ಮಡಿಕೇರಿ, ಫೆ. 15: ಯಾವದೇ ಒಂದು ಹೋಬಳಿ ಅಥವಾ ಪ್ರದೇಶವನ್ನು ತಾಲೂಕಾಗಿ ರಚಿಸಬೇಕಾದರೆ ಭೌಗೋಳಿಕ ಮತ್ತು ಆಡಳಿತಾತ್ಮಕ ಅಗತ್ಯಗಳ ಜತೆಗೆ ರಾಜ್ಯದ ಹಣಕಾಸಿನ ಪರಿಸ್ಥಿತಿಯನ್ನು ಅವಲಂಬಿಸಿರಬೇಕಾಗುತ್ತದೆ ಎಂದು ರಾಜ್ಯ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರು ಮಾಹಿತಿ ನೀಡಿದ್ದಾರೆ.

ಅಧಿವೇಶನದ ಸಂದರ್ಭ ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ ಅವರು ಕೊಡಗು ಜಿಲ್ಲೆಯಲ್ಲಿ ಕುಶಾಲನಗರ ಹಾಗೂ ಪೊನ್ನಂಪೇಟೆ ತಾಲೂಕು ರಚನೆ ಕುರಿತಾಗಿ ಸತತ ಹೋರಾಟ ನಡೆಯುತ್ತಿರುವ ಕುರಿತು ಗಮನ ಸೆಳೆದಿದ್ದ ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ. ಈ ಎರಡು ಪಟ್ಟಣಗಳನ್ನು ತಾಲೂಕು ರಚನೆ ಮಾಡುವ ಕುರಿತಾದ ಬೇಡಿಕೆಯು ಸ್ವೀಕೃತವಾಗಿದೆ ಎಂದು ಸ್ಪಷ್ಟಪಡಿಸಿರುವ ಸಚಿವರು, ಹೊಸ ತಾಲೂಕುಗಳನ್ನು ರಚಿಸುವ ಪ್ರಸ್ತಾವನೆಗಳು ಹಣಕಾಸಿನ ಇತಿಮಿತಿಗಳನ್ನು ಒಳಗೊಂಡಿರುತ್ತದೆ. ಇದಲ್ಲದೆ ಹೊಸ ತಾಲೂಕು ರಚನೆ ಮಾಡುವ ವಿಷಯವು ಸರಕಾರದ ಒಂದು ನೀತಿಯ ವಿಷಯವಾಗಿದೆ ಎಂದಿದ್ದಾರೆ. ಈ ಎಲ್ಲಾ ಅಂಶಗಳನ್ನು ಆಧರಿಸಿ ಹೊಸ ತಾಲೂಕು ರಚಿಸುವ ಬಗ್ಗೆ ಪರಿಶೀಲಿಸಲಾಗುವದು ಎಂದು ಸಚಿವ ದೇಶಪಾಂಡೆ ಅವರು ಸ್ಪಷ್ಟಪಡಿಸಿದ್ದಾರೆ.