ಮಡಿಕೇರಿ, ಫೆ.11 : ಕಳೆದ ಆಗಸ್ಟ್ ತಿಂಗಳಿನಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದ 130 ವಿದ್ಯಾರ್ಥಿಗಳಿಗೆ ಈಗಾಗಲೇ ಉಚಿತ ಶಿಕ್ಷಣ ನೀಡುತ್ತಿರುವ ಪೊನ್ನಂಪೇಟೆ ಸಾಯಿ ಶಂಕರ ವಿದ್ಯಾ ಸಂಸ್ಥೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಇನ್ನೂ 50 ಮಂದಿಗೆ ಉಚಿತ ಶಿಕ್ಷಣ ನೀಡಲು ನಿರ್ಧರಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಕೋಳೇರ ಝರು ಗಣಪತಿ ಅವರು, ಸಾಯಿ ಶಂಕರ ವಿದ್ಯಾಸಂಸ್ಥೆ ಪ್ರತೀ ವರ್ಷ ಶೇ.25ರಷ್ಟು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಾ ಬರುತ್ತಿದ್ದು, ಕಳೆದ ಆಗಸ್ಟ್ ತಿಂಗಳಿನಲ್ಲಿ ಉತ್ತರ ಕೊಡಗಿನಲ್ಲಿ ಸುರಿದ ಮಹಾಮಳೆಗೆ ಸಂತ್ರಸ್ತರಾದ 130 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಊಟ ವಸತಿಯನ್ನು ದಾನಿಗಳ ನೆರ ವಿನಿಂದ ನೀಡಲಾಗುತ್ತಿದೆ ಎಂದರು.ಇದೀಗ ಸಂಸ್ಥೆಯ ವತಿಯಿಂದ ಪ್ರಕೃತಿ ವಿಕೋಪ (ಮೊದಲ ಪುಟದಿಂದ) ಪೀಡಿತ ಪ್ರದೇಶಗಳಿಗೆ ತೆರಳಿ ಪರಿಶೀಲಿಸಿದ ಸಂದರ್ಭ ಅಲ್ಲಿನ ಸಂತ್ರಸ್ತರು ತಮ್ಮ ಬದುಕನ್ನು ಸಹಜ ಸ್ಥಿತಿಗೆ ತರಲು ಇನ್ನೂ ಹಲವು ವರ್ಷಗಳೇ ಬೇಕಾಗಬಹುದಾದ ಸನ್ನಿವೇಶ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಇನ್ನೂ 50 ಮಂದಿ ಸಂತ್ರಸ್ತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲು ಚಿಂತನೆ ನಡೆಸಿದೆ ಎಂದು ವಿವರಿಸಿದರು.

ಸಂಸ್ಥೆಯಲ್ಲಿ ಈಗಾಗಲೇ ಕೊಡಗು ಮಾತ್ರವಲ್ಲದೆ ಹೊರ ಜಿಲ್ಲೆ ಮತ್ತು ರಾಜ್ಯಗಳಿಂದಲೂ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಉಚಿತ ಶಿಕ್ಷಣ ಪಡೆಯಲು ಇಚ್ಛಿಸುವ ಇತರ ವಿದ್ಯಾರ್ಥಿಗಳಿಗೆ ತಾ.24ರಂದು ಪ್ರವೇಶ ಪರೀಕ್ಷೆ ನಡೆಸಲಾಗುವದು ಎಂದು ನುಡಿದರು.

ಮುಂದಿನ ಸಾಲಿನಲ್ಲಿ ಒಂದನೇ ತರಗತಿ, 6ನೇ ತರಗತಿ ಹಾಗೂ 8ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ನಿಟ್ಟಿನಲ್ಲಿ ಈ ಪ್ರವೇಶ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ವಸತಿ ಶುಲ್ಕವನ್ನು ಮಾತ್ರ ಪಾವತಿಸಿ ಉಚಿತ ಶಿಕ್ಷಣ ಪಡೆಯಬಹುದು. ಇದರಲ್ಲಿ ಜಾತಿ, ಮತ ಭೇದವಿಲ್ಲದೆ ಎಲ್ಲಾ ವರ್ಗದ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ ಎಂದು ಝರು ಗಣಪತಿ ತಿಳಿಸಿದರು. ಪ್ರವೇಶ ಪರೀಕ್ಷೆ ಹಾಗೂ ಶಿಕ್ಷಣ ಸಂಸ್ಥೆಯ ಕುರಿತಾದ ಮಾಹಿತಿಗಾಗಿ ಆಸಕ್ತರು ಮೊಬೈಲ್ 8762237933 ಹಾಗೂ 9481630272ನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.

ಸಂಸ್ಥೆಯ ಕಾರ್ಯದರ್ಶಿ ಅರಮಣಮಾಡ ಸತೀಶ್ ದೇವಯ್ಯ ಮಾತನಾಡಿ, ವಿದ್ಯಾಸಂಸ್ಥೆ ನಡೆಸುತ್ತಿರುವ ವಸತಿ ನಿಲಯಕ್ಕೆ ಸರಕಾರದ ವತಿಯಿಂದ ಅಡುಗೆಯವರನ್ನು ನೇಮಕ ಮಾಡುವ ಬಗ್ಗೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್‍ನೊಂದಿಗೆ ಮಾತುಕತೆ ನಡೆಸಲಾಗಿದೆ. ಒಂದು ವೇಳೆ ಜಿಲ್ಲಾಡಳಿತ ಈ ಸೌಲಭ್ಯವನ್ನು ಕಲ್ಪಿಸಿದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ 10 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲು ಸಂಸ್ಥೆ ಮುಂದಾಗಲಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪದವಿ ಕಾಲೇಜು ಪ್ರಾಂಶುಪಾಲೆ ಬೊಟ್ಟಂಗಡ ದಶಮಿ ಹಾಗೂ ಆಡಳಿತ ಮಂಡಳಿ ಸದಸ್ಯೆ ಅಪ್ಪಾರಂಡ ಸುಮನಾ ಹಾಜರಿದ್ದರು.