ಗೋಣಿಕೊಪ್ಪ ವರದಿ, ಫೆ. 15: ರಾಜ್ಯ ಸರ್ಕಾರದಿಂದ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಕಸ ವಿಂಗಡಣಾ ಘಟಕ ಸ್ಥಾಪನೆಗೆ ತಲಾ ರೂ. 20 ಲಕ್ಷ ಅನುದಾನವನ್ನು ನೀಡುತ್ತಿದ್ದು, ಇದನ್ನು ಬಳಸಿ ಕೊಂಡು ಸ್ವಚ್ಛ ಗ್ರಾಮಾಭಿವೃದ್ಧಿಗೆ ತೊಡಗಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಣಾಧಿಕಾರಿ ಲಕ್ಷ್ಮಿಪ್ರಿಯ ಕರೆ ನೀಡಿದರು.

ಸ್ವಚ್ಛ ಭಾರತ್ ಮಿಷನ್ ಅನುದಾನದಲ್ಲಿ ಕುಟ್ಟ ಗ್ರಾಮ ಪಂಚಾಯಿತಿ ವತಿಯಿಂದ ಕುಟ್ಟ ಗ್ರಾಮ ಪಂಚಾಯಿತಿ ಹಾಗೂ ಮಾರುಕಟ್ಟೆ ಆವರಣದಲ್ಲಿ ಸ್ಥಾಪಿಸಿರುವ ಹಸಿ ಹಾಗೂ ಒಣಕಸ ವಿಂಗಡಣಾ ಘಟಕವನ್ನು ವೀಕ್ಷಿಸಿ ನಿರ್ವಹಣೆ ಬಗ್ಗೆ ಮಾಹಿತಿ ಪಡೆದುಕೊಂಡ ಅವರು, ಕುಟ್ಟ ಪಂಚಾಯಿತಿಯಲ್ಲಿ ಸ್ಥಾಪಿಸಿರುವ ಘಟಕ ಜಿಲ್ಲೆಗೆ ಮಾದರಿಯಾಗಿದೆ. ಸ್ವಚ್ಛ ಭಾರತ ನಿರ್ಮಾಣಕ್ಕೆ ಎಲ್ಲಾರೂ ಕೈಜೋಡಿಸಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಪ್ರತಿ ಗ್ರಾಮ ಪಂಚಾಯಿತಿಗೆ ತಲಾ ರೂ. 20 ಲಕ್ಷ ಅನುದಾನ ದೊರೆಯಲಿದ್ದು, ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಘಟಕ ನಿರ್ಮಾಣವಾಗಬೇಕಿದೆ ಎಂದರು.

ಜಿ. ಪಂ. ಸದಸ್ಯ ಶಿವು ಮಾದಪ್ಪ ಮಾತನಾಡಿ, ಕಸದ ವಿಚಾರದಲ್ಲಿ ಸಾಕಷ್ಟು ಯೋಜನೆಗಳನ್ನು ಇಲ್ಲಿವರೆಗೆ ನಡೆಸಿದ್ದೇವೆ. ಕಸದ ಬುಟ್ಟಿ ಸ್ಥಾಪನೆ, ಜಾಗೃತಿಗಳು ನಡೆದಿವೆ. ವಿಂಗಡಣಾ ಘಟಕದಿಂದ ಹೆಚ್ಚು ಸ್ವಚ್ಛತೆ ಕಾಪಾಡಿಕೊಳ್ಳಬಹುದಾಗಿದೆ ಎಂದರು.

ಪಿಡಿಓ ಬಲರಾಮೇಗೌಡ ಮಾತನಾಡಿ, ಒಟ್ಟು ರೂ. 14.86 ಲಕ್ಷ ಅನುದಾನದಲ್ಲಿ 2 ಘಟಕ ಸ್ಥಾಪನೆ ಹಾಗೂ ಕಸ ಸಾಗಣೆಗೆ ಗೂಡ್ಸ್ ವಾಹನ ಖರೀದಿಸಿರುವದಾಗಿ ತಿಳಿಸಿದರು. ಈ ಸಂದರ್ಭ ಹಸಿರು ದಳದ ಕಾರ್ಯಕರ್ತರು, ಮಹಿಳಾ ಸಂಘದ ಪ್ರಮುಖರುಗಳು, ಕ್ಲೀನ್‍ಕೂರ್ಗ್ ಇನಿಷೇಟಿವ್ ತಂಡದ ಕಾರ್ಯಕರ್ತರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳು ಪಾಲ್ಗೊಂಡಿದ್ದರು.

ಕುಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾಪ್ರಭು, ಉಪಾಧ್ಯಕ್ಷ ಹೆಚ್. ಎಂ. ಉತ್ತಪ್ಪ, ತಾ.ಪಂ. ಇಒ ಜಯಣ್ಣ, ಸ್ವಚ್ಛ ಭಾರತ್ ಮಿಷನ್ ನೋಡೆಲ್ ಅಧಿಕಾರಿ ಅಜ್ಜಿಕುಟ್ಟೀರ ಸೂರಜ್, ತಾ.ಪಂ. ಸದಸ್ಯ ಪಲ್ವಿನ್ ಪೂಣಚ್ಚ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಲರಾಮೇಗೌಡ ಉಪಸ್ಥಿತರಿದ್ದರು. - ಸುದ್ದಿಪುತ್ರ