ಸೋಮವಾರಪೇಟೆ, ಫೆ.15: ಮೀನುಗಾರಿಕಾ ಇಲಾಖೆ ವತಿಯಿಂದ, ಕಚೇರಿ ಆವರಣದಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸಹಾಯಧನ ಮತ್ತು ಸಲಕರಣೆಗಳನ್ನು ವಿತರಿಸಲಾಯಿತು.
ಮತ್ಸ್ಯ ಕೃಷಿ ಆಶಾಕಿರಣ ಯೋಜನೆಯಡಿ ಆಸಕ್ತ ರೈತರಿಗೆ ಮೀನು ಮರಿ ಮತ್ತು ಮೀನು ಆಹಾರಗಳನ್ನು ವಿತರಿಸಲಾಯಿತು. ಇದರೊಂದಿಗೆ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ರಾಜ್ಯ ವಲಯ ಮತ್ತು ಆರ್‍ಕೆವಿವೈ ಯೋಜನೆಯಡಿ ಹರಿಗೋಲು ಹಾಗೂ ಮೀನು ಹಿಡಿಯುವ ಸಲಕರಣೆ ಕಿಟ್‍ಗಳನ್ನು ಶೇ.100ರ ಸಹಾಯಧನದಡಿ ಫಲಾನುಭವಿಗಳಿಗೆ ನೀಡಲಾಯಿತು.
ಕಾಂಡನಕೊಲ್ಲಿ, ಮಾದಾಪುರ ವ್ಯಾಪ್ತಿಯಲ್ಲಿ ಅತಿವೃಷ್ಟಿಯಿಂದ ಮೀನು ಕೃಷಿ ಕೊಳಗಳು ಕೋಡಿ ಹರಿದು, ಏರಿಗಳು ಒಡೆದುಹೋಗಿ ನಷ್ಟ ಅನುಭವಿಸಿದ ರೈತರು ಇದೀಗ ಮೀನು ಕೃಷಿ ಹೊಂಡಗಳನ್ನು ಪುನರ್ ನಿರ್ಮಿಸಿಕೊಂಡಿದ್ದು, ಅಂತಹ 6 ಮಂದಿ ಕೃಷಿಕರಿಗೆ ಆತ್ಮಾ ಯೋಜನೆಯಡಿ ಮೀನುಮರಿಗಳು, ಮೀನು ಆಹಾರಗಳನ್ನು ವಿತರಿಸಿ ಮೀನು ಕೃಷಿಗೆ ಉತ್ತೇಜನ ನೀಡಲಾಯಿತು.
ಈ ಸಂದರ್ಭ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯರಾದ ಬಿ.ಜೆ. ದೀಪಕ್, ಪೂರ್ಣಿಮಾ ಗೋಪಾಲ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಹಾನಗಲ್ಲು ಗ್ರಾ.ಪಂ. ಅಧ್ಯಕ್ಷೆ ರೇಣುಕಾ ವೆಂಕಟೇಶ್, ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನಾ ಭರತ್ ಅವರುಗಳು ಹಾಜರಿದ್ದು, ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿದರು.