ಸಿದ್ದಾಪುರ, ಫೆ. 12:ಇತಿಹಾಸ ಪ್ರಸಿದ್ಧ ಪಾಲಿಬೆಟ್ಟ ಆರ್ಕಾಡ್ ಪಟ್ಟಣ್‍ಬಾಬ ಶಾಹ್-ವಲಿಯವರ ಉರೂಸ್ ವಿಜೃಂಭಣೆಯಿಂದ ನಡೆಯಿತು. ದರ್ಗಾವನ್ನು ವಿದ್ಯುತ್ ಅಲಂಕೃತದಿಂದ ಸಿಂಗಾರಗೊಳಿಸ ಲಾಗಿತ್ತು. 4 ದಿನಗಳ ಕಾಲ ನಡೆದ ಉರೂಸ್‍ನ ಕೊನೆಯ ದಿನ ಸೋಮವಾರÀದಂದು ರಾತ್ರಿ ಸರ್ವಧರ್ಮ ಸಮ್ಮೇಳನ ನಡೆಯಿತು. ಮುಖ್ಯ ಭಾಷಣಗಾರರಾಗಿ ಭಾಗವಹಿಸಿ ಮಾತನಾಡಿದ ಮೂಡಿಗೆರೆಯ ಅಜೀಜ್‍ದಾರ್ಮಿ ಅವರು ಮನುಷ್ಯನ ಆರೋಗ್ಯದಷ್ಟೇ ಸಮಾಜದ ಸ್ವಾಸ್ಥ ಕೂಡ ಮುಖ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ನಾವೆಲ್ಲರೂ ಪ್ರಕೃತಿಯ ಬೆಳಕಿನ ಕಡೆಗೆ ಹೋಗಬೇಕು. ಸಹೋದರರಂತೆ ಸೌಹಾರ್ದತೆಯಿಂದ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಜೀವನ ಸಾಗಿಸಬೇಕೆಂದು ಕರೆ ನೀಡಿದರು. ಕನ್ನಡ ಮಠ ಮತ್ತು ಬೆಟ್ಟದಪುರ ಮಠದ ಶ್ರೀ ಚೆನ್ನಬಸವ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ ಪರಸ್ಪರ ಸೌಹಾರ್ದತೆ ಸಂಕೇತದ ಕೇಂದ್ರವಾಗಿ ಪಾಲಿಬೆಟ್ಟ ಪಟ್ಟಣ್‍ಬಾಬ ದರ್ಗಾವು ಪುಣ್ಯದ ಸನ್ನಿಧಿಯಾಗಿದೆ. ನಾವೆಲ್ಲರೂ ವ್ಯಕ್ತಿಗತವಾಗಿ ಬೇರೆಯಿದ್ದರೂ ನಾವು ಒಂದು ಕಡೆ ಸೇರುವದೇ ಧರ್ಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪಾಲಿಬೆಟ್ಟ ಲೂಡ್ಸ್ ಚರ್ಚ್ ಧರ್ಮಗುರುಗಳಾದ ಫಾ. ಚಾಲ್ರ್ಸ್ ನ್ನೋರೇನ್ನ ಅವರು ಮಾತನಾಡಿ, ಪಾಲಿಬೆಟ್ಟದ ಪಟ್ಟಣ್‍ಬಾಬ ದರ್ಗಾದಲ್ಲಿ ಉರೂಸ್ ಆಚರಣೆಯಲ್ಲಿ ಎಲ್ಲಾ ಧರ್ಮದವರು ಭಾಗವಹಿಸುತ್ತಿರುವದು ವಿಶೇಷವಾಗಿದೆಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶಾಂತಿ-ಪ್ರೀತಿ-ಸಮಾಧಾನದಿಂದ ಬಾಳುವದೇ ನಮ್ಮ ಗುರಿಯಾಗಬೇಕೆಂದು ಕರೆ ನೀಡಿದರು.

ಪಾಲಿಬೆಟ್ಟ ಜುಮಾ ಮಸೀದಿಯ ಆಲಿಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಉತ್ತಮ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ಸರ್ವಧರ್ಮ ಸಮ್ಮೇಳನವನ್ನು ಏರ್ಪಡಿಸಲಾಗಿದೆ ಎಂದರು. ಜಾತಿಯ ಹೆಸರಿನಲ್ಲಿ ವೈಷಮ್ಯ ಇರಬಾರದೆಂದ ಅವರು ನಾವೆಲ್ಲ ಒಂದೇ ಎಂಬ ಸಂದೇಶ ಮೈಗೂಡಿಸಿಕೊಳ್ಳಬೇಕೆಂದರು.

ಜಿಲ್ಲಾ ಕಾಂಗ್ರೆಸ್‍ನ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಯಾಕೂಬ್ ಮಾತನಾಡಿ ಸರ್ವಧರ್ಮ ಸಮ್ಮೇಳನದಿಂದ ಕೋಮುವಾದಗಳು ದೂರವಾಗುತ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪಾಲಿಬೆಟ್ಟ ಜುಮಾ ಮಸೀದಿಯ ಅದ್ಯಕ್ಷ ಸಿ.ಎಂ ಅಬ್ದುಲ್ ಜಬ್ಬಾರ್, ಪಾಲೆಬೆಟ್ಟ ಗ್ರಾ.ಪಂ.ಅಧ್ಯಕ್ಷ ಪಿ.ಪಿ,ಬೋಪಣ್ಣ, ಪಿಡಿ.ಓ. ಅಬ್ದುಲ್ ಜಮಾಯತ್ ಉ¯ಮಾ ಜಿಲ್ಲಾಧ್ಯಕ್ಷ ಮಹಮ್ಮಾದ್ ಮುಸ್ಲಿಯಾರ್ ಇನ್ನಿತರರು ಹಾಜರಿದ್ದರು. ನಂತರ ರಾತ್ರಿ ಧಾರ್ಮಿಕ ಉಪನ್ಯಾಸ ನೆರವೇರಿತು. ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ, ಹೊರ ರಾಜ್ಯಗಳಿಂದ ಸಾವಿರಾರು ಮಂದಿ ಉರೂಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಮಡಿಕೇರಿ ಡಿ.ವೈ.ಎಸ್.ಪಿ ಸುಂದರ್‍ರಾಜ್ ಹಾಗೂ ಸಿ.ಐ. ಅನೂಪ್ ಮಾದಪ್ಪ ಠಾಣಾಧಿಕಾರಿ ದಯಾನಂದ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸಿ.ಹೆಚ್. ಫಯಾಸ್‍ಅಮ್ಮದ್ ಅವರು ನಿರೂಪಿಸಿ, ಸ್ವಾಗತಿಸಿ ವಂದಿಸಿದರು.