2018ನೇ ಇಸವಿಯಲ್ಲಿ ಮಲೆನಾಡು ಜಿಲ್ಲೆಯಾದ ಕೊಡಗಿನ ಪರಿಸ್ಥಿತಿ ಇಡೀ ರಾಜ್ಯ ಮಾತ್ರವಲ್ಲ ರಾಷ್ಟ್ರಮಟ್ಟದಲ್ಲೂ ದುರಂತದ ಕೇಂದ್ರವಾಗಿ ಕೇರಳದೊಂದಿಗೆ ಇತಿಹಾಸದ ಪುಟ ಸೇರಿಕೊಂಡಿತು.ಸೈನಿಕರ ಜಿಲ್ಲೆ ಎಂದು ಖ್ಯಾತಿ ಪಡೆದಿರುವ ಕೊಡಗಿನಲ್ಲೇ ಸೇನಾ ಕಾರ್ಯಾಚರಣೆ, ವೈಮಾನಿಕ ಸಮೀಕ್ಷೆಯ ಮೂಲಕ ಮಳೆಗಾಲದ ಭೀಕರತೆಯನ್ನು ಘಟಿಸಿ ಹೋದ ದುರ್ಘಟನೆಗಳನ್ನು ವೀಕ್ಷಣೆ ಮಾಡುವಂತಾಗಿದ್ದುದನ್ನು ಬಹುಶಃ ಯಾರೂ ಮರೆಯಲಾರರು. ರಸ್ತೆ ಕುಸಿತ, ಭೂಕುಸಿತ, ಬೆಟ್ಟಗಳ ಜಾರುವಿಕೆ... ಜಲಪ್ರಳಯದಂತಹ ದುರ್ಘಟನೆಗಳಿಂದಾಗಿ ಕೃಷಿ ಪ್ರಧಾನ ಜಿಲ್ಲೆಯಾದ ಕೊಡಗು ನಲುಗಿ ಹೋಯಿತು.ಇತ್ತೀಚಿನ ವರ್ಷಗಳಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಸುರಿದ ದಾಖಲೆಯ ಪ್ರಮಾಣದ ಮಳೆಯಿಂದಾಗಿ ಜಿಲ್ಲೆಯ ಭೌಗೋಳಿಕತೆಗೇ ಧಕ್ಕೆಯಾಗಿರುವದು ಮಾತ್ರವಲ್ಲ, ಎಲ್ಲಾ ಬೆಳೆಗಳ ನಾಶ. ಮಾನವ ಜಾನುವಾರು ಪ್ರಾಣಹಾನಿಗಳು ನಡೆದಿದ್ದು, ಮನೆ-ಮಠ ಕಳೆದುಕೊಂಡ ಸಾವಿರಾರು ಮಂದಿ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆಯುವಂತಾದದ್ದು, ನೂರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಇತರೆಡೆಗೆ ವಲಸೆ ಹೋಗಬೇಕಾದ ಅನಿವಾರ್ಯತೆ, ಹಲವರಿಗೆ ಮತ್ತೆ ಮೂಲ ನೆಲೆಗೆ ತೆರಳಲಾಗದ ದುಸ್ಥಿತಿ, ಮತ್ತೊಬ್ಬರ ಹಂಗಿನಲ್ಲಿ ಬದುಕಬೇಕಾದ ಅನಿವಾರ್ಯತೆ ಹೀಗೆ ಪ್ರಕೃತಿಯ ಆಟದೆದುರು ಎಲ್ಲವೂ ಗೌಣ ಎಂಬಂತ ಪರಿಸ್ಥಿತಿಯಲ್ಲಿ ಸ್ವಾತಂತ್ರ್ಯೋತ್ಸವವನ್ನು ಕೂಡ ಆಚರಿಸಲಾಗದ ಸನ್ನಿವೇಶದಲ್ಲಿ ಇಡೀ ಜಿಲ್ಲೆ ದಿಗ್ಬಂಧನಕ್ಕೆ ಒಳಗಾಗಿದ್ದು ಕೊಡಗಿನ ದುರಂತಕ್ಕೆ ಕೈಗನ್ನಡಿಯಾಗಿತ್ತು.

