ಮಡಿಕೇರಿ, ಫೆ. 13: ಕೊಡವ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕು ಮತ್ತು ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳಲ್ಲಿ ಒಂದಾಗಿ ಪರಿಗಣಿಸಬೇಕು ಸೇರಿದಂತೆ ವಿವಿಧ ಹಕ್ಕೊತ್ತಾಯಗಳನ್ನು ಮುಂದಿಟ್ಟುಕೊಂಡು ಅಂತರ ರಾಷ್ಟ್ರೀಯ ಮಾತೃಭಾಷಾ ದಿನಾಚರಣೆಯ ದಿನವಾದ ತಾ. 21 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎನ್‍ಸಿ ಅಧ್ಯಕ್ಷ ಎನ್.ಯು. ನಾಚಪ್ಪ, ಅಂದು ಪೂರ್ವಾಹ್ನ 10.30 ರಿಂದ ನಡೆಯಲಿರುವ ಸತ್ಯಾಗ್ರಹದಲ್ಲಿ ಕೊಡವ ಭಾಷೆಗೆ ಸಂಬಂಧಿಸಿದಂತೆ ಸುಮಾರು 18 ಹಕ್ಕೊತ್ತಾಯಗಳನ್ನು ಮಂಡಿಸುವದರೊಂದಿಗೆ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ವಿವಿಧ ಪ್ರಮುಖರುಗಳಿಗೆ ಮನವಿ ಸಲ್ಲಿಸಲಾಗುವದು ಎಂದರು.

ಪ್ರತಿಯೊಬ್ಬ ವ್ಯಕ್ತಿ ಹಾಗೂ ಜನಾಂಗಕ್ಕೆ ಅವರ ಮಾತೃಭಾಷೆಯೇ ಪ್ರಮುಖವಾಗಿದ್ದು, ಕೊಡವ ಭಾಷೆ ಪ್ರಾಚೀನವೂ, ಸಮೃದ್ಧವೂ, ಶ್ರೀಮಂತವೂ ಆಗಿರುವ ಸ್ವತಂತ್ರ ಜನಪದೀಯ ಭಾಷೆಯಾಗಿದೆ. ಆದರೆ ವಿಶ್ವಸಂಸ್ಥೆಯು 2009ರಲ್ಲಿ ಪ್ರಕಟಿಸಿದ ಯುನೆಸ್ಕೋ ಪಟ್ಟಿಯಲ್ಲಿ ಜಗತ್ತಿನ ಆಪತ್ತಿನಲ್ಲಿರುವ 196 ಭಾಷೆಗಳ ಪೈಕಿ ಕೊಡವ ಭಾಷೆಯೂ ಒಂದು ಎಂಬ ಆತಂಕಕಾರಿ ವಿಚಾರವನ್ನು ಬಹಿರಂಗಪಡಿಸಿದೆ. ಅಲ್ಲದೆ ಕೇಂದ್ರ ಸರಕಾರ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳ್ಳಲಿರುವ ಭಾಷೆಗಳ ಕುರಿತು ಹೆಸರಾಂತ ಭಾಷಾ ತಜ್ಞ ಪಂಡಿತ್ ಸೀತಾಕಾಂತ್ ಮಹಾಪಾತ್ರ ಅಧ್ಯಕ್ಷತೆಯಲ್ಲಿ 2003ರಲ್ಲಿ ರಚಿಸಿದ ಸಮಿತಿ ಕೂಡಾ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳ್ಳಲು ಅರ್ಹತೆ ಪಡೆದಿರುವ ಭಾರತದ 38 ಪ್ರಮುಖ ಭಾಷೆಗಳಲ್ಲಿ ಕೊಡವ ಭಾಷೆಗೆ 19ನೇ ಸ್ಥಾನವನ್ನು ನೀಡಿದೆ ಎಂದು ತಿಳಿಸಿದರು.

ಕೊಡವ ಭಾಷೆ ಭಾರತದ 16 ಪ್ರಧಾನ ಭಾಷೆಗಳಲ್ಲಿ ಒಂದು ಎಂಬದನ್ನು ವಿಶ್ವವಿಖ್ಯಾತ ಸಮಾಜ ವಿಜ್ಞಾನಿಗಳು, ರಾಜಕೀಯ ವಿಜ್ಞಾನಿಗಳು, ಭಾಷಾ ವಿದ್ವಾಂಸರು, ಶಾಸ್ತ್ರಜ್ಞರು ಮತ್ತು ಶ್ರೇಷ್ಠ ಚಿಂತಕರಿಂದ ರಚಿಸಲ್ಪಡುವ ಮನೋರಮಾ ಇಯರ್ ಬುಕ್‍ನಲ್ಲಿ ಕೂಡಾ 2014ರಿಂದ ನಿರಂತರವಾಗಿ ಗುರುತಿಸಿ ದಾಖಲಿಸುತ್ತಾ ಬರಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ಬೇರೆ ಯಾವದೇ ಮಾನದಂಡವಾಗಲಿ, ಸಂವಿಧಾನ ತಿದ್ದುಪಡಿಗೆ ಸಂಬಂಧಿಸಿ ದಂತೆ ಯಾವದೇ ರಾಜ್ಯದ ಶಾಸನ ಸಭೆಯ ನಿರ್ಣಯವಾಗಲಿ ಅಗತ್ಯವಿಲ್ಲ ಎಂದು ನಾಚಪ್ಪ ಪ್ರತಿಪಾದಿಸಿದರು.

