ಲವಲವಿಕೆಯಿಂದ ಇರುತ್ತಾರೆ. ನೆಪೋಲಿಯನ್ ಜಗತ್ತನ್ನು ಗೆದ್ದಂತೆ ನಾವೂ ನಮ್ಮ ಶಾಲೆಯನ್ನು ಗೆಲ್ಲಬಹುದು ಎಂಬದಕ್ಕೆ ಈ ಕಾರ್ಯಕ್ರಮ ಒಂದು ಉತ್ತಮ ನಿದರ್ಶನ. ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು. ನಲಿಕಲಿ ಗಟ್ಟಿಕೊಳ್ಳುವಲ್ಲಿ ಇದೊಂದು ಅತ್ಯುತ್ತಮ ಕಾರ್ಯಕ್ರಮ. ಪ್ರತಿಯೊಂದು ಕ್ಲಸ್ಟರ್ ವ್ಯಾಪ್ತಿಯಲ್ಲೂ ಅನುಷ್ಠಾನಗೊಂಡರೆ ನಾವಿನ್ಯತೆಗೆ ದಾಪುಗಾಲು ಇಟ್ಟಂತಾಗುತ್ತದೆ. ಮೆಚ್ಚುಗೆಯ ನುಡಿಗಳಿಂದ ಶಿಕ್ಷಕರನ್ನು ಹುರಿದುಂಬಿಸಿದರು.

ಡಯಟ್ ಹಿರಿಯ ಉಪನ್ಯಾಸಕರಾದ ಕೆ.ವಿ. ಸುರೇಶ್, ಜವರೇಗೌಡ, ಶಿವಕುಮಾರ್, ಮಾದೇವ್ ರವರು ನಲಿಕಲಿ ಮೇಳ ನಡೆಯುತ್ತಿರುವ ನೆಲ, ಕಟ್ಟಡ, ಆಯೋಜನೆಯ ರೀತಿ, ಕ್ಲಸ್ಟರ್ ವ್ಯಾಪ್ತಿಗೆ ಒಳಪಡುವ ಎಲ್ಲಾ ಶಾಲೆಗಳ ಸಮಾನ ಮನಸ್ಕತೆ, ಒಗ್ಗಟ್ಟನ್ನು ಗಮನಿಸುವಾಗ ಇದೊಂದು ಅಂತರ್ರಾಷ್ಟ್ರೀಯ ಮಟ್ಟದ ಕಾರ್ಯಕ್ರಮವೇನೋ ಎನ್ನುವಷ್ಟರ ಮಟ್ಟಿಗೆ ಅದ್ಭುತವಾಗಿದೆ ಎಂದು ಅಚ್ಚರಿಗೊಂಡರು.

ಹೌದು ! ಆ ವೇದಿಕೆಯಲ್ಲಿ ಎಂದೆಂದೂ ಮರೆಯಲಾಗದ ಗೋವಿನ ಹಾಡಿನ ರೂಪಕವಿತ್ತು. ವಿವಿಧ ಪ್ರಾಣಿಗಳ, ಕಲಿಕೋಪಕರಣಗಳ, ವೇಷ ಧರಿಸಿದ ಛದ್ಮವೇಷವಿತ್ತು. ಇಂಗ್ಲೀಷ್ ಡಯಲೋಗ್, ಇಂಗ್ಲೀಷಿನಲ್ಲೇ ಆಶುಭಾಷಣ, ಪಪ್ಪೆಟ್ ಶೋ, ಇಂಗ್ಲೀಷ್ ಲೆಟರ್ಸ್ ಬಳಸಿ ಪದ ರಚನೆ, ಸರಳ ಪ್ರಯೋಗ ಹೀಗೆ ನೋಡ್ತಾ.... ನೋಡ್ತಾ... ಭಿನ್ನ ಭಿನ್ನ ವಿಭಿನ್ನ ಲೋಕಕ್ಕೆ ಪುಟಾಣಿಗಳು ನಮ್ಮನ್ನು ಎಳೆದೊಯ್ದರು.

ಒಂದು ಕ್ಷಣವೂ ವೇದಿಕೆಯೆಂಬ ಪರದೆ ಖಾಲಿಯಾಗದಂತೆ ! ಶಿಕ್ಷಕರೊಳಗೆ ಅಡಗಿದ್ದ ಪ್ರತಿಭೆ ವಿದ್ಯಾರ್ಥಿಯೆಂಬ ಬಿಂಬದ ಮೂಲಕ ಅಲ್ಲಿ ಅರಳಿತ್ತು.

