ಕುಶಾಲನಗರ, ಫೆ 11: ಕುಶಾಲನಗರವನ್ನು ಕೇಂದ್ರವಾಗಿಸಿಕೊಂಡು ಕಾವೇರಿ ತಾಲೂಕು ರಚನೆಗೆ ಆಗ್ರಹಿಸಿ ಕಾವೇರಿ ತಾಲೂಕು ಹೋರಾಟ ಕೇಂದ್ರ ಸಮಿತಿ ಕರೆ ನೀಡಿದ್ದ ಕುಶಾಲನಗರ ಬಂದ್‍ಗೆ ವರ್ತಕರು ವ್ಯಾಪಾರ ವಹಿವಾಟು ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಿದರೆ, ವಾಹನ ಸಂಚಾರ ಮಾತ್ರ ನಿರಾತಂಕವಾಗಿ ಕಂಡುಬಂತು.ಚೇಂಬರ್ ಆಫ್ ಕಾಮರ್ಸ್ ಕುಶಾಲನಗರ ಸ್ಥಾನೀಯ ಸಮಿತಿ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದ್ದ ಪರಿಣಾಮ ಸಂಜೆ ತನಕ ಪಟ್ಟಣ ವ್ಯಾಪ್ತಿಯಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿದ್ದವು. ಸರಕಾರಿ ಕಚೆÉೀರಿ, ಬ್ಯಾಂಕುಗಳು, ಅಂಚೆ ಕಛೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದ ದೃಶ್ಯ ಗೋಚರಿಸಿತು. ಸರಕಾರಿ ಬಸ್‍ಗಳು ಎಂದಿನಂತೆ ಸಂಚಾರದಲ್ಲಿ ತೊಡಗಿಕೊಂಡು ಪ್ರಯಾಣಿಕರಿಗೆ ಯಾವದೇ ತೊಂದರೆ ಉಂಟಾಗಿಲ್ಲ. ಸರಕಾರಿ ಬಸ್ ನಿಲ್ದಾಣದ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ವಹಿವಾಟು ಎಂದಿನಂತೆ ನಡೆದವು.ಆಟೋ ಚಾಲಕರು ಮಾಲೀಕರ ಸಂಘ ಬಂದ್‍ಗೆ ಬೆಂಬಲ ಘೋಷಿಸಿದ್ದರೂ ಬಹುತೇಕ ಆಟೋಗಳು ಬೆಳಗಿನಿಂದಲೇ ಪ್ರಯಾಣಿಕರನ್ನು ಒಯ್ಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬಂದ್ ಆಯೋಜಕರು ಜಿಲ್ಲೆಯ ಗಡಿಭಾಗ ಕೊಪ್ಪ ಕಾವೇರಿ ಸೇತುವೆ ಬಳಿ ಸಂಚರಿಸುತ್ತಿದ್ದ ಆಟೋಗಳನ್ನು ಬಲತ್ಕಾರವಾಗಿ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುತ್ತಿದ್ದ ಘಟನೆಗಳು ನಡೆದವು. ಈ ಸಂದರ್ಭ ಪೊಲೀಸರು ಮಧ್ಯಪ್ರವೇಶಿಸಿ ವಾಹನ ಸಂಚಾರಕ್ಕೆ ತಡೆಯೊಡ್ಡದಂತೆ ಪ್ರತಿಭಟನಾಕಾರರಿಗೆ ಸೂಚನೆ ನೀಡಿದ ಹಿನೆÀ್ನಲೆಯಲ್ಲಿ ವಾಹನ ಸಂಚಾರಕ್ಕೆ ಯಾವದೇ ಅಡ್ಡಿಯಾಗಲಿಲ್ಲ.
ಮಧ್ಯಾಹ್ನ 12 ಗಂಟೆಗೆ ಸಿಸಿಎಲ್ ಪೆಟ್ರೋಲ್ ಬಂಕ್ ಬಳಿ ಸ್ವಲ್ಪಕಾಲ ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ತಾಲೂಕು ರಚನೆಗೆ ಆಗ್ರಹಿಸಿ ಘೋಷಣೆ ಕೂಗಿದರು. ಈ ಸಂದರ್ಭ ಮಾತನಾಡಿದ ತಾಲೂಕು ಹೋರಾಟ ಸಮಿತಿ ಸಂಚಾಲಕ ವಿ.ಪಿ.ಶಶಿಧರ್, ಕಾವೇರಿ ತಾಲೂಕು ತಕ್ಷಣ ಘೋಷಣೆ ಆಗಬೇಕು. ಈ ನಿಟ್ಟಿನಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಗಮನಹರಿಸಬೇಕು ಎಂದು ಆಗ್ರಹಿಸಿದರು.
