ಸೋಮವಾರಪೇಟೆ, ಫೆ. 17: ಸಂಕಷ್ಟದ ಸಮಯದಲ್ಲಿ ಬೆಳೆಗಾರರ ಕೈಹಿಡಿದು ಕಾಪಾಡುತ್ತಿದ್ದ, ಕಪ್ಪು ಬಂಗಾರ ಎಂದೇ ಕರೆಸಿಕೊಳ್ಳುವ ಕಾಳುಮೆಣಸು ಬಳ್ಳಿಗಳು ಸೊರಗು ರೋಗಕ್ಕೆ ತುತ್ತಾಗಿ ನಾಶವಾಗುತ್ತಿದ್ದು, ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಪ್ರಸ್ತುತ ಬೆಲೆಯಿಲ್ಲದೆ ಕಂಗಾಲಾಗಿರುವ ಕೃಷಿಕರಿಗೆ, ಕರಿಮೆಣಸಿಗೆ ತಾಗಿದ ಸೊರಗು ರೋಗ ನೆಮ್ಮದಿಯನ್ನು ಕಸಿದುಕೊಂಡಿದೆ. ಕಳೆದ ಸಾಲಿನಲ್ಲಿ ಮುಂಗಾರು ಮಳೆ ಉತ್ತಮವಾಗಿ ಬಿದ್ದಿದ್ದರಿಂದ ಕರಿಮೆಣಸು ಬಳ್ಳಿಗಳಲ್ಲಿ ಯಥೇಚ್ಛ ಗೆರೆಗಳು ಮೂಡಿ ಬಂಪರ್ ಫಸಲಿನ ನಿರೀಕ್ಷೆ ಮಾಡಿದ್ದ ಬೆಳೆಗಾರರು, ನಂತರದ ಮಹಾಮಳೆಯಿಂದ ಎಲ್ಲವನ್ನೂ ಕಳೆದುಕೊಂಡು ಆತಂಕದಲ್ಲೇ ಇದ್ದರು.
ನಾಲ್ಕು ತಿಂಗಳ ಕಾಲ ತೋಟದೊಳಗೆ ತೆರಳಲೂ ಅಸಾಧ್ಯವಾದ ಪರಿಸ್ಥಿತಿಯಿದ್ದು, ಬಳ್ಳಿಗಳ ನಿರ್ವಹಣೆ ಸಾಧ್ಯವಾಗದ ಹಿನ್ನೆಲೆ, ಇದೀಗ ಫಸಲು ಇರುವ ಅರೋಗ್ಯವಂತ ಕಾಳುಮೆಣಸು ಬಳ್ಳಿಗಳು ಸೊರಗು ರೋಗಕ್ಕೆ ತುತ್ತಾಗುತ್ತಿವೆ. ಬುಡದಿಂದಲೇ ಬಳ್ಳಿಗಳು ಒಣಗುತ್ತಿರುವದರಿಂದ ತಾಲೂಕಿನ ಕೃಷಿಕರು ನೆಮ್ಮದಿಯನ್ನೇ ಕಳೆದುಕೊಂಡಿದ್ದಾರೆ.
ಹಲವಾರು ದಶಕಗಳಿಂದ ನೆಟ್ಟು ಆರೈಕೆ ಮಾಡಿದ್ದ ಬಳ್ಳಿಗಳು ಇದೀಗ ಸೂಕ್ತ ನಿರ್ವಹಣೆ ಇಲ್ಲದೇ ಸಾಯುತ್ತಿವೆ. ಒಂದು ವರ್ಷ ಫಸಲು ಇಲ್ಲದಿದ್ದರೂ ಹೇಗೋ ಸಂಬಾಳಿಸಿಕೊಂಡು ಹೋಗುತ್ತಿದ್ದೆವು. ಆದರೆ ದಶಕಗಳ ಕಾಲದ ಬಳ್ಳಿಗಳೇ ನಾಶವಾಗಿರುವದರಿಂದ ಮುಂದೇನು? ಎಂಬ ಪ್ರಶ್ನೆ ಕಾಡುತ್ತಿದೆ ಎಂದು ಬೆಳೆಗಾರರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.