ಇದಕ್ಕೂ ಮುನ್ನ...2018ರಲ್ಲಿ ಬೇಸಿಗೆಯ ಪರ್ವಕಾಲದಲ್ಲೇ ಕೊಡಗಿನಲ್ಲಿ ಏಪ್ರಿಲ್-ಮೇ ತಿಂಗಳಿನಲ್ಲೇ ಭಾರೀ ಮಳೆ ಸುರಿದಿತ್ತು. ಜಿಲ್ಲೆಯಲ್ಲಿ ವಿವಿಧ ರೀತಿಯ ಕಾಮಗಾರಿಗಳನ್ನು ಕಾರ್ಯಗತಗೊಳಿಸಲು ಕೆಲವು ತಿಂಗಳುಗಳು ಮಾತ್ರ ಸಮಯಾವಕಾಶ ಸಿಗುತ್ತದೆ. ಆದರೆ ಇದೇ ಸಮಯದಲ್ಲಿ ಮಳೆಯ ತೀವ್ರತೆಯಿಂದ ಎಲ್ಲವೂ ಅಲ್ಲೋಲ ಕಲ್ಲೋಲವಾಗಿತ್ತು. ಇದೇ ಪರಿಸ್ಥಿತಿಯ ನಡುವೆ ರಾಜ್ಯ ವಿಧಾನಸಭಾ ಚುನಾವಣೆಯೂ ಎದುರಾಗಿತ್ತು. ಇದರೊಂದಿಗೆ ಮಾರ್ಚ್ ತಿಂಗಳ ಅಂತ್ಯ ಎಂಬ ವಾರ್ಷಿಕ ವರ್ಷಾಂತ್ಯದ ಲೆಕ್ಕಾಚಾರ-ಕಡಿವಾಣಗಳಿಂದಾಗಿ ಎಲ್ಲವೂ ಶೂನ್ಯವೇ ಆಗಿತ್ತು. ಕ್ರೀಡೆಯ ಸಂಭ್ರಮಗಳಿಗೂ ಅಡಚಣೆಯಾಗಿತ್ತು. ಅಂತೂ-ಇಂತು ಆ ವರ್ಷ ಮುಗಿದರೂ ಜಿಲ್ಲೆ ಇನ್ನೂ ಚೇತರಿಕೆ ಕಂಡಿಲ್ಲ

2019 ಬಂದರೂ ಮುಗಿದಿಲ್ಲ ಆತಂಕ...

ಕೊಡಗು ಎದುರಿಸಿದ ಧಾರುಣತೆಗೆ ಇಡೀ ರಾಜ್ಯದ ಜನತೆ ಮಿಡಿದಿದ್ದಾರೆ.... ಸರಕಾರವೂ ಸ್ಪಂದಿಸಿದೆ... ಸಂಘ-ಸಂಸ್ಥೆಗಳು ತಮ್ಮದೇ ಕಾಣಿಕೆ ನೀಡಿವೆ. ಆ ಸಂದರ್ಭದಲ್ಲಿ ಇವು ಅನಿವಾರ್ಯವೂ... ಅಗತ್ಯವೂ ಆಗಿತ್ತು ನಿಜ... ಆದರೂ ಮುಂದಿನ ಜವಾಬ್ದಾರಿ ಸಾಕಷ್ಟಿವೆ-ಇದನ್ನು ನಿಭಾಯಿಸಬೇಕಿರುವದು ನಮ್ಮನ್ನಾಳುವ ಸರಕಾರವಲ್ಲವೇ? ಇದೀಗ ಈಗಾಗಲೇ ಫೆಬ್ರವರಿ ತಿಂಗಳ ಅರ್ಧ ಅವಧಿ ಮುಗಿದಿದೆ... ಮತ್ತೆ ಎದುರಾಗುವದು ಮಾರ್ಚ್ ಅಂತ್ಯ ಎಂಬ ವಾರ್ಷಿಕ ಅವಧಿಯ ಲೆಕ್ಕಾಚಾರ.

ಕೊಡಗಿನ ಪುನರ್ ನಿರ್ಮಾಣಕ್ಕೆಂದು ಹಲವು

(ಮೊದಲ ಪುಟದಿಂದ) ಸಲಹೆ-ಅಭಿಪ್ರಾಯಗಳಿಂದ ಕೊಡಗು ಅಭಿವೃದ್ಧಿ ಪ್ರಾಧಿಕಾರವೇನೋ ರಚನೆಯಾಗಿದೆ. ಆದರೆ ಈ ತನಕ ಪ್ರಾಧಿಕಾರದ ಸಭೆಯೇ ನಡೆದಿಲ್ಲ. ಬದಲಿಗೆ ಜಿಲ್ಲೆಯಲ್ಲಿ ಪ್ರಾಕೃತಿಕ ದುರಂತದ ಸಂದರ್ಭ ಖುದ್ದು ಅನುಭವ ಹೊಂದಿದ್ದ ಅಧಿಕಾರಿಗಳು ಮಾತ್ರ ಒಬ್ಬೊಬ್ಬರಾಗಿ ಎತ್ತಂಗಡಿಯಾಗಿದ್ದಾರೆ... ಆಗುತ್ತಿದ್ದಾರೆ. ಮಳೆ ಹಾನಿ ಪರಿಹಾರ... ಸಂತ್ರಸ್ತರಾದವರ ಅಗತ್ಯತೆಗಳು ಮಾತ್ರ ಶೀಘ್ರಗತಿಯಲ್ಲಿ ಅನುಷ್ಠಾನಗೊಳ್ಳುತ್ತಿಲ್ಲ.