ನಂತರ ಮುಖ್ಯರಸ್ತೆಯಲ್ಲಿ ಮೆರವಣಿಗೆ ಮೂಲಕ ಸಾಗಿ ಬಂದ ಪ್ರತಿಭಟನಾಕಾರರು ಮಾರ್ಗದುದ್ದಕ್ಕೂ ತಾಲೂಕು ರಚನೆಯ ಘೋಷಣೆ ಗಳನ್ನು ಕೂಗಿದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಯೂ ಕೂಡ ಕೆಲಕಾಲ ಘೋಷಣೆಗಳನ್ನು ಕೂಗಿ ಸರಕಾರಕ್ಕೆ ತಮ್ಮ ಆಗ್ರಹ ವ್ಯಕ್ತಪಡಿಸಿದರು. ಕುಶಾಲನಗರ ವಕೀಲರ ಸಂಘ ನ್ಯಾಯಾಲಯ ಕಲಾಪ ಬಹಿಷ್ಕರಿಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ದರು. ಕಾವೇರಿ ಲಾರಿ ಮಾಲೀಕರ ಸಂಘ, ಬೀದಿ ಬದಿ ವ್ಯಾಪಾರಿಗಳ ಒಕ್ಕೂಟ, ಎಸ್‍ಡಿಪಿಐ ಮತ್ತಿತರ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದವು.
(ಮೊದಲ ಪುಟದಿಂದ) ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ತಾಲೂಕು ಹೋರಾಟ ಕೇಂದ್ರ ಸಮಿತಿ ಸಂಚಾಲಕ ವಿ.ಪಿ.ಶಶಿಧರ್, ತಾಲೂಕು ರಚನೆಗೆ ಬೇಕಾದ ಎಲ್ಲಾ ರೀತಿಯ ಅರ್ಹತೆ, ಮಾನದಂಡಗಳನ್ನು ಒಳಗೊಂಡ ಕುಶಾಲನಗರವನ್ನು ನೂತನ ತಾಲೂಕಾಗಿ ಘೋಷಿಸುವಲ್ಲಿ ಸರಕಾರಗಳು ಹಿಂದೇಟು ಹಾಕುತ್ತಿರುವದು ಜನರ ಆಕ್ರೋಶÀಕ್ಕೆ ಕಾರಣವಾಗಿದೆ. ಕೇವಲ 50 ಸಾವಿರ ಜನಸಂಖ್ಯೆ ಹೊಂದಿರುವ ರಾಜ್ಯದ ಪುಟ್ಟ ಪಟ್ಟಣಗಳು ತಾಲೂಕಾಗಿ ಘೋಷಣೆಗೊಳ್ಳುತ್ತಿವೆ. 1 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ, ಸರಕಾರದ ಬೊಕ್ಕಸವನ್ನು ತುಂಬಿಸಲು ಸಮರ್ಥವಾಗಿರುವ ಕುಶಾಲನಗರ ವನ್ನು ಪ್ರತಿ ಬಾರಿ ಸರಕಾರ ಕಡೆಗಣಿಸುತ್ತಿರುವದು ಅತ್ಯಂತ ನೋವು ತಂದಿದೆ. ಈಗಾಗಲೆ ಹಲವು ಬಾರಿ ಬೃಹತ್ ಜನಾಂದೋಲನ ರೂಪಿಸಿ ಈ ಭಾಗದ ಜನರ ಆಗ್ರಹವನ್ನು ಸರಕಾರಕ್ಕೆ ತಲುಪಿಸಲಾಗಿದೆ. ಜನಪ್ರತಿನಿಧಿಗಳ ಹಿತಾಸಕ್ತಿಯ ಕೊರತೆ ತಾಲೂಕು ರಚನೆಗೆ ಹಿನ್ನಡೆ ಉಂಟುಮಾಡುತ್ತಿದೆ ಎಂಬ ಗುಮಾನಿಯಿದೆ ಎಂದು ಸಂಶಯ ವ್ಯಕ್ತಪಡಿಸಿದರು. ಸಮಿತಿಯ ಪ್ರಮುಖ ಆರ್.ಕೆ. ನಾಗೇಂದ್ರಬಾಬು ಮಾತನಾಡಿ, 1993 ರಲ್ಲಿ ರಚನೆಗೊಂಡ ತಾಲೂಕು ಹೋರಾಟ ಸಮಿತಿ ಮೂಲಕ, ಈವರೆಗೆ ರಾಜ್ಯವನ್ನಾಳಿದ ಸರಕಾರಗಳಿಗೆ ತಾಲೂಕು ರಚನೆಗೆ ಮನವಿ ಸಲ್ಲಿಸಿದೆ. ಸಿದ್ದರಾಮಯ್ಯ ಅವರ ಅವಧಿಯಲ್ಲಿ ನೂತನ ತಾಲೂಕುಗಳ ಪಟ್ಟಿಯಲ್ಲಿ ಕುಶಾಲನಗರ ಸ್ಥಾನ ಪಡೆದಿದ್ದರೂ ಕೂಡ ತಾಲೂಕು ರಚನೆಗೊಳ್ಳಲಿಲ್ಲ ಎಂದರು.
