ವೀರಾಜಪೇಟೆ, ಫೆ.15: ಕೊಡವ ಹಾಕಿ ಅಕಾಡೆಮಿ ಆಯೋಜಿಸುವ ಎಲ್ಲ ಹಾಕಿ ಪಂದ್ಯಾಟ, ಹಾಕಿ ಉತ್ಸವಗಳಿಗೆ ಪೂರ್ಣ ಸಹಕಾರ ನೀಡುವದಾಗಿ ಹಾಕಿ ಕೂರ್ಗ್ ಸಂಸ್ಥೆಯ ಉಪಾಧ್ಯಕ್ಷ ಮೇಕೇರಿರ ರವಿ ಪೆಮ್ಮಯ್ಯ ತಿಳಿಸಿದ್ದಾರೆ.
ವೀರಾಜಪೇಟೆಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರವಿ ಪೆಮ್ಮಯ್ಯ ಅವರು ತಾ. 11 ರ ಪತ್ರಿಕಾಗೋಷ್ಠಿಯಲ್ಲಿ ತಪ್ಪು ತಿಳುವಳಿಕೆ ವ್ಯಕ್ತವಾಗಿತ್ತು. ನಾವು ಕೊಡವ ಹಾಕಿ ಅಕಾಡೆಮಿಯ ವಿರುದ್ಧವಾಗಿ ಯಾವದೇ ಹೇಳಿಕೆಗಳನ್ನು ನೀಡಿರುವದಿಲ್ಲ. ಪ್ರತಿರೋಧವನ್ನು ವ್ಯಕ್ತಪಡಿಸಿರುವದಿಲ್ಲ. ಇನ್ನು ಅವರಲ್ಲಿ ನಮ್ಮ ಸಂಸ್ಥೆಯ ಮೇಲೆ ಅಸಮಧಾನವಿದ್ದಲ್ಲಿ ಹಾಕಿ ಕೂರ್ಗ್ ಸಂಸ್ಥೆಯ ವತಿಯಿಂದ ವಿಷಾದ ವ್ಯಕ್ತಪಡಿಸುತ್ತೇವೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಬುಟ್ಟಿಯಂಡ ಚಂಗಪ್ಪ ಮಾತನಾಡಿ ಹಾಕಿ ಕೂರ್ಗ್ ಸಂಸ್ಥೆಯಿಂದ ಈ ವರ್ಷದ ಏಪ್ರಿಲ್ ಕೊನೆ ವಾರದಲ್ಲಿ “ಕೂರ್ಗ್ ಚಾಂಪಿಯನ್ ಟ್ರೋಫಿ” ಪಂದ್ಯಾವಳಿಯನ್ನು ಕಾಕೋಟುಪರಂಬು ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ. ‘ಕೊಡವ ಮೂಲ ನಿವಾಸಿ ಮನೆತನ’ದವರು ಪಂದ್ಯಾವಳಿಯಲ್ಲಿ ಭಾಗವಹಿಸಲು ಅವಕಾಶವಿದೆ.
ಆಸಕ್ತರು ಮೊ. 9483688806 ಇಲ್ಲವೇ 9535546955 ಸಂಪರ್ಕಿಸಬಹುದು ಪಂದ್ಯಾಟದಿಂದ ಬರುವ ಹಣದಲ್ಲಿ ಶೇಕಡ 50ರಷ್ಟನ್ನು ಪ್ರಕೃತಿ ವಿಕೋಪ ಸಂತ್ರಸ್ತರಿಗೆ ವಿತರಿಸಲಾಗುವದು ಎಂದು ಹೇಳಿದರು. ಗೋಷ್ಠಿಯಲ್ಲಿ ತಾಂತ್ರಿಕ ಸಮಿತಿಯ ಅಧ್ಯಕ್ಷ ನೆಲ್ಲಮಕ್ಕಡ ಪವನ್ ಮುತ್ತಪ್ಪ, ಚಂದಪಂಡ ಆಕಾಶ್ ಚಂಗಪ್ಪ ಉಪಸ್ಥಿತರಿದ್ದರು.