ಎದುರುಗೊಳ್ಳುತ್ತಿರುವ ಲೋಕಸಮರ...

ಇದೇ ಪರಿಸ್ಥಿತಿಯ ನಡುವೆ ಈ ಬಾರಿ ಲೋಕಸಭಾ ಚುನಾವಣೆಯೂ ಎದುರುಗೊಳ್ಳುತ್ತಿದೆ. ಈ ಚುನಾವಣೆ ಘೋಷಣೆಯಾದಲ್ಲಿ ಮತ್ತೆ ನೀತಿ ಸಂಹಿತೆ ಮಾತ್ರವಲ್ಲ ರಾಜಕೀಯ ಕದನವೂ ಆರಂಭಗೊಳ್ಳಲಿದೆ. ಇದು ಪೂರ್ಣಗೊಳ್ಳುವ ವೇಳೆಗೆ ಮತ್ತೊಂದು ಮಳೆಗಾಲ ಎದುರುಗೊಳ್ಳುವದು ಶತಸಿದ್ಧ. ಶೈಕ್ಷಣಿಕ ಪರೀಕ್ಷೆಗಳು, ವಿವಾಹ ಮತ್ತಿತರ ಸಮಾರಂಭಗಳು, ವಿವಿಧ ಕ್ರೀಡಾಕೂಟಗಳು ಈ ಅವಧಿಯಲ್ಲಿ ಬರಲಿದ್ದು, ದಿನಗಳು ಉರುಳುವದೇ ಅರಿವಾಗದು... ಅಷ್ಟರಲ್ಲೇ ಮತ್ತೆ ಮಳೆಗಾಲದ ಪರಿಸ್ಥಿತಿ ಕೊಡಗಿನ ವಾಸ್ತವತೆಯಾಗಿದ್ದು, ಜನತೆಯಲ್ಲಿ ಅದರಲ್ಲೂ ಕಳೆದ ಬಾರಿ ಸಂತ್ರಸ್ತರಾದವರ ಮನದಲ್ಲಿ ಮತ್ತೆ ಆತಂಕ ಮನೆಮಾಡುತ್ತಿದೆ.

ಸುಮಾರು 800 ಮನೆಗಳ ನಿರ್ಮಾಣಕ್ಕೆ ಒಂದೇ ಸಂಸ್ಥೆಗೆ ಗುತ್ತಿಗೆ ನೀಡಿರುವ ಬಗ್ಗೆಯೇ ‘ವಾಸನೆ’ ಆರಂಭಗೊಂಡಿದ್ದು, ತಿಂಗಳಿಗೆ 50 ಮನೆಗಳು ಮಾತ್ರ ನಿರ್ಮಿಸಲು ಸಾಧ್ಯ ಎಂದು ಗುತ್ತಿಗೆದಾರರ ಹೇಳಿಕೆಯಿಂದ ಆಶ್ರಯಕ್ಕೆ ಅರ್ಜಿ ಸಲ್ಲಿಸಿದವರು ಆತಂಕಕ್ಕೆ ಈಡಾಗಿದ್ದಾರೆ. ಜೊತೆಯಲ್ಲಿ 500 ಮನೆ ನಿರ್ಮಾಣವಾದ ಬಳಿಕವಷ್ಟೇ ಹಸ್ತಾಂತರ ಎಂಬ ಸಚಿವರ ಹೇಳಿಕೆಗಳೂ, ಭರವಸೆಯನ್ನು ಕ್ಷೀಣಿಸಿವೆ. ಜಿಲ್ಲೆಯ ಭೌಗೋಳಿಕ ಸ್ಥಿತಿಯೇ ಬದಲಾದ ಈ ಸನ್ನಿವೇಶದಲ್ಲಿ ನೂರಾರು ಮಂದಿಯ ಆಸ್ತಿಯ ಸ್ಥಿತಿಗತಿಯನ್ನು ಸರ್ವೆ ಮಾಡುವ ತುರ್ತು ಅಗತ್ಯವಿದ್ದರೂ ಸರಕಾರದ ಬೆಳವಣಿಗೆ ಏನೂ ಕಾಣುತ್ತಿಲ್ಲ. ಹಲವೆಡೆ ತಾತ್ಕಾಲಿಕ ರಸ್ತೆ ನಿರ್ಮಿಸಿರುವದು, ನಂತರದ ದಿನಗಳಲ್ಲಿ ಅಲ್ಲಿ ಹಾಕಿದ್ದ ಮರಳು ಮೂಟೆಗಳು ನೀರು ಪಾಲಾಗುತ್ತಿರುವದು, ಮುಂದಿನ ಮಳೆಗಾಲದಲ್ಲಿ ಜಿಲ್ಲೆಯ ರಸ್ತೆಗಳ ಪರಿಸ್ಥಿತಿ ಏನಾಗಬಹುದು ಎಂಬ ಆತಂಕವನ್ನು ಈಗಲೇ ಮೂಡಿಸಿದೆ. ಕಳೆದ ವರ್ಷದ ಮಳೆಗೆ ಅಲ್ಪಸ್ವಲ್ಪ ತೊಂದರೆಯಾಗಿ ಮುಂದಿನ ದಿನಗಳಲ್ಲಿ ಕುಸಿಯುವ ಭೀತಿಯನ್ನು ಅಂದಿನಿಂದಲೇ ಸೃಷ್ಟಿಸಿದೆ.

ಪುಟ್ಟ ಮಕ್ಕಳು ಶಿಕ್ಷಣಕ್ಕಾಗಿ ಪೋಷಕರಿಂದ ದೂರವಾಗಿ ಇತರೆಡೆ ಆಶ್ರಯ ಪಡೆದಿದ್ದರೂ, ಕೌಟುಂಬಿಕ ವ್ಯವಸ್ಥೆಯಿಂದ ದೂರ ಉಳಿಯಬೇಕಾದ ಪರಿಸ್ಥಿತಿ ಎದುರಾಗಿದೆ. ಇವೆಲ್ಲವುಗಳ ಮಧ್ಯೆ ಹಲವು ಸೇವಾ ಸಂಸ್ಥೆಗಳು ಮನೆ ನಿರ್ಮಾಣ, ಸಹಾಯಧನ ನೀಡಿಕೆ, ಉದ್ಯೋಗಾವಕಾಶ, ಸ್ವಾವಲಂಬಿ ಉದ್ಯೋಗ ಸೃಷ್ಟಿಗೆ ಉಪಕರಣಗಳ ಕೊಡುಗೆ, ಮಾರುಕಟ್ಟೆ ವ್ಯವಸ್ಥೆಗಳನ್ನು ಕಲ್ಪಿಸುತ್ತಿದ್ದರೂ, ಸರಕಾರದ ಗಮನದ ಅಗತ್ಯ ಇಲ್ಲವೆಂದಲ್ಲ.ಜಿಲ್ಲೆಯಲ್ಲಿ ಮಳೆಗಾಲಕ್ಕೆ ಮುನ್ನ ನಡೆಯಬೇಕಿರುವ ಕೆಲಸ ಕಾರ್ಯಗಳು ಸಾಕಷ್ಟಿವೆ.

ರಾಜಕೀಯ ಮೇಲಾಟ...

ಕೊಡಗಿನ ನೈಜ ಪರಿಸ್ಥಿತಿ ಹೀಗಿರುವಾಗ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಮೇಲಾಟಗಳು ದಿನೇ ದಿನೇ ಹೆಚ್ಚಾಗುತ್ತಿರುವದು, ದೋಸ್ತಿ ಸರಕಾರ ಹಾಗೂ ವಿಪಕ್ಷದ ನಡುವಿನ ಕಿತ್ತಾಟವನ್ನು ವೀಕ್ಷಿಸುತ್ತಿರುವ ಜಿಲ್ಲೆಯ ಜನರು ಕೊಡಗು ಮುಂದೇನು ಎಂದು ಆತಂಕಗೊಳ್ಳುವಂತಾಗಿದೆ.

ಆಡಿಯೋ-ವಿಡಿಯೋಗಳ ಬಿಡುಗಡೆಯಲ್ಲಿ ಕೋಟಿ ಕೋಟಿ ತೆರಿಗೆದಾರನ ಹಣದಲ್ಲಿ ಲಂಚ ಹಂಚಿಕೊಳ್ಳುವ ರೀತಿಯ ಸಂಭಾಷಣೆಗಳು, ಬೇಡಿಕೆಗಳು, ಆಮಿಷಗಳಲ್ಲಿ ಮುಳುಗಿರುವ ರಾಜಕಾರಣಿಗಳ ಹೇಸಿಗೆಯ ವರ್ತನೆಗಳಲ್ಲಿ ಕೊಡಗಿನ ಸಮಸ್ಯೆ ಯಾರಿಗೆ ಬೇಕಿದೆ?

-ಶಶಿಸೋಮಯ್ಯ