ಪ್ರತಿಭಟನೆಯಲ್ಲಿ ಪಪಂ ಸದಸ್ಯರುಗಳಾದ ಜಯಲಕ್ಷ್ಮಿ, ಪ್ರಮೋದ್ ಮುತ್ತಪ್ಪ, ಶೇಖ್ ಖಲೀಮುಲ್ಲಾ, ಜಗದೀಶ್, ಅಮೃತ್‍ರಾಜ್, ತಾಲೂಕು ಹೋರಾಟ ಸಮಿತಿ ಪ್ರಮುಖರಾದ ಅಬ್ದುಲ್ ಖಾದರ್, ಎಂ.ವಿ. ನಾರಾಯಣ, ಜೋಸೆಫ್ ವಿಕ್ಟರ್ ಸೋನ್ಸ್, ಉಮಾಶಂಕರ್, ಕೆ.ಎನ್. ದೇವರಾಜ್, ಕೆ.ಬಿ.ರಾಜು, ರಾಜಶೇಖರ್, ಮುಸ್ತಾಫ, ಕರೀಂ, ನಂಜುಂಡಸ್ವಾಮಿ, ಡಿ.ವಿ.ರಾಜೇಶ್, ವಿ.ಪಿ.ನಾಗೇಶ್ ಮತ್ತಿತರರು ಇದ್ದರು.
ಡಿವೈಎಸ್ಪಿ ಪಿ.ಕೆ.ಮುರಳೀಧರ್ ನೇತೃತ್ವದಲ್ಲಿ ವೃತ್ತ ನಿರೀಕ್ಷಕರುಗಳಾದ ಮೇದಪ್ಪ, ಕುಮಾರ್ ಆರಾಧ್ಯ, ಕ್ಯಾತೆಗೌಡ, ನಂಜುಂಡೇಗೌಡ, ಠಾಣಾಧಿಕಾರಿಗಳಾದ ಜಗದೀಶ್, ಸೋಮೇಗೌಡ, ಶಿವಶಂಕರ್ ಮತ್ತು ಸಿಬ್ಬಂದಿ ಯಾವದೇ ಅಹಿತಕರÀ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದರು.
ಪ್ರತಿಭಟನೆಯಲ್ಲಿ ಸ್ಥಳೀಯ ಬಿಜೆಪಿ ಪ್ರಮುಖರು ಪಾಲ್ಗೊಳ್ಳದಿರುವದು ಕಂಡುಬಂತು. ನಗರ ಬಿಜೆಪಿ ವತಿಯಿಂದ ಇಂದು (12 ರಂದು) ತಾಲೂಕು ರಚನೆಗೆ ಆಗ್ರಹಿಸಿ ಗುಡ್ಡೆಹೊಸೂರಿನಿಂದ ಕುಶಾಲನಗರ ತನಕ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗುವದು ಎಂದು ಬಿಜೆಪಿ ನಗರಾಧ್ಯಕ್ಷ ಕೆ.ಜಿ.ಮನು ತಿಳಿಸಿದ್ದಾರೆ.