ಕುಶಾಲನಗರ, ಫೆ. 13: ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುವ ವಾಹನಗಳ ಚಾಲಕರು ಮಕ್ಕಳ ಸುರಕ್ಷತೆಗೆ ಒತ್ತು ನೀಡಬೇಕು ಎಂದು ಕುಶಾಲನಗರ ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ ಹೇಳಿದರು.

ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ನಗರ ಪೊಲೀಸ್ ಠಾಣೆಯ ವಿಶ್ರಾಂತಿ ಗೃಹದಲ್ಲಿ ವಿವಿಧ ಶಾಲೆಗಳ ಮುಖ್ಯಸ್ಥರು, ವಾಹನ ಚಾಲಕರಿಗೆ ಹಮ್ಮಿಕೊಂಡಿದ್ದ ಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುವ ಆಟೋ, ಮ್ಯಾಕ್ಸಿಕ್ಯಾಬ್ ಇನ್ನಿತರೆ ವಾಹನಗಳ ಚಾಲಕರು ಕಡ್ಡಾಯವಾಗಿ ಸುರಕ್ಷತೆಯ ಕಾಳಜಿ ಹೊಂದಬೇಕು. ಅತಿ ವೇಗ, ನಿರ್ಲಕ್ಷ್ಯದ ಚಾಲನೆ ಮಾಡಬಾರದು. ವಿಮೆ ಸೇರಿದಂತೆ ಅಗತ್ಯ ದಾಖಲಾತಿಗಳನ್ನು ಹೊಂದುವುದರೊಂದಿಗೆ ರಸ್ತೆ ನಿಯಮಗಳನ್ನು ಪಾಲಿಸುವ ಮೂಲಕ ಅನಾಹುತ ತಪ್ಪಿಸಬಹುದು ಎಂದರು.

ಸಂಚಾರಿ ಪೊಲೀಸ್ ಠಾಣಾಧಿಕಾರಿ ಸೋಮೇಗೌಡ ಮಾತನಾಡಿ, ಸಡಕ್ ಸುರಕ್ಷಾ ಜೀವನ್ ರಕ್ಷಾ ಧ್ಯೇಯ ವಾಕ್ಯದೊಂದಿಗೆ ರಸ್ತೆ ಸುರಕ್ಷತೆ, ಸಂಚಾರ ನಿಯಮಗಳ ಬಗ್ಗೆ ಎಲ್ಲೆಡೆ ಅರಿವು ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲೆಯ ಹೆಬ್ಬಾಗಿಲು ಕುಶಾಲನಗರದ ಮೂಲಕ ವಾಹನ ಸಂಚಾರ ದಟ್ಟಣೆ ದಿನೇ ದಿನೇ ಹೆಚ್ಚಳಗೊಳ್ಳುತ್ತಿರುವ ಕಾರಣ ಅಪಘಾತಗಳ ಸಂಖ್ಯೆ ಕೂಡ ದ್ವಿಗುಣಗೊಳ್ಳುತ್ತಿರುವದು ಆತಂಕದ ವಿಚಾರ. ಈ ನಿಟ್ಟಿನಲ್ಲಿ ಇಲಾಖೆ ವತಿಯಿಂದ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ವಾಹನ ಸವಾರರು ಹೆಚ್ಚಿನ ಸಹಕಾರ ನೀಡುವಂತೆ ಕೋರಿದರು.

ನಗರ ಪೊಲೀಸ್ ಠಾಣಾಧಿಕಾರಿ ಜಗದೀಶ್, ವಿವಿಧ ವಿದ್ಯಾಸಂಸ್ಥೆಗಳ ಮುಖ್ಯಸ್ಥರು, ಚಾಲಕರು ಇದ್ದರು.