ಮಡಿಕೇರಿ, ಫೆ. 10: ಸೂರ್ಲಬ್ಬಿ ನಾಡಿನ ಶ್ರೀ ಸುಬ್ರಹ್ಮಣ್ಯ ಹಾಗೂ ಶ್ರೀ ಮಂಜುನಾಥ ದೇವರ ವಾರ್ಷಿಕೋತ್ಸವಕ್ಕೆ ಚಾಲನೆ ಲಭಿಸಿದೆ. ತಾ. 1ರಂದು ಹಬ್ಬದ ಕಟ್ಟುಬೀಳುವದರೊಂದಿಗೆ ತಾ. 8ರಂದು ಪಟ್ಟಣಿ ಉತ್ಸವದೊಂದಿಗೆ ಬೊಳಕಾಟ್ ಆರಂಭಗೊಂಡಿದೆ. ತಾ. 10ರಿಂದ ನಿತ್ಯ ಬೆಳಗಿನ ಜಾವ ದುಡಿಪಾಟ್ ಸಹಿತ ಬೊಳಕಾಟ್ ವಿಶೇಷಪೂಜೆ ಸುಬ್ರಹ್ಮಣ್ಯ ಸನ್ನಿಧಿಯಲ್ಲಿ ಮುಂದುವರಿದಿದೆ. ತಾ. 14ರಂದು ದೊಡ್ಡ ಹಬ್ಬದೊಂದಿಗೆ ಎತ್ತು ಪೋರಾಟ, ಬೊಳಕಾಟ್, ದರ್ಶನದೊಂದಿಗೆ ಹರಕೆ ಕಾಣಿಕೆ ಸಲ್ಲಿಸಲಾಗುವದು. ಮಹಾಪೂಜೆ ಬಳಿಕ ಅನ್ನದಾನ ಜರುಗಲಿದೆ. ತಾ. 15ರ ಬೆಳಗ್ಗಿನ ಜಾವ ಮಹಾಪೂಜೆ ಬೊಳಕಾಟ್ ಸೇವೆಯೊಂದಿಗೆ ಹರಕೆ ಸಲ್ಲಿಕೆ; ಮಡೆಸ್ನಾನ ಇತ್ಯಾದಿ ಬಳಿಕ ತೆಂಗೆಪೋರ್‍ನೊಂದಿಗೆ ಈಡುಗಾಯಿ ಸೇವೆ ಜರುಗಲಿದೆ. ತಾ. 16ರಂದು ಮುಟ್ಲು ಶ್ರೀ ಮಂಜುನಾಥ ಸನ್ನಿಧಿಯಲ್ಲಿ ವಾರ್ಷಿಕ ಪೂಜೆಯೊಂದಿಗೆ, ಹರಕೆ ಕಾಣಿಕೆ ಸಲ್ಲಿಕೆ, ಅನ್ನದಾನ, ಕೋಲಾಟದೊಂದಿಗೆ ಹಬ್ಬದ ಕಟ್ಟು ಸಡಿಲಿಸುವ ಮೂಲಕ ಉಭಯ ದೇವರ ವಾರ್ಷಿಕೋತ್ಸವಕ್ಕೆ ತೆರೆ ಬೀಳಲಿದೆ.