ವೀರಾಜಪೇಟೆ, ಫೆ. 12: ಮನುಷ್ಯನ ಜೀವ ಉಳಿಸಲು ರಕ್ತದ ಅವಶ್ಯಕತೆ ಇರುವದರಿಂದ 18 ವಯಸ್ಸಿನ ಮೇಲ್ಪಟ್ಟ ವಿದ್ಯಾರ್ಥಿಗಳು ಹಾಗೂ ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ಮತ್ತೊಂದು ಜೀವವನ್ನು ಉಳಿಸಬೇಕಾಗಿದೆ ಎಂದು ಭಾರತ ಸ್ಕೌಟ್ಸ್-ಗೈಡ್ಸ್‍ನ ಜಿಲ್ಲಾ ಪ್ರಧಾನ ಆಯುಕ್ತ ಕಂಬಿರಂಡ ಕಿಟ್ಟು ಕಾಳಪ್ಪ ಹೇಳಿದರು.

ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಯುವ ರೆಡ್‍ಕ್ರಾಸ್ ಘಟಕ, ರೋವರ್ಸ್ ಆಂಡ್ ರೇಂಜರ್ಸ್ ಘಟಕ ಮತ್ತು ರೆಡ್ ರಿಬ್ಬನ್ ಕ್ಲಬ್ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಗಿಡಕ್ಕೆ ನೀರು ಎರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಕಿಟ್ಟು ಕಾಳಪ್ಪ ಮಾತನಾಡಿ, ನಾನು ನನ್ನದು ಎಂಬದನ್ನು ಬಿಟ್ಟು ರಕ್ತದಾನದಂತ ಸೇವೆ ಮಾಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಳ್ಳುವಂತಾಗಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಡಿಕೇರಿ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ರವಿ ಕರುಂಬಯ್ಯ ಮಾತನಾಡಿ, 18 ವಯಸ್ಸು ಮೇಲ್ಪಟ್ಟ ಯುವಕರು 60 ವರ್ಷದ ವರೆಗೂ ರಕ್ತದಾನ ಮಾಡಬಹುದು. ವಾಹನಗಳಲ್ಲಿ ಸಂಚರಿಸುವ ಸಂದರ್ಭ ದುರ್ಘಟನೆಗಳು ನಡೆದಾಗ ಜೀವ ಉಳಿಸಲು ಮೊದಲು ಬೇಕಾಗುವದು ರಕ್ತ. ಸಾರ್ವಜನಿಕರು ನೀಡಿದ ರಕ್ತವನ್ನು ಸಂಗ್ರಹಿಸಿ ತುರ್ತು ಸಂದರ್ಭಗಳಲ್ಲಿ ಉಪಯೋಗಿಸಬೇಕಾಗುತ್ತದೆ. ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡುವದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಟಿ.ಕೆ. ಬೋಪಯ್ಯ ಮಾತನಾಡಿ, ರಕ್ತದಾನದ ದಿನವನ್ನಾಗಿ ಜು. 14 ರಂದು ಮಾತ್ರ ಆಚರಿಸಿದರೆ ಸಾಲದು ಪ್ರತಿದಿನವು ರಕ್ತದಾನದ ದಿನವನ್ನಾಗಿ ಆಚರಿಸುವಂತಾಗಬೇಕು ಎಂದರು.

ವೇದಿಕೆಯಲ್ಲಿ ಉಪನ್ಯಾಸಕರಾದ ಸತೀಶ್, ರುದ್ರ, ಪೊನ್ನಪ್ಪ ಇತರರು ಉಪಸ್ಥಿತರಿದ್ದರು. ರೋವರ್ಸ್ ಆಂಡ್ ರೇಂಜರ್ಸ್‍ನ ಎಂ.ಎನ್. ವನಿತ್‍ಕುಮಾರ್ ಸ್ವಾಗತಿಸಿದರು, ವಿ.ಆರ್. ಮದುರ ನಿರೂಪಿಸಿದರೆ, ಎನ್.ಎಸ್.ಎಸ್. ಯೋಜನಾಧಿಕಾರಿ ಪ್ರೊ. ಎಂ.ಡಿ. ದಿವ್ಯ ವಂದಿಸಿದರು.

ರಕ್ತದಾನ ಶಿಬಿರದಲ್ಲಿ 40 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.