ಕರಿಕೆ, ಫೆ. 17: ಜಿಲ್ಲೆಯ ಗಡಿ ಗ್ರಾಮ ಕರಿಕೆ ಮೂಲಕ ಕೇರಳಕ್ಕೆ ಸಂಪರ್ಕ ಕಲ್ಲಿಸುವ ಪ್ರಮುಖ ಅಂತರರಾಜ್ಯ ಹೆದ್ದಾರಿಯಾದ ಕರಿಕೆ - ಭಾಗಮಂಡಲ ರಸ್ತೆಗೆ ಲೋಕೋಪಯೋಗಿ ಇಲಾಖೆಯಿಂದ ಮರು ಡಾಮರೀಕರಣ ಮಾಡಿದ್ದು ಸಂಪೂರ್ಣವಾಗಿ ಕಳಪೆ ಕಾಮಗಾರಿ ನಡೆಸಿರುವ ಘಟನೆ ಬಾಚಿಮಲೆ ಎಂಬಲ್ಲಿ ಬೆಳಕಿಗೆ ಬಂದಿದೆ. ಇಲಾಖೆಯಿಂದ ಸುಮಾರು ಮೂವತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಒಂದೂವರೆ ಕಿ.ಮೀ. ಡಾಮರೀಕರಣಕ್ಕೆ ಮಂಜೂರಾಗಿದ್ದು, ಕಾಮಗಾರಿಯನ್ನು ಕುಶಾಲನಗರ ಮೂಲದ ಗುತ್ತಿಗೆದಾರ ಉತ್ತಮ ರೀತಿಯಲ್ಲಿ ನಿರ್ವಹಿಸುವ ದಾಗಿ ಛಾಪಕಾಗದದಲ್ಲಿ ಒಪ್ಪಂದ ಪತ್ರ ಸಹಿತ ಗುತ್ತಿಗೆ ಪಡೆದಿದ್ದರೂ, ಸಂಪೂರ್ಣ ಕಳಪೆ ಡಾಮರೀಕರಣ ವಾಗಿದೆ. ಕಾಮಗಾರಿ ನಿರ್ವಹಿಸಿ ಒಂದು ವಾರ ಕಳೆದಿಲ್ಲ ಇದೀಗ ಸಂಪೂರ್ಣವಾಗಿ ಕಿತ್ತು ಹೋಗಿದ್ದು, ಮೂವತ್ತು ಲಕ್ಷ ರೂಪಾಯಿ ಪೋಲು ಆದಂತಿದೆ. ಭಾಗಮಂಡಲ - ಕರಿಕೆ ರಸ್ತೆ ಮೂವತ್ತು ಕಿ.ಮೀ. ತೀವ್ರ ಹದಗೆಟ್ಟಿದ್ದರೂ ಸರಕಾರದಿಂದ ವರ್ಷಕ್ಕೊಮ್ಮೆ ಒಂದು ಕಿ.ಮಿ., ಒಂದೂವರೆ ಕಿ.ಮೀ. ಡಾಮರೀಕರಣಕ್ಕೆ ಮಂಜೂ ರಾಗುತ್ತಿದ್ದು, ಇದು ಕೂಡ ಕಳಪೆಯಾಗಿ ಕಿತ್ತು ಹೋಗುತ್ತಿರುವದು ಗ್ರಾಮಸ್ಥರನ್ನು ಕೆರಳಿಸಿದ್ದು, ಇಲಾಖೆಯನ್ನು ಸಂಶಯದಿಂದ ನೋಡುವಂತಾಗಿದೆ. ಇನ್ನೂ ಮಳೆಗಾಲಕ್ಕೆ ಮೂರು ತಿಂಗಳಿದ್ದು ಕಳೆದ ಭಾರಿ ಜಿಲ್ಲೆಯಾದ್ಯಂತ ಭೀಕರ ಜಲಪ್ರಳಯ ಸಂಭವಿಸಿದಾಗ ಸಂಪಾಜೆ, ದೇವರಕೊಲ್ಲಿ, ಮದೆನಾಡು ಬಳಿ ಹೆದ್ದಾರಿ ಕುಸಿತದ ಪರಿಣಾಮವಾಗಿ ರಸ್ತೆ ಸಂಪರ್ಕ ಕಡಿತಗೊಂಡ ಸಂದರ್ಭದಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿಗೆ ಸಂಪರ್ಕ ಕಲ್ಪಿಸಲು ಇದೇ ಕರಿಕೆ - ಭಾಗಮಂಡಲ ರಸ್ತೆಯನ್ನು ಬಳಸುವಂತೆ ಜಿಲ್ಲಾ ಅಧಿಕಾರಿಗಳು ಆದೇಶ ಹೊರಡಿಸಿದ್ದದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಮುಂದಿನ ಬಾರಿ ಮಳೆಗಾಲ ಕೂಡ ಸಂಪಾಜೆ ರಸ್ತೆ ಕಡಿತಗೊಳ್ಳುವ ಸಾಧ್ಯತೆ ಇದ್ದು ಇದೇ ರಸ್ತೆಯನ್ನು ಅವಲಂಭಿಸುವ ಅರಿವು ಲೋಕೋಪಯೋಗಿ ಇಲಾಖೆಗೆ ಇದ್ದರೂ ಕೂಡ ಈ ರಸ್ತೆ ಬಗ್ಗೆ ಸರಕಾರಕ್ಕೆ ಕಿಂಚಿತ್ತು ಕಾಳಜಿ ಇಲ್ಲದಿರುವದು ದುರದೃಷ್ಟಕರವಾಗಿದೆ. ಇದಲ್ಲದೇ ತಣ್ಣಿಮಾನಿ - ಹಕ್ಕಿಕಂಡಿ ಸಮೀಪದಲ್ಲಿ ಇದೇ ರಸ್ತೆಗೆ ಭಾಗಮಂಡಲ ಮೂಲದ ಗುತ್ತಿಗೆದಾರರೊಬ್ಬರು ಮೋರಿ ನಿರ್ಮಾಣ ಮಾಡಿದ್ದು, ಇದೂ ಕೂಡ ಕಳಪೆಯಾಗಿರುತ್ತದೆ. ಕೂಡಲೇ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಂಡು ಕೂಡಲೇ ಈ ಎರಡು ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರರ ಮೇಲೆ ಕ್ರಮಕೈಗೊಂಡು ಈ ರಸ್ತೆಗೆ ಪೂರ್ಣ ಪ್ರಮಾಣದಲ್ಲಿ ಡಾಮರೀಕರಣಗೊಳಿಸಲು ಕ್ರಮ ಕೈಗೊಳ್ಳುವದಲ್ಲದೇ ಸಾರ್ವಜನಿಕರ ಹಣ ದುರುಪಯೋಗವಾಗುವದನ್ನು ತಪ್ಪಿಸಬೇಕೆಂಬದೇ ಗ್ರಾಮಸ್ಥರ ಆಗ್ರಹವಾಗಿದೆ.

- ಹೊದ್ದೆಟ್ಟಿ ಸುಧೀರ್