ಅಮ್ಮತ್ತಿ ಒಂಟಿಯಂಗಡಿ ಕ್ಲಸ್ಟರ್ ವ್ಯಾಪ್ತಿಗೆ ಬರುವ ಒಂಟಿಯಂಗಡಿ, ಹಚ್ಚಿನಾಡು, ಬೈರಂಬಾಡ, ಕೊಂಡಂಗೇರಿ, ಏಲಿಯಂಗಾಡು, ಹಾಲುಗುಂದ, ದೇವಣಗೇರಿ, ಪೊದಕೋಟೆ ಮತ್ತು ಮಗ್ಗುಲ ಈ ಎಲ್ಲಾ ಶಾಲೆಗಳಿಂದಲೂ ಒಂದಲ್ಲಾ ಒಂದು ರೀತಿಯಲ್ಲಿ ಕಲಿಕೋಪಕರಣ, ಸಾಂಸ್ಕøತಿಕ ಮತ್ತು ನಲಿಕಲಿ ಚಟುವಟಿಕೆಗಳ ಪ್ರದರ್ಶನಗಳ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣ ಮಾಡಿದ್ದು, ಆ ಹೊತ್ತಿನಲ್ಲಿ ನಮ್ಮೆಲ್ಲರನ್ನೂ ಎಗ್ಗಿಲ್ಲದೆ ನುಗ್ಗಿ ಮೋಡಿ ಮಾಡಿ ಬಿಟ್ಟವು. ಆ ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ಶಾಲೆಗಳ ಹಸಿರು ವಾತಾವರಣ, ಸ್ವಚ್ಛತೆ, ಶಿಕ್ಷಕರ ಪರಿಶ್ರಮ ಇವೆಲ್ಲವೂ ಒಂದೇ ಕುಟುಂಬದ ಸದಸ್ಯರಂತೆ ಮೇಳದ ಯಶಸ್ಸಿಗೆ ಕಾರಣೀಭೂತವಾಗಿತ್ತು.

ಕಾರ್ಯದ ಒತ್ತಡದ ಮಧ್ಯೆಯೂ ಧಾವಿಸಿ ಶ್ಲಾಘಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಮಚ್ಚಾಡೊ, ಬಿ.ಇ.ಒ ಶ್ರೀಶೈಲ, ಬಿ.ಆರ್.ಸಿ ಉತ್ತಪ್ಪ, ಜಿಲ್ಲೆಯ ಎಂ.ಆರ್.ಪಿ.ಗಳೂ, ತಾಲೂಕು ನೋಡಲ್‍ಗಳು, ಬಿ.ಆರ್.ಪಿಗಳೂ, ಸಿ.ಆರ್.ಪಿಗಳು ವಿರಾಜಪೇಟೆ ಶಿಕ್ಷಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಹಳೇ ವಿದ್ಯಾರ್ಥಿಗಳ ಸಂಘ ಹೀಗೆ ಈ ಯಶಸ್ವಿಯ ಹಿಂದೆ ಅದೆಷ್ಟು ಮನಸ್ಸುಗಳೂ ?

ಶಾಲೆಗೆ ಅಂಟಿಕೊಂಡಂತಿದ್ದ ಸಿ.ಆರ್.ಪಿ. ಕೇಂದ್ರರ ಕಚೇರಿಯೂ ಕೂಡಾ ಆ ವ್ಯಾಪ್ತಿಗೊಳಪಡುವ ಶಾಲೆಗಳ ನಕ್ಷೆ, ಮಖ್ಯೋಪಾಧ್ಯಾಯರ ಭಾವಚಿತ್ರ, ನಲಿಕಲಿ ವರ್ಣರಂಜಿತ ಕಲಿಕೋಪಕರಣಗಳಿಂದ ಆದರ್ಶ ಪ್ರಾಯವಾಗಿದ್ದು ಎಲ್ಲರ ಅಭಿನಂದನೆಗೆ ಕಾರಣವಾಯಿತು.

ತೀರ ಅಪರೂಪದ ಅದ್ಭುತ ಕಾರ್ಯಕ್ರಮವೊಂದನ್ನು ಸವಿದು ಸರ್ಕಾರಿ ಶಾಲೆಯ ಶಿಕ್ಷಕರ ಸಾಮಥ್ರ್ಯ ಅನಾವರಣಕ್ಕೆ ಸಾಕ್ಷಿಯಾಗಿ, ಯಶಸ್ವಿಗೆ ಕಾರಣರಾದ ಸರ್ವರನ್ನು ಮನದೊಳಗೆ ನಮಿಸಿ ತೆರಳುವಾಗ ಮತ್ತೆ ಮತ್ತೆ ಮನ ನವಿಲಿನಂತೆ ನರ್ತಿಸಿತ್ತು. ಸರ್ಕಾರಿ ಶಾಲೆಗೆ ಗೆಲುವಿದೆ.

ಎಂತಹ ಒತ್ತಡದ ಕೆಲಸಗಳ ಮಧ್ಯೆಯೂ ಮತ್ತೇನನ್ನೋ ಮಾಡಿ ತೋರಿಸುವ ಛಲವಿದ್ದರೆ ಆ ಮೂಲಕ ಆತಂಕ ಬದಿಗೊತ್ತಿ ತುಸು ನಿರಾಳತೆಯ ಕಾಣುವ ದಾರಿ ತಾನಾಗೆ ತೆರೆದುಕೊಳ್ಳುತ್ತದೆ. ಮನಸ್ಸು ಮಾಡಬೇಕಷ್ಟೆ. ಸ್ವತಃ ಶಿಕ್ಷಕಿಯಾಗಿರುವ ನಾನೂ ಕೂಡಾ...

- ಸುನೀತ ಕೆ.ಕೆ., ಶಿಕ್ಷಕಿ, ರಂಗಸಮುದ್ರ