ದೇಶದ ಇತರ ಭಾಷೆಗಳನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ಅನುಸರಿಸಿದ ಮಾನದಂಡವನ್ನೇ ಕೊಡವ ಭಾಷೆಯ ಸೇರ್ಪಡೆಗೂ ಅನುಸರಿಸುವ ಮೂಲಕ ಕೊಡವ ಭಾಷೆಯನ್ನು ರಾಜ್ಯಾಂಗ ಖಾತರಿಗೆ ಒಳಪಡಿಸಬೇಕು ಎಂದು ಅವರು ಇದೇ ಸಂದರ್ಭ ಆಗ್ರಹಿಸಿದರು.

ಪ್ರತೀವರ್ಷ ಆಕ್ಸ್‍ಫರ್ಡ್ ಡಿಕ್ಷನರಿಯು ಜಗತ್ತಿನ ವಿವಿಧ ಭಾಷೆಗಳ 15 ಸಾವಿರ ಪದಗಳನ್ನು ಆಯ್ಕೆ ಮಾಡಿ ಅಳವಡಿಸಿಕೊಳ್ಳುತಿದ್ದು, ಅದೇ ರೀತಿ ಕೊಡವ ಜನಪದದ ಪ್ರಧಾನ ಶಬ್ಧಗಳನ್ನು ಸೇರಿಸುವ ಮೂಲಕ ಕೊಡವ ಭಾಷೆ ಮತ್ತು ಆಕ್ಸ್‍ಫರ್ಡ್ ಡಿಕ್ಷನರಿ ಎರಡನ್ನೂ ಸಮೃದ್ಧ ಮತ್ತು ಶ್ರೀಮಂತ ಗೊಳಿಸುವಂತಾಗಬೇಕು ಎಂದು ಹೇಳಿದ ಅವರು, ಕೊಡವ ಮಾತೃಭಾಷೆ ಹೊಂದಿರುವ ಕೊಡವ ಬುಡಕಟ್ಟು ಕುಲವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರ್ಪಡೆ ಮಾಡುವ ಮೂಲಕ ಸಂವಿಧಾನ ಭದ್ರತೆ ನೀಡಬೇಕು, ಜಾಗತಿಕ ನಳಂದ ವಿವಿ ಇಂದಿರಾಗಾಂಧಿ ಬುಡಕಟ್ಟು ವಿವಿ, ಜೆಎನ್‍ಯು ಮತ್ತು ಆಂಧ್ರದ ದ್ರಾವಿಡ ವಿವಿಗಳಲ್ಲಿ ಕೊಡವ ಶಾಸ್ತ್ರ ಮತ್ತು ಕೊಡವ ಭಾಷೆಯ ಅಧ್ಯಯನ ಪೀಠಗಳನ್ನು ಸ್ಥಾಪಿಸಬೇಕು, ಕೊಡವ ಭಾಷೆಯನ್ನು ಸಂವಿಧಾನದ 350ಬಿ ವಿಧಿಯಡಿ ಆಡಳಿತ ಭಾಷೆಯಾಗಿ ಪರಿಗಣಿಸಬೇಕು ಮತ್ತು 347ನೇ ವಿಧಿಯನ್ವಯ ಪಠ್ಯಕ್ರಮದಲ್ಲೂ ಸೇರ್ಪಡೆಗೊಳಿಸಬೇಕು, ಕೊಂಕಣಿ ಮತ್ತು ಫ್ರೆಂಚ್ ಭಾಷೆಯ ಮಾದರಿಯಲ್ಲಿ ರಾಜ್ಯದ ಎರಡನೇ ಭಾಷೆಯಾಗಿ ಸೇರಿಸಬೇಕು ಎಂದೂ ಅವರು ಒತ್ತಾಯಿಸಿದರು.

ಕೊಡಗು ಕರ್ನಾಟಕ್ಕೆ ಸೇರ್ಪಡೆ ಯಾದ ಬಳಿಕ 1956ರ ರಾಜ್ಯ ಪುನರ್ಘಟನಾ ಕಾಯ್ದೆ ಅನ್ವಯ ಕೊಡವರಿಗೆ ಶಿಕ್ಷಣ ಸಂಸ್ಥೆಗಳನ್ನು ನಡೆಸಲು ವಿಶೇಷ ಮೀಸಲಾತಿ ನೀಡಬೇಕಿತ್ತಾದರೂ, ಅದರಿಂದ ವಂಚಿಸಿ ಅನ್ಯಾಯ ಮಾಡಲಾಗಿದೆ ಎಂದು ನಾಚಪ್ಪ ಆರೋಪಿಸಿದರು.

