ಮಡಿಕೇರಿ, ಫೆ. 13: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಗೆ ಪ್ರತಿನಿತ್ಯ ಸಾವಿರಾರು ಮಂದಿ ಬಸ್ ಪ್ರಯಾಣಿಕರು ಬಂದು ಹೋಗುತ್ತಿದ್ದಾರೆ. ಹಿಂದಿನ ಖಾಸಗಿ ಬಸ್ ನಿಲ್ದಾಣದ ಹಳೆಯ ಕಟ್ಟಡವನ್ನು ಮಳೆಗಾಲದ ಹಾನಿ ನಡುವೆ ತೆರವುಗೊಳಿಸಲಾಗಿದೆ. ಹೀಗಾಗಿ ಅಲ್ಲಿ ಖಾಸಗಿ ಹಾಗೂ ಇತರ ಬಸ್‍ಗಳಿಂದ ಬಂದಿಳಿಯುವ ಪ್ರಯಾಣಿಕರು ಬವಣೆ ಪಡುವಂತಾಗಿದೆ.
ನಿತ್ಯ ಶಾಲಾ-ಕಾಲೇಜು ವಿದ್ಯಾರ್ಥಿಗಳ ಸಹಿತ ಮಹಿಳೆಯರು, ಹೆಣ್ಣು ಮಕ್ಕಳು ಇಲ್ಲಿ ತುಂಬಾ ತೊಂದರೆಯೊಂದಿಗೆ ಪ್ರಕೃತಿಯ ಕರೆ ಬಂದಾಗ ಪರಿತಪಿಸುವಂತಾಗಿದೆ. ಮಾತ್ರವಲ್ಲದೆ ತಮ್ಮ ತಮ್ಮ ಊರುಗಳಿಗೆ ಹಿಂತಿರುಗಲು ಕೂಡ ಬಸ್‍ಗಾಗಿ ಕಾಯುತ್ತಾ, ಬಿಸಿಲಿನ ನಡುವೆ ತೊಂದರೆಯಲ್ಲಿ ಸಿಲುಕುವಂತಾಗಿದೆ.
ಕಾರಣ ಇಲ್ಲಿ ಎಲ್ಲಿಯೂ ಈಗ ನಿಂತುಕೊಳ್ಳಲು ಅಥವಾ ಇಳಿವಯಸ್ಸಿನವರು ಕುಳಿತುಕೊಳ್ಳಲು ಕೂಡ ನೆಲೆಯಿಲ್ಲದೆ ಬಿಸಿಲು, ಧೂಳಿನ ನಡುವೆ ಹೈರಾಣಾಗುವಂತಹ ದೈನಂದಿನ ಪರಿಯಾಗಿದೆ. ನಗರಸಭೆಯಿಂದ ಇದ್ದಂತಹ ತಂಗುದಾಣವನ್ನು ಅಪಾಯದ ಕಾರಣದಿಂದ ತೆರವುಗೊಳಿಸಲಾಗಿದೆ. ಬದಲಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸದಿರುವದು ನಿತ್ಯ ಪ್ರಯಾಣಿಕರ ಸಹಿತ ಬಸ್ ಕಾರ್ಮಿಕರಲ್ಲಿ ತ್ರಿಶಂಕು ಸ್ಥಿತಿಗೆ ಎಡೆಮಾಡಿದಂತಿದೆ. ಇತ್ತ ಸಂಬಂಧಪಟ್ಟವರು ಕಾಳಜಿ ತೋರಬೇಕಿದೆ.
-ಶ್ರೀಸುತ