ಕುಶಾಲನಗರ, ಫೆ. 15: ಸಮೀಪದ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನತಾ ಕಾಲೋನಿಯಲ್ಲಿ ಶ್ರೀ ಗೌರಿ-ಗಣೇಶ ದೇವಸ್ಥಾನ ಸೇವಾ ಟ್ರಸ್ಟ್ ಹಾಗೂ ದಾನಿಗಳ ಸಹಕಾರದೊಂದಿಗೆ ನವೀಕರಣಗೊಂಡಿರುವ ದೇವಸ್ಥಾನದಲ್ಲಿ ತಾ. 22 ರಿಂದ ಮೂರು ದಿನಗಳ ಕಾಲ ಗೌರಿ-ಗಣೇಶ ವಿಗ್ರಹ, ನವಗ್ರಹ ಪ್ರತಿಷ್ಠಾಪನೆ, ಕುಂಬಾಭಿಷೇಕ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನ ಟ್ರಸ್ಟ್ ಅಧ್ಯಕ್ಷೆ ಸುಚಿತ್ರಾ ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 28 ವರ್ಷಗಳಿಂದಲೂ ಅಭಿವೃದ್ಧಿ ಕಾಣದೆ ಅರ್ಧಕ್ಕೆ ನಿಂತು ಹೋಗಿದ್ದ ದೇವಸ್ಥಾನಕ್ಕೆ ಗೌರಿ-ಗಣೇಶ್ ದೇವಸ್ಥಾನ ಟ್ರಸ್ಟ್ ಕಾಯಕಲ್ಪ ನೀಡಿ ಸಂಪೂರ್ಣ ಅಭಿವೃದ್ಧಿಪಡಿಸಿದೆ. ಈ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ರೂ. 50 ಸಾವಿರ ಕೊಡುಗೆ ನೀಡಿದ್ದಾರೆ. ದಾನಿಗಳು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ರೂ. 3.5 ಲಕ್ಷ ವೆಚ್ಚದಲ್ಲಿ ಗೋಪುರ ನಿರ್ಮಾಣ, ರೂ. 1.5 ಲಕ್ಷದಲ್ಲಿ ಕಟ್ಟಡ ದುರಸ್ತಿ ಹಾಗೂ ರೂ. 40 ಸಾವಿರ ವೆಚ್ಚದಲ್ಲಿ ದೇವಸ್ಥಾನಕ್ಕೆ ಸುಣ್ಣ, ಬಣ್ಣ ಬಳಿಯಲಾಗಿದೆ ಎಂದು ಮಾಹಿತಿ ಒದಗಿಸಿದರು. ರೂ. 1.10 ಲಕ್ಷ ವೆಚ್ಚದಲ್ಲಿ ಗೌರಿ-ಗಣೇಶ ಹಾಗೂ ನವಗ್ರಹ ವಿಗ್ರಹಗಳನ್ನು ತರಿಸಲಾಗಿದ್ದು, ಮೈಸೂರಿನ ವೇದಬ್ರಹ್ಮ ಶೈವಾಗಮ ಪ್ರವೀಣ ಕೆ. ಸುದರ್ಶನ ಬಾಬು ನೇತೃತ್ವದ ಪೂರೋಹಿತರಿಂದ ದೇವರ ಮೂರ್ತಿಗಳ ಪ್ರತಿಷ್ಠಾಪನ ಮಹೋತ್ಸವ ನಡೆಯಲಿದೆ ಎಂದರು.
ದೇವಸ್ಥಾನ ಟ್ರಸ್ಟ್ ಸದಸ್ಯ ತಮ್ಮಯ್ಯ ಮಾತನಾಡಿ, ತಾ. 24 ರಂದು 11 ಗಂಟೆಗೆ ನಡೆಯುವ ಕಲಶಾಭಿಷೇಕ ಹಾಗೂ ಧಾರ್ಮಿಕ ಪ್ರವಚನದಲ್ಲಿ ಆದಿ ಚುಂಚನಗಿರಿ ಮಹಾಸಂಸ್ಥಾನ ಹಾಸನ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಹಾಗೂ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ದಿವ್ಯಸಾನ್ನಿಧ್ಯ ವಹಿಸಲಿದ್ದಾರೆ ಎಂದರು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತನು, ಮನ, ಧನ ಸಹಾಯದೊಂದಿಗೆ ಶ್ರೀ ಗೌರಿ-ಗಣೇಶನ ಕೃಪೆಗೆ ಪಾತ್ರರಾಗಬೇಕು ಎಂದು ಮನವಿ ಮಾಡಿದ್ದಾರೆ. ಗೋಷ್ಠಿಯಲ್ಲಿ ಟ್ರಸ್ಟ್ ಉಪಾಧ್ಯಕ್ಷೆ ಜ್ಯೋತಿ ನಾಗರಾಜು ಇದ್ದರು.