ಕನ್ನಡೀಕರಣಗೊಂಡಿರುವ ಕೊಡಗಿನ ಮೂಲ ಗ್ರಾಮಗಳ ಜನಪದೀಯ ಹೆಸರುಗಳನ್ನು ಮತ್ತೆ ಅದೇ ಜನಪದೀಯ ಹೆಸರಿನಿಂದಲೇ ದಾಖಲಿಸÀಬೇಕು, ಕೊಡವರ ಹಬ್ಬಗಳಿಗೆ ಅಧಿಕೃತ ರಜೆ ಘೋಷಿಸಬೇಕು, ದೂರದರ್ಶನದಲ್ಲಿ ಹಾಗೂ ಆಕಾಶವಾಣಿಗಳಲ್ಲಿ ಇತರ ಪ್ರಮುಖ ಭಾಷೆಗಳಂತೆ ಕೊಡವ ಭಾಷೆಯ ವಾರ್ತೆಯನ್ನು ಬಿತ್ತರಿಸಬೇಕು. ಯುನೆಸ್ಕೋದ ಇಂಟ್ಯಾಜಿಬಲ್ ಕಲ್ಚರಲ್ ಹೆರಿಟೇಜ್ ಲಿಸ್ಟ್‍ನಲ್ಲಿ ಕೊಡವ ಬುಡಕಟ್ಟು ಲೋಕದ ಸಾಂಸ್ಕøತಿಕ ಅನನ್ಯತೆ ಮತ್ತು ಪಾರಂಪರಿಕ ಅಪೂರ್ವತೆಯನ್ನು ಅಧಿಕೃತವಾಗಿ ದಾಖಲಿಸಬೇಕು, ಡೆಲ್ಲಿ ಹಟ್‍ನಲ್ಲಿ ದೇಶದ ವಿವಿಧ ಜನಾಂಗೀಯ ಬುಡಕಟ್ಟುಗಳ ಅಡುಗೆ ಮತ್ತು ತಿನಿಸು ಮಳಿಗೆ ಸ್ಥಾಪಿಸಿರು ವಂತೆ ಕೊಡವ ಸಾಂಪ್ರದಾಯಿಕ ತಿನಿಸು, ಅಡುಗೆಯ ಮಳಿಗೆ ಸ್ಥಾಪಿಸಬೇಕು ಎಂಬ ಹಕ್ಕೊತ್ತಾಯ ಗಳನ್ನು ಧರಣಿ ಸಂದರ್ಭ ಮಂಡಿಸ ಲಾಗುವದು ಎಂದು ನಾಚಪ್ಪ ವಿವರಿಸಿದರು.

ಯಾವದೇ ಒಂದು ಜನಾಂಗವನ್ನು ನಿರ್ನಾಮ ಮಾಡಬೇಕಿದ್ದಲ್ಲಿ ಅವರ ಭಾಷೆ ಮತ್ತು ಭೂಮಿಯನ್ನು ನಾಶಮಾಡುವದು ಆಡಳಿತಗಾರರ ಮೊದಲ ಕೆಲಸವಾಗಿದೆ. ಅದೇ ರೀತಿ ಕೊಡವ ಜನಾಂಗವನ್ನು ಅಳಿಸಿ ಹಾಕಲು ಅವರ ಮಾತೃಭಾಷೆಯಾದ ಕೊಡವ ಭಾಷೆ ಮತ್ತು ಅವರ ಆವಾಸ ಸ್ಥಾನವಾದ ನೆಲವನ್ನು ಕಸಿದು ಕೊಳ್ಳಲು ಸರಕಾರಗಳು ಎಲ್ಲಾ ತರಹ ಕುಕೃತ್ಯಗಳನ್ನು ನಡೆಸುತ್ತಿದ್ದು, ನಮ್ಮ ಮೂಲ ಸಾಂಸ್ಕøತಿಕ ಗುರುತುಗಳನ್ನು ರಕ್ಷಿಸುವ ಬದಲು ತಿರುಚಿ, ವಿಕೃತಗೊಳಿಸಿರುವ ಕೃತ್ಯವು ಯುದ್ಧ ಅಪರಾಧದಷ್ಟೇ ಘೋರ ಅಪರಾಧವಾಗಿದೆ ಎಂದು ಟೀಕಿಸಿದರು.

ಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಪುಲ್ಲೇರ ಕಾಳಪ್ಪ, ಮಂದಪಂಡ ಮನೋಜ್, ಚಂಬಂಡ ಜನತ್ ಹಾಗೂ ಕೂಪದಿರ ಸಾಬು ಉಪಸ್ಥಿತರಿದ್ದರು.