ಸೋಮವಾರಪೇಟೆ ತಾಲೂಕಿನಲ್ಲಿ 5,500 ಹೆಕ್ಟೇರ್ ಪ್ರದೇಶದಲ್ಲಿ ಕಾಳುಮೆಣಸು ಬೆಳೆಯಲಾಗುತ್ತಿದೆ. ಕೃಷಿಕರು ಅತೀ ಹೆಚ್ಚು ಕಾಳಜಿ ವಹಿಸಿ ಬೆಳೆಯುವ ಬೆಳೆ ಇದಾಗಿದೆ. ಆದರೆ ಪ್ರಸಕ್ತ ವರ್ಷ ಮಳೆಗಾಲದಲ್ಲಿ ಧಾರಾಕಾರ ಮಳೆ ಸುರಿದು, ಕಾಳುಮೆಣಸು ಬಳ್ಳಿಗಳು ರೋಗಪೀಡಿತವಾಗಿದ್ದವು. ಈಗ ಬಿಸಿಲು ಜಾಸ್ತಿಯಾಗುತ್ತಿದ್ದಂತೆ ಸೊರಗು ರೋಗ ಆರೋಗ್ಯವಂತ ಬಳ್ಳಿಗಳಿಗೂ ಹರಡುತ್ತಿದ್ದು, ಫಸಲು ನಷ್ಟದ ಭೀತಿ ಎದುರಾಗಿದೆ.
ಫೆಬ್ರವರಿ ಕೊನೆವಾರ ಹಾಗೂ ಮಾರ್ಚ್ ತಿಂಗಳಲ್ಲಿ ಕಾಳುಮೆಣಸು ಕೊಯ್ಲು ಮಾಡಬೇಕಾಗಿದ್ದು, ಈಗಲೇ ರೋಗಪೀಡಿತ ಬಳ್ಳಿಗಳಲ್ಲಿ ಎಲೆ ಮತ್ತು ಕಾಳುಮೆಣಸು ಉದುರುತ್ತಿದೆ. ಹವಾಮಾನ ವೈಪ್ಯರೀತ್ಯದಿಂದ ಕಾಳುಮೆಣಸು ಬಳ್ಳಿಗಳನ್ನು ನೆಟ್ಟು ಅರೈಕೆ ಮಾಡಿ, ನಾಲ್ಕೈದು ವರ್ಷಗಳ ನಂತರ ಫಸಲು ಕೊಯ್ಲು ಮಾಡುವ ಸಮಯಕ್ಕೆ ಕೃಷಿಕರು ಹೈರಾಣಾಗಿರುತ್ತಾರೆ. ರೋಗ ಹತೋಟಿಗೆ ಶ್ರಮವಹಿಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ ಎಂ.ಸಿ. ಮುದ್ದಪ್ಪ ಸಂಕಷ್ಟವನ್ನು ತೋಡಿದ್ದಾರೆ.
ಶಾಂತಳ್ಳಿ ಹೋಬಳಿಯ ಶಾಂತಳ್ಳಿ, ಕುಂದಳ್ಳಿ, ತೋಳೂರುಶೆಟ್ಟಳ್ಳಿ, ಕುಮಾರಳ್ಳಿ ಬಾಚಳ್ಳಿ, ಹರಗ, ಬೆಟ್ಟದಳ್ಳಿ, ಕೊತ್ನಳ್ಳಿ, ಕುಡಿಗಾಣ, ಹೆಗ್ಗಡಮನೆ, ತಾಕೇರಿ, ಕಿರಗಂದೂರು, ಬಿಳಿಗೇರಿ, ಸುಂಠಿಕೊಪ್ಪ ಹೋಬಳಿಯ ಗರ್ವಾಲೆ, ಸೂರ್ಲಬ್ಬಿ, ಮೂವತ್ತೊಕ್ಲು ಗ್ರಾಮಗಳಲ್ಲಿ ಕಳೆದ ಮಳೆಗಾಲದಲ್ಲೇ ಕಾಳುಮೆಣಸು ಕೊಳೆರೋಗಕ್ಕೆ ತುತ್ತಾಗಿ ಫಸಲು ಹಾನಿಯಾಗಿದೆ.
ಶನಿವಾರಸಂತೆ, ಕೊಡ್ಲಿಪೇಟೆ, ಸೋಮವಾರಪೇಟೆ ಕಸಬಾ ಹೋಬಳಿಗಳ ಹೆಚ್ಚಿನ ಗ್ರಾಮಗಳಲ್ಲಿ ಕಾಳುಮೆಣಸು ಫಸಲು ಚೆನ್ನಾಗಿತ್ತು. ಬೇಸಿಗೆಯಲ್ಲಿ ನೀರಾವರಿ ಸೌಲಭ್ಯವಿದ್ದವರು ಬಳ್ಳಿಗೆ ನೀರು ಕೊಟ್ಟು ಫಸಲು ಉಳಿಸಿಕೊಂಡಿದ್ದರು. ಆದರೆ ಈಗ ರೋಗಬಾಧೆ ಹಾಗೂ ಬೆಲೆ ಇಲ್ಲದಿರುವದರಿಂದ ಕೃಷಿಕರು ನಷ್ಟದ ಹಾದಿಯಲ್ಲಿದ್ದು ಮತ್ತೊಮ್ಮೆ ಆರ್ಥಿಕ ಸಂಕಷ್ಟ ಎದುರಿಸಬೇಕಾಗಿದೆ.
ಹವಾಮಾನ ಬದಲಾವಣೆ ಹಾಗೂ ಅಧಿಕ ಶೀತ ಗಾಳಿಯೇ ಈ ರೋಗ ಹರಡಲು ಮುಖ್ಯ ಕಾರಣವೆಂದು ಹೇಳಲಾಗಿದ್ದು, ಗಾಳಿಯ ಮೂಲಕ ಸೊರಗು ರೋಗದ ಶಿಲೀಂದ್ರಗಳು ಬಳ್ಳಿಯಿಂದ ಬಳ್ಳಿಗೆ ಹರಡುತ್ತಿವೆ.
2016-17ರ ಸಾಲಿನಲ್ಲಿ ಒಣಗಿದ ಕಾಳುಮೆಣಸಿಗೆ ಕೆ.ಜಿ. ಒಂದಕ್ಕೆ 750 ರಿಂದ 800 ರೂ.ಗಳ ಬೆಲೆಯಿತ್ತು. ಆದರೆ ಪ್ರಸಕ್ತ ವರ್ಷ 250 ರಿಂದ 300 ರೂ.ಗಳಿಗೆ ಇಳಿಕೆಯಾಗಿದೆ. ಈ ಸಂದರ್ಭದಲ್ಲಿ ರೋಗಬಾಧೆ ಕಾಣಿಸಿಕೊಂಡಿರುವ ಪರಿಣಾಮ ಇರುವ ಫಸಲನ್ನೂ ಕಳೆದುಕೊಳ್ಳುವದ ರೊಂದಿಗೆ ಬಳ್ಳಿಗಳೂ ನಾಶವಾಗುತ್ತಿ ರುವದು ಬೆಳೆಗಾರರ ಚಿಂತೆಯನ್ನು ದುಪ್ಪಟ್ಟು ಮಾಡಿದೆ.
ತಾಲೂಕಿನ ಸೋಮವಾರಪೇಟೆ ಕಸಬಾ, ಸುಂಟಿಕೊಪ್ಪ, ಶನಿವಾರಸಂತೆ, ಕೊಡ್ಲಿಪೇಟೆ ಹೋಬಳಿಗಳಲ್ಲಿ ಹೆಚ್ಚಾಗಿ ಕಾಳುಮೆಣಸು ಬೆಳೆಯಾಗುತ್ತಿದ್ದು, ಎಲ್ಲಾ ಹೋಬಳಿಗಳಲ್ಲೂ ಸೊರಗು ರೋಗಬಾಧೆಯಿದ್ದು, ಕೊಡ್ಲಿಪೇಟೆ ಹಾಗೂ ಶನಿವಾರಸಂತೆಯಲ್ಲಿ ಹೆಚ್ಚಿದೆ. ರೋಗಬಾಧೆಗೆ ತುತ್ತಾದ ಬಳ್ಳಿಗಳು ಕಂದು ಬಣ್ಣಕ್ಕೆ ತಿರುಗುತ್ತಿದ್ದು, ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಉದುರುತ್ತಿವೆ. ಒಂದು ತಿಂಗಳ ಒಳಗೆ ಬಳ್ಳಿಗಳು ಸಾಯುತ್ತಿದ್ದು, ದಿನ ಕಳೆದಂತೆ ಆರೋಗ್ಯವಂತ ಬಳ್ಳಿಗಳಿಗೂ ರೋಗ ವ್ಯಾಪಿಸುತ್ತಿವೆ. ಸೊರಗು ರೋಗಕ್ಕೆ ಸೂಕ್ಷ್ಮ ಫಂಗಸ್ ಕಾರಣವಾಗಿದ್ದು, ಎಲೆ, ದಾರ ಮತ್ತು ಕಾಂಡದಲ್ಲಿ ಕಾಣಿಸಿಕೊಳ್ಳುತ್ತವೆ.
ರೋಗ ಹತೋಟಿಗೆ ಕ್ರಮ: ಕಾಳುಮೆಣಸು ಬಳ್ಳಿಯ ಬುಡವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಬುಡದಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರ ವಹಿಸಬೇಕು. ರೋಗಪೀಡಿತ ಬಳ್ಳಿಗಳನ್ನು ಬುಡಸಹಿತ ಕಿತ್ತು ದೂರದ ಪ್ರದೇಶಗಳಿಗೆ ಸಾಗಿಸಿ ನಾಶಮಾಡಬೇಕು. ಕ್ರಿಮಿನಾಶಕಗಳನ್ನು ಸಿಂಪಡಿಸುವ ಸಂದರ್ಭ ತಜ್ಞರ ಸಲಹೆ ಪಡೆದು ಉಪಯೋಗಿಸಬೇಕು ಎಂಬ ಸಲಹೆಗಳನ್ನು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ನೀಡಿದ್ದಾರೆ. -ವಿಜಯ್