ಮಡಿಕೇರಿ, ಫೆ.11: ಕಳೆದ 22 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯನ್ನು ಈ ವರ್ಷ ಪ್ರಕೃತಿ ವಿಕೋಪದ ಕಾರಣದಿಂದ ಕೈಬಿಡಲಾಗಿತ್ತು. ಆದರೆ, ಇದೀಗ ಕೆಲವು ಕೊಡವ ಕುಟುಂಬಗಳ ವಿನಂತಿಯಂತೆ ಹಾಕಿ ಕೂರ್ಗ್ ಸಂಸ್ಥೆಯ ಮೂಲಕ ಪಂದ್ಯಾವಳಿಯನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಪೈಕೇರ ಕಾಳಯ್ಯ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂದ್ಯಾವಳಿಯಲ್ಲಿ ಸುಮಾರು 100 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಏಪ್ರಿಲ್ ಕೊನೆಯ ವಾರದಿಂದ ಆಸ್ಟ್ರೋಟರ್ಫ್ ಮೈದಾನ ಅಥವಾ ಕಾಕೋಟುಪರಂಬು ಮೈದಾನದಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದರು.ಯಾವ ಮೈದಾನದಲ್ಲಿ ಪಂದ್ಯಾವಳಿ ನಡೆಸಬೇಕು ಎನ್ನುವ ಬಗ್ಗೆ ಕೊಡವ ಕುಟುಂಬಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವದು ಎಂದರು.ಹಾಕಿ ಕೂರ್ಗ್ “ಇಂಟರ್ ಕೊಡವ ಫ್ಯಾಮಿಲಿ ಚಾಂಪಿಯನ್ ಶಿಪ್ 2019” ಹೆಸರಿನಲ್ಲಿ ಪಂದ್ಯಾವಳಿಯನ್ನು ನಡೆಸಲಾಗುವದು. ವಿಶೇಷವಾಗಿ ಕಳೆದ 22 ವರ್ಷಗಳಿಂದ ಸತತವಾಗಿ ಸೆಮಿಫೈನಲ್ ಮತ್ತು ಫೈನಲ್ ಆಡಿದ 8 ಪ್ರಮುಖ ತಂಡಗಳ ನಡುವೆ ಲೀಗ್ ಮಾದರಿಯಲ್ಲಿ ‘ಹಾಕಿ ಚಾಂಪಿಯನ್ಸ್ ಟ್ರೋಫಿ’ ಪಂದ್ಯಾವಳಿಯನ್ನು ಕೂಡ ಆಯೋಜಿಸಲಾಗಿದೆ ಎಂದರು. ಪಂದ್ಯಾವಳಿ ನಡೆದ ನಂತರ ಉಳಿಕೆಯಾಗುವ ಹಣದ ಶೇ.50 ರಷ್ಟನ್ನು ಪ್ರಕೃತಿ ವಿಕೋಪ ಸಂತ್ರಸ್ತರಿಗೆ ನೀಡಲಾಗುವದು. ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ತಂಡಗಳು 1 ಸಾವಿರ ರೂ. ಪ್ರವೇಶ ಶುಲ್ಕ ಪಾವತಿಸಿ ಹೆಸರು ನೋಂದಾಯಿಸಿ ಕೊಳ್ಳಬಹುದು ಎಂದು ಪೈಕೇರ ಕಾಳಯ್ಯ ಮಾಹಿತಿ ನೀಡಿದರು.
ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ಪ್ರದೇಶದ ಕುಟುಂಬ
(ಮೊದಲ ಪುಟದಿಂದ) ತಂಡಗಳಿಗೆ ಪ್ರವೇಶ ಉಚಿತವಾಗಿರುತ್ತದೆ ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ಈ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ. 9535546955, 9483394515, 9480637799.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಮೊಳ್ಳೇರ ಪಿ. ಸುಬ್ಬಯ್ಯ, ಉಪಾಧ್ಯಕ್ಷ ಮೇಕೇರಿರ ರವಿ ಪೆಮ್ಮಯ್ಯ ಹಾಗೂ ಪ್ರಧಾನ ಕಾರ್ಯದರ್ಶಿ ಬುಟ್ಟಿಯಂಡ ಎ. ಚಂಗಪ್ಪ ಉಪಸ್ಥಿತರಿದ